ADVERTISEMENT

ಅರ್ಥಬೀಜವ ಬಿತ್ತಿ ಬೆಳೆದ ಬೆಳೆ (ಕನ್ನಡಂಗಳ ಒಗಟುಗಳು)

ವಿಮರ್ಶೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2016, 14:44 IST
Last Updated 3 ಏಪ್ರಿಲ್ 2016, 14:44 IST
ಅರ್ಥಬೀಜವ ಬಿತ್ತಿ ಬೆಳೆದ ಬೆಳೆ (ಕನ್ನಡಂಗಳ ಒಗಟುಗಳು)
ಅರ್ಥಬೀಜವ ಬಿತ್ತಿ ಬೆಳೆದ ಬೆಳೆ (ಕನ್ನಡಂಗಳ ಒಗಟುಗಳು)   

ಕನ್ನಡಂಗಳ ಒಗಟುಗಳು
ಸಂ: ಪ್ರೊ. ಬೋಳಾರ ಶಿವರಾಮ ಶೆಟ್ಟಿ, ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೂ 50, ಕರ್ನಾಟಕ ಸರ್ಕಾರ, ಬೆಂಗಳೂರು.


ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್... ಎಂಬಲ್ಲಿನ ಭಾಷಿಕ ನಕಾಶೆಯೊಂದನ್ನು  ಬಿಡಿಸುವ ಪ್ರಯತ್ನವನ್ನು ಕುರಿತು ಕನ್ನಡದ ವಿವೇಚನೆಯು ಈವರೆಗೆ ಅನೇಕ ವಿಶ್ಲೇಷಣೆಗಳನ್ನು ನೀಡಿದೆ. ಇಂತಹ ನಕಾಶೆಯೊಂದರಲ್ಲಿ ಎಳೆಯುತ್ತಿರುವ ಗಡಿಗೆರೆಗಳು ಏನು ಪರಿಣಾಮ ಉಂಟುಮಾಡುತ್ತವೆ? ಇದು ತುಂಬಾ ಸಂಕೀರ್ಣವಾದ ಪ್ರಶ್ನೆ.

ಈ ಗೆರೆಗಳ ಉದ್ದೇಶ ಬೇರ್ಪಡಿಸುವದೋ, ಸೇರ್ಪಡಿಸುವುದೋ? ಇದೊಂದು ರೀತಿಯಲ್ಲಿ ಸ್ಥಳೀಯತೆಯನ್ನು ವೈಶ್ವಿಕತೆಯೊಡನೆ ಬೆಸೆವ ಪ್ರಯತ್ನವೆಂದೂ, ಹಾಗೆ ಬೆಸೆದೂ ತನ್ನತನವನ್ನು ಕಾಪಾಡಿಕೊಳ್ಳುವ ‘ವಸುಧಾವಲಯವಿಲೀನವಿಷದವಿಷಯವಿಶೇಷ’ವೆಂದೂ ಮಾರ್ಗಕಾರ ಸ್ಪಷ್ಟಪಡಿಸುತ್ತಾನೆ.

ಕನ್ನಡವೆನ್ನುವುದು ಹಲವು ಕನ್ನಡಂಗಳ ಸಮುಚ್ಛಯವೆಂಬ ನಿಲುವು ಈ ನಕಾಶೆಯ ಪ್ರಯತ್ನದ ಹಿಂದೆ ಇದೆ. ಅನೇಕಗಳು ಅನೇಕಗಳಾಗುತ್ತಲೇ ಹೋಗುವ ಭಾಷೆಯ ನಡೆಯನ್ನು ಹಿಡಿಯಲು ಜನಪದದೊಳಗೆ ಓಡಾಡಬೇಕು. ಪ್ರೊ. ಬಿ. ಶಿವರಾಮ ಶೆಟ್ಟಿ ಅವರ ಒಗಟುಗಳ ಸಂಪಾದನೆಯ ಈ ಕೃತಿ ಮೊದಲಿಗೆ ಬಹು ಕನ್ನಡಗಳ ಸಮೃದ್ಧಿಯನ್ನು ಪರಿಚಯಿಸುತ್ತದೆ.

ಈ ಸಂಪಾದನೆಯ ವೈಧಾನಿಕತೆಯ ಹಿಂದೆ ಇರುವ ಉದ್ದೇಶವನ್ನು ಸಂಪಾದಕರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಪ್ರಕಟಗೊಂಡಿರುವ  ಒಗಟುಗಳ ಸಂಕಲನಗಳು ಕರ್ನಾಟಕದ ಯಾವುದಾದರೊಂದು ಪ್ರಾಂತೀಯ ಭಾಷೆ, ಸಂಸ್ಕೃತಿಯನ್ನು ಪ್ರತಿನಿಧಿಸುವ ಸ್ವರೂಪದಲ್ಲಿವೆ.  ಉತ್ತರ ಕರ್ನಾಟಕದ ನಿರ್ದಿಷ್ಟ ಪ್ರದೇಶವೊಂದರ ಒಗಟುಗಳನ್ನು ಸಂಗ್ರಹಿಸುವಾಗ ಅಲ್ಲಿನ ಭಾಷೆ ಮತ್ತು ಸಂಸ್ಕೃತಿ ಸಹಜವಾಗಿ ಬಿಂಬಿತವಾಗುತ್ತದೆ. ಇಂತಹ ಅನೇಕ ಸಂಪಾದನೆಗಳು ಈಗಾಗಲೇ ನಮ್ಮ ನಡುವೆ ಇವೆ.

ಕನ್ನಡದ ಜೀವನಾಡಿಯಾದ ಈ ವೈವಿಧ್ಯವನ್ನು ಒಟ್ಟುಮಾಡಿ ಕೊಡುವಾಗ ಪ್ರಮಾಣೀಕೃತ ಏಕರೂಪೀ ಕನ್ನಡದ ಬದಲು ಭಾಷಿಕ, ಪ್ರಾದೇಶಿಕ, ಸಾಂಸ್ಕೃತಿಕ ನೆಲೆಗಳಲ್ಲಿ ನಾನಾ ರೂಪಗಳಲ್ಲಿರುವ ಬಹುರೂಪೀ, ವೈವಿಧ್ಯದ ‘ಕನ್ನಡಂಗಳ’ ಸ್ವರೂಪವನ್ನು ಪ್ರತಿನಿಧಿಸುವಂತಹ ವಿಧಾನವನ್ನು ಈ ಸಂಪಾದನೆಗೆ ಒದಗಿಸಿಕೊಳ್ಳಲಾಗಿದೆ.

ಕನ್ನಡದ ಬಹುತ್ವದ ಸೊಬಗನ್ನು ಭಾಷಿಕ ಸಾಂಸ್ಕೃತಿಕ ಪ್ರಾಂತೀಯ ನಕಾಶೆಯೊಂದನ್ನು ಅನಾವರಣಗೊಳಿಸುವ ನೆಲೆಯಲ್ಲಿ ಒಗಟುಗಳನ್ನು ಸಂಪಾದಿಸಿ ಸಂಕಲಿಸುವುದು ತಾತ್ವಿಕ ಹಾಗೂ ವೈಧಾನಿಕತೆಯ ನೆಲೆಯಲ್ಲಿ ಹೆಚ್ಚು ಸಮಂಜಸವಾದುದು.  ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಭಾಷೆ ಎಂದೆನ್ನುವ ಸಾಂಪ್ರದಾಯಿಕ ಸೀಮೆ ಅಥವಾ ಪ್ರಾಂತೀಯ ಪ್ರತಿನಿಧೀಕರಣದ ನೆಲೆಯಲ್ಲಿ ಕನ್ನಡಂಗಳ ಒಗಟುಗಳನ್ನು ಸಂಪಾದಿಸಲಾಗಿದೆ. ಉದಾಹರಣೆಗೆಂದು ಅಡಿಕೆ ಮರವನ್ನು ಕುರಿತ ಒಗಟುಗಳನ್ನು ಗಮನಿಸಬಹುದು

ಅಬ್ಬೆ ಪಾತಾಳಾ ಅಪ್ಪಾ ಆಕಾಶಾ
ಮಗಾ ಯಾಪಾರಿ ಮಗು ಸುಂದರಿ
ಅಪ್ಪೋತ್ಯಾ ಆಕಾಸ್ಕೆ
ಅವ್ವೋತೀದ್ಮುದೀಕೆ
ಅಣ್ಣೋತ್ಯಾ ಅಂಗ್ಡೀಗೆ

ಅಮ್ಮ ಅಂಬಾರಕೆ
ಅಪ್ಪ ಪಾತಾಳಕೆ
ಅಣ್ಣ ಪೇಟೆಗೆ
ಅಕ್ಕ ಮದುವೆಗೆ

ADVERTISEMENT

ತಳ್ಳರು ಗೌಡನ ಹೆಂಡ್ತಿ
ತೋಡೇಲಿ ಬಸುರಾಯ್ತಳೆ

ಅಪ್ಪಾ ಉದ್ದಣಾ ಅವ್ವೆ ಸಿಂಗಾರ್ಸೂಳೆ
ಮಗಾ ಗುಡ್ಗುಡ್ಕೆಂಪಣ್ಣಾ

ಒಂಟ್ ಕಾಲ್ ಪಕ್ಷಿ ಒಂಭೈನೂರು ತತ್ತಿ
(ಅಡಕೆ ಮರ )

ಮಾತೊಂದು ಏಕಕಾಲಕ್ಕೆ ಪ್ರಶ್ನೆ ಉತ್ತರ ಎರಡೂ ಆಗಿ ಇರುವ ಅನ್ಯಾದೃಶ ಸಾಧ್ಯತೆಯನ್ನು ಒಗಟುಗಳು ಮುಂದಿಡುತ್ತವೆ. ಅದೊಂದು ತಾರ್ಕಿಕ ಆಟ. ಸಾಮಾನ್ಯ ತರ್ಕ ಮತ್ತು ಭಾಷಾನಿಯಮಗಳನ್ನು ಮುರಿದಿಕ್ಕಿ ಅರ್ಥವನ್ನು ಹೊಸದಾಗಿ ಸೃಜಿಸುವ ಮೂಲಕ ರೂಪಕ ಶಕ್ತಿಯನ್ನು ಉದ್ದೀಪಿಸುವ ಕ್ರಮ. ಮೇಲ್ನೋಟಕ್ಕೆ ಸಾದೃಶ್ಯವನ್ನು ಕಂಡುಕೊಳ್ಳುವ ಆಟದಂತೆ ಗೋಚರವಾದರೂ ಇದು ಭಾಷಿಕ ಹಿಂಪಯಣವನ್ನು ಪ್ರಚೋದಿಸುವುದರ ಮೂಲಕ ಶಬ್ದ ಮತ್ತು ಅರ್ಥಗಳ ಸಂಬಂಧವನ್ನು ಮುರಿದು ಕಟ್ಟುವ ಸಾಧ್ಯತೆಗಳನ್ನು ತೆರೆಯುತ್ತದೆ.

ಜನಪದ ಸಾಹಿತ್ಯದ ಸಂಪಾದನೆಯಲ್ಲಿ ಅನೇಕ ವಿಧಾನಗಳನ್ನು ಜನಪದ ವಿದ್ವಾಂಸರು ಈವರೆಗೆ ಅನುಸರಿಸಿದ್ದಾರೆ. ಈ ಒಗಟುಗಳ ಸಂಪಾದನೆಗೆ ಸೋಲೋಮನ್ ದ್ವೀಪದ ಲಾವೋ ಜನಾಂಗದ ಒಗಟುಗಳನ್ನು ಸಂಪಾದಿಸಿದ ಮರಾಂಡ ಅವರ ವಿಧಾನವನ್ನು ಅನುಸರಿಸಲಾಗಿದೆ. ಈ ವಿಧಾನದ ವಿಶೇಷವೆಂದರೆ ಒಗಟನ್ನು ಒಡ್ಡುವ ಪ್ರಶ್ನೆ ಮತ್ತು ಶೋಧಿಸುವ ಉತ್ತರವೆಂದು ಎರಡು ಭಿನ್ನ ಆಯಾಮಗಳಲ್ಲಿ ಗ್ರಹಿಸದೆ, ಪ್ರಶ್ನೆ ಮತ್ತು ಉತ್ತರವನ್ನು ಒಳಗೊಂಡ ಸಮಗ್ರ ರಚನೆಯನ್ನಾಗಿ ಗ್ರಹಿಸಿ ಸಂಪಾದಿಸಲಾಗಿದೆ.

ಒಡಚುವ ಕತೆ– ಭಾಷೆಯ ಸಿಪ್ಪೆಯನ್ನು ಸುಲಿದು ನೋಡಲು ಪ್ರೇರೇಪಿಸುತ್ತದೆ. ಅರ್ಥವನ್ನು ಪಡೆಯಲು ಯಾಕೆ ಹಾಗೆ ಭಾಷಾ ಸಂಕೇತಗಳ ಸಿಪ್ಪೆ ಸುಲಿಯಬೇಕು? ಎದುರಿಗೆ ಇಟ್ಟ ಭಾಷಾ ಸಂಕೇತವು ತೆರೆಯುವ ಅನೇಕ ಅರ್ಥ ಸಾಧ್ಯತೆಗಳನ್ನು ಪರಿಶೀಲಿಸಲು ಅದು ಪ್ರೇರೇಪಿಸುತ್ತದೆ. ನೀವು ಕೇಳಿಸಿಕೊಳ್ಳುತ್ತಿರುವ ಮಾತೆಂಬುದು ನೀವು ಕೇಳಿಸಿಕೊಂಡ ಹಾಗೇ ಇರಬೇಕಿಲ್ಲ.

ಅದರ ಹಿಂದಿರುವ ಮೌನ, ಅದನ್ನು ನುಡಿಯುತ್ತಿರುವವನು ನೀವು ಹೇಗೆ ಕೇಳಿಸಿಕೊಳ್ಳಲಿ ಎಂದು ಬಯಸುತ್ತಿದ್ದಾನೆ ಮತ್ತು ಅವನ ಮನದಾಳವನ್ನು ತೆರೆಯಲು ಈ ಮಾತನ್ನು ಬಳಸುತ್ತಿದ್ದಾನೋ, ಮುಚ್ಚಿಡಲು ಬಳಸುತ್ತಿದ್ದಾನೋ? ಬಳಸುತ್ತಿರುವ ಮಾತು ನಿಜವನ್ನು  ಪ್ರಕಾಶಿಸಲು ಕಟ್ಟಲ್ಪಡುತ್ತಿದೆಯೋ, ನಿಜವನ್ನು ಅಡಗಿಸಲು ಬಳಸಲ್ಪಡುತ್ತಿದೆಯೋ? ಈ ಎಲ್ಲವೂ ಇದಿರಿಗೆ ನಿಲ್ಲುವುದರಿಂದ ಅದನ್ನು ‘ಒಡೆದು’ ನೋಡಬೇಕಿದೆ.

ಯಾಕೆಂದರೆ ಅರ್ಥವನ್ನು ಕಟ್ಟಲು ಯಾವ ಭಾಷೆಯನ್ನು ಬಳಸುತ್ತಿರುತ್ತೇವೆಯೋ ಅದೇ ಭಾಷೆಯನ್ನು ಅರ್ಥ ಮುಚ್ಚಿಡಲೂ ಕೂಡ ಬಳಸುತ್ತೇವೆ. ಒಗಟುಗಳು ನುಡಿಯೊಂದಕ್ಕೆ ಒಂದೇ ಅರ್ಥವೆನ್ನುವ ನಿಲುವನ್ನು ತೀವ್ರವಾಗಿ ಪ್ರಶ್ನಿಸುತ್ತವೆ. ಒಗಟೊಂದನ್ನು ಒಡ್ಡಿದಾಗ ಅದು ತೆರೆಯುವ ಅನೇಕ ಅರ್ಥಗಳ ಮೆರವಣಿಗೆಯೇ ಹೊರಡುತ್ತದೆ. ಒಂದೊಂದನ್ನೇ ತಡೆದು ನೋಡುತ್ತೇವೆ. ಅನೇಕ ಕಿಡಿಗೇಡಿ ದ್ವಂದ್ವಾರ್ಥಗಳನ್ನೂ ಮೆರವಣಿಗೆಗೆ ತೂರಿಸಿಬಿಟ್ಟು ಆಟ ನೋಡುತ್ತಾರೆ!

ಬುಡ್ಡು ಹುಡುಗಿ ಗುದ್ದಿದರೆ ಮನೆ ತುಂಬ ಮಕ್ಕಳು  
(ಬೆಳ್ಳುಳ್ಳಿ)

ಕುಬಸಾ ಕಳಿ
ಖೋಲ್ಯಾಗ ನಡಿ 
(ಬಾಳೆ ಹಣ್ಣು)

ಬಡ ಬಡ ಬಂದಾ
ಅಂಗೀ ಕಳದಾ
ಬಾವ್ಯಾಗ ಇಳಿದಾ  
(ಬಾಳೆ ಹಣ್ಣು)

ಕಶಾಲ ಮೂಳಾ ಕುಬಸಾ ಹರದಿ
ಅಲ್ಲದ ಮೂಳಾ ಗಲ್ಲಾ ಕಡದಿ
ಸಿಟ್ಟಿನ ಮೂಳಾ ಬಟ್ಟಿ ಹರದಿ 
(ಬಾಳೆ ಹಣ್ಣು – ಪೇರಲ ಹಣ್ಣು – ಗಜ್ಜರಿ)

ಮಾತನಾಡುವುದು ಯಾವಾಗ
ಎದುರಿಗೆ ಕುಳಿತಾಗ
ಅಳೋದು ಕರೆಯೋದು ಯಾವಾಗ
ಅರ್ಧಂಬರ್ಧ ಒಳಗೆ ಹೋದಾಗ
ನಗೋದು ನೆಗೆಯೋದು ಯಾವಾಗ
ಪೂರ್ತಿ ಒಳಗೆ ಹೋದಾಗ
(ಬಳೆ ತೊಡಿಸುವುದು)

ಭಾಷೆಯಂತೆಯೇ ನಾವು ನಿತ್ಯ ಬಳಸುವ ಇನ್ನೊಂದು ಮಾಧ್ಯಮ ತರ್ಕ. ಇದೂ ಅಷ್ಟೆ– ಯಾವುದನ್ನು ನಾವು ಬಳಸಿ ಕಟ್ಟುತ್ತೇವೆಯೋ ಅದನ್ನು ದಾಟಿ ನೋಡಲು ಅದೇ ಪ್ರೇರೇಪಿಸುತ್ತದೆ. ಹೀಗೆ ಭಾಷೆಯನ್ನು ಅದರ ಮೂಲಕವೇ ದಾಟುವ, ತರ್ಕವನ್ನು ಅದರ ಮೂಲಕವೇ ದಾಟುವ ಕ್ರಮವಿದೆ. ಭಾಷೆಯ ಪ್ರಾಥಮಿಕ ಉದ್ಯೋಗವೇ ಸಂರಚನೆ. ಹೀಗೆ ಅರ್ಥ ಕಟ್ಟುವ ಉದ್ಯೋಗಕ್ಕೆ ಅದು ಬಳಸುವ ಶಾಬ್ದಿಕ ಸಂಕೇತಗಳು ಮತ್ತು ಕಟ್ಟಿದ ಅರ್ಥ ಶಾಶ್ವತವೆಂಬ ಭ್ರಮೆಯನ್ನು ಮೂಡಿಸುತ್ತವೆ. ಈ ಭ್ರಮೆಯನ್ನು ಒಡೆದು ಅರ್ಥದ ಉದ್ಯೋಗವನ್ನು ನಿರಂತರ ಹರಿಯುವ ಪ್ರಕ್ರಿಯೆಯನ್ನಾಗಿಸಲು ಒಗಟುಗಳು ದುಡಿಯುತ್ತವೆ. ಇದು ಕೇವಲ ಭಾಷಿಕ ಸಮಸ್ಯೆ ಅಲ್ಲ; ಬದಲಿಗೆ ಅದೊಂದು ತತ್ವಶಾಸ್ತ್ರೀಯ ಸಮಸ್ಯೆಯೂ ಹೌದು.

ಯಾವುದಾದರೊಂದು ಸಂಗತಿಗೆ ನಾಮರೂಪ ಪ್ರದಾನವಾದಾಕ್ಷಣ ಅದು ಸ್ಥಿತ ಶಾಶ್ವತ ಸಂರಚನೆಯೆಂಬ ಭ್ರಮೆ ಮೂಡುತ್ತದೆ. ಭಾಷೆಯ ಗುಣವೇ ಅದು. ಈ ಗುಣವನ್ನು ನಿರಾಕರಿಸಿ ಭಾಷೆಯನ್ನು ಬಳಸಿಕೊಳ್ಳಲು ಮಾಡುವ ಪ್ರಯತ್ನವನ್ನಾಗಿಯೂ ಒಗಟುಗಳನ್ನು ನೋಡುವ ಇಂಗಿತವಿದೆ. ಇದೆ ಎಂದುಕೊಳ್ಳುವ ಪ್ರತ್ಯಕ್ಷ ಮತ್ತು ತರ್ಕಪ್ರಮಾಣ, ಇಲ್ಲವೆಂದುಕೊಳ್ಳುವ ಅನುಪಲಬ್ಧ ಪ್ರಮಾಣ ಇವುಗಳ್ಯಾವೂ ಆತ್ಯಂತಿಕ ಸತ್ಯವಲ್ಲ. ಒಗಟು ಇವೆರಡೂ ಪ್ರಮಾಣಗಳನ್ನು ಪ್ರಯೋಗಿಸಿ ಅವೆರಡನ್ನು ದಾಟುವಂತೆ ಮಾಡುತ್ತದೆ. ಇದಕ್ಕೊಂದು ಸುಂದರ ಉದಾಹರಣೆ ಈ ಸಂಗ್ರಹದಲ್ಲಿದೆ:

ಅತ್ತೂರು ಹೆಣ್ಣಿಗೆ ನೆತ್ತೀಲಿ ಬಸಿರು
ಕಿತ್ತೂರು ಹೆಣ್ಣಿಗೆ ಮ್ಯಾತೇಲಿ ಬಸಿರು
ಮುಂಡೆ ಬಸಿರು ಮೊಳಕೈಯಲ್ಲಿ
(ನವಣೆ, ಜೋಳ, ರಾಗಿ)

‘ನವಣೆ ಬಸಿರಾಗುವುದು ನೆತ್ತಿಯಲ್ಲಿ, ಜೋಳ ಗರ್ಭ ಧರಿಸುವುದು ಮ್ಯಾತೆಯಲ್ಲಿ (ಗಂಟಲಿನ ಕೆಳಭಾಗ), ರಾಗಿಗೆ ಹೊಟ್ಟೆ ಬಂದಿರುವುದು ಮೊಳಕೈಯಲ್ಲಿ, ಜನಪದದ ಉತ್ಪಾದಕ ಆಹಾರ ಬೆಳೆಗಳಾದ ನವಣೆ, ಜೋಳ, ರಾಗಿ, ಒಗಟಿನ ಒಡಲಲ್ಲಿ ಉತ್ಪಾದಕ ಶಕ್ತಿಯಾಗಿರುವ ಹೆಣ್ಣಾಗಿ ರೂಪಾಂತರಗೊಂಡಿವೆ. ರಾಗಿಯ ಗರ್ಭವನ್ನು ‘ಮುಂಡೆ ಬಸಿರು’ ಎಂದಿರುವುದರಲ್ಲೂ ಔಚಿತ್ಯವಿದೆ. ರಾಗಿಯ ಪೈರು ನೆತ್ತಿಯಲ್ಲಿ ಗರ್ಭಾವಸ್ಥೆಗೆ ಬರುವ ಮುಂಚೆ ಕೆಲವು ಸಲ ದನಗಳನ್ನು ಬಿಟ್ಟು ಮೇಯಿಸುತ್ತಾರೆ.

(ಇದನ್ನು ಗರಿ ಮೇಯಿಸುವುದು ಎನ್ನುತ್ತಾರೆ) ನೆತ್ತಿ ಬೋಳಾಗಿ ಮೇಲೇರುತ್ತಿದ್ದ ಜೀವರಸ ಅತ್ತ ಇತ್ತ ನುಗ್ಗಿ ಕವಲುಗಳೊಡೆದು ಒಂದೊಂದು ಕವಲೂ ಗರ್ಭ ಧರಿಸುತ್ತದೆ. ಹೀಗೆ ಮಂಡೆ ಬೋಳಾಗಿ ಅಸಹಜವಾಗಿ ಗರ್ಭಧರಿಸುವವಳು ಮುಂಡೆಯಲ್ಲವೆ?’. ಇದೊಂದು ಒಗಟುಗಳ ಬೃಹತ್ತಾದ  ಸಂಕಲನ. ಇಲ್ಲಿನ ಎಲ್ಲ ಒಗಟುಗಳೂ ಜನಪದರ ಹತ್ತಾರು ಕಸುಬುಗಳನ್ನೆ ಉಸಿರಾಡಿವೆ. ನಮ್ಮ ಸುತ್ತಲಿನ ಗಿಡಮರ, ಪಶು ಪಕ್ಷಿಗಳೆಲ್ಲ ಸಮಾನವಾಗಿ ಪಾಲ್ಗೊಂಡಿವೆ.

ಪೊಳ್ಳು ಧಾರ್ಮಿಕತೆಯ ಅಬ್ಬರದ ನಡುವೆ ಕಸುಬು, ಶ್ರಮ, ನಿಸರ್ಗ ದನಿ ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಕಣ್ಣು, ಕಿವಿ ಮುಂತಾದ ಇಂದ್ರಿಯಗಳಿಗೆ ಚೈತನ್ಯ ಒದಗಿಸಲೆಂಬಂತೆ ಬಂದಿರುವ ಪುಸ್ತಕವೆಂದು ಇದನ್ನು ಪ್ರೀತಿಯಿಂದ ತೆರೆಯಬೇಕು. ಕರಾವಳಿಯ ಅನೇಕ ಜಾನಪದ ವಿದ್ವಾಂಸರು ಕನ್ನಡ ಮತ್ತು ತುಳು ಜಾನಪದ ಕ್ಷೇತ್ರದಲ್ಲಿ ಸ್ಮರಣೀಯ ಕೆಲಸ ಮಾಡಿದ್ದಾರೆ. ಪ್ರೊ. ಬಿ. ಶಿವರಾಮ ಶೆಟ್ಟಿ ಅವರ ಈ ಸಂಪಾದನೆ ಜಾನಪದ ಸಂಪಾದನಾ ವಿಧಾನದಲ್ಲಿ ಭಿನ್ನ ಮಾದರಿಯನ್ನು ಅನುಸರಿಸುವ ಮಾರ್ಗವನ್ನು ತೆರೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.