ADVERTISEMENT

ಮಹಾರಾಣಾ ಪ್ರತಾಪನ ಕಥೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 19:30 IST
Last Updated 2 ಡಿಸೆಂಬರ್ 2017, 19:30 IST
ಮಹಾರಾಣಾ ಪ್ರತಾಪನ ಕಥೆ
ಮಹಾರಾಣಾ ಪ್ರತಾಪನ ಕಥೆ   

ಬಲಿಷ್ಠ ಮೊಘಲ್‌ ಸೈನ್ಯದ ಎದುರು ಮಂಡಿಯೂರದೇ ವೀರಾವೇಶದಿಂದ ಹೋರಾಡಿದ ನಾಡಪ್ರೇಮಿ ಮಹಾರಾಣಾ ಪ್ರತಾಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?

ಆತ ಅಕ್ಬರನ ಸೈನ್ಯದ ಎದುರು ನಡೆಸಿದ ಹಲ್ದೀಘಾಟಿನ ಕದನವೆಂದೇ ಜನಜನಿತವಾದ ಯುದ್ಧದಲ್ಲಿ ಆತನ ಪರಾಕ್ರಮ, ರಣನೀತಿ, ಗೆರಿಲ್ಲಾ ಯುದ್ಧ ತಂತ್ರ, ಪ್ರತಾಪನ ಕುದುರೆ ಚೇತಕ್‌ನ ಸ್ವಾಮಿ ನಿಷ್ಠೆ... ಇವೆಲ್ಲವೂ ಡಾ.ಎಸ್‌. ಗುರುಮೂರ್ತಿ ಅವರು ಬರೆದ ‘ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌’ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ದಾಖಲಾಗಿವೆ.

‘ಪರಕೀಯರ ಅಧೀನವನ್ನು ಒಪ್ಪದ, ಪ್ರತಿಷ್ಠಿತ ಸಿಸೋದಿಯಾ ಮನೆತನದ ಘನತೆ ಗೌರವಗಳನ್ನು ಎತ್ತಿ ಹಿಡಿದ ಪ್ರತಾಪ ಮತ್ತು ದೊಡ್ಡ ಸಾಮ್ರಾಜ್ಯದ ಸಾಮ್ರಾಟ ಅಕ್ಬರ್‌ – ಇಬ್ಬರ ನಡುವಿನ ಘರ್ಷಣೆಯಂತೂ ರೋಮಾಂಚಕಾರಿಯಾಗಿದೆ. ಇಬ್ಬರ ಹೋರಾಟದ ಚಿತ್ರದ ನಾಟಕೀಯ ಸನ್ನಿವೇಶಗಳಿಂದಾಗಿ ಓದುಗನಿಗೆ ಮುಳ್ಳಿನ ಮೇಲೆ ನಿಂತುಕೊಂಡು ಓದಿದ ಅನುಭವ ಕೊಡುತ್ತದೆ’ ಎಂದು ಬೆನ್ನುಡಿಯಲ್ಲಿ ಬಣ್ಣಿಸಿದ್ದಾರೆ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ.

ADVERTISEMENT

ಈ ಕೃತಿ ಓದುತ್ತಾ ಹೋದಂತೆಲ್ಲ ಕಂಬಾರರ ಮಾತುಗಳು ಮನದಲ್ಲಿ ಅನುರಣನಗೊಳ್ಳುವುದು ಖಚಿತ. ಮೊಘಲ್‌ ದೊರೆಯ ಮುಂದೆ ತನ್ನ ಸುತ್ತಮುತ್ತಲಿನ ರಾಜರು ಶರಣಾದರು. ಆದರೆ, ಮೇವಾಡದ ಅರಸ ಪ್ರತಾಪ ತನ್ನ ಕೊನೆಯುಸಿರಿರುವವರೆಗೂ ಶರಣಾಗುವುದಿಲ್ಲ. ಬುಡಕಟ್ಟು ಸಮುದಾಯದ ಭಿಲ್ಲರ ಸಹಾಯ ಪಡೆದು ವರ್ಷಗಳ ಕಾಲ ಯುದ್ಧ ಕಾಡು ಮೇಡುಗಳನ್ನು ಅಲೆದ ಪ್ರತಾಪ ಎಂದಿಗೂ ಸುಖದ ಸುಪ್ಪತ್ತಿಗೆಯ ಅರಸ ಎನಿಸಿಕೊಳ್ಳಲಿಲ್ಲ. ಮೇವಾಡ ಸಾಮ್ರಾಜ್ಯದ ವೀರೋಚಿತ ಕದನವನ್ನು ಗುರುಮೂರ್ತಿ ಅವರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಇತಿಹಾಸ ಅಧ್ಯಯನದ ವಿದ್ಯಾರ್ಥಿಗಳಿಗೆ ಇದೊಂದು ಆಕರ ಗ್ರಂಥವೂ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.