ADVERTISEMENT

ಮೊದಲ ಓದು/ ಚೀನಾದ ಧರಣಿಯಲ್ಲಿ

ಸಂದೀಪ ನಾಯಕ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಲೇಖಕ, ಅಧ್ಯಾಪಕ ಅರವಿಂದ ಮಾಲಗತ್ತಿ ಚೀನಾಕ್ಕೆ ನೀಡಿದ ತಮ್ಮ ಅಕಡೆಮಿಕ್ ಭೇಟಿಯ ಕುರಿತಂತೆ ಈ ಪ್ರವಾಸ ಕಥನದಲ್ಲಿ ಬರೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಐದು ಜನರ ಸದಸ್ಯರ ತಂಡದೊಂದಿಗೆ ಒಬ್ಬರಾಗಿ ಚೀನಾಕ್ಕೆ ಅವರು ಭೇಟಿ ನೀಡಿದ್ದರು. ಅಲ್ಲಿ ವಿವಿಧ ಸ್ಥಳಗಳಿಗೆ ನೀಡಿದ ಭೇಟಿಯನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.

ಕನ್ನಡದಲ್ಲಿ ಜಗತ್ತಿನ ವಿವಿಧ ದೇಶಗಳಿಗೆ ನೀಡಿದ ಭೇಟಿಯನ್ನು ಕನ್ನಡದ ಲೇಖಕರಾದಿಯಾಗಿ ಅನೇಕರು ಪುಟಗಟ್ಟಲೇ ಬರೆದಿದ್ದಾರೆ. ಅದರಲ್ಲೂ ಅಮೆರಿಕ ಪ್ರವಾಸದ ಕುರಿತ ಪುಸ್ತಕಗಳೇ ಹೆಚ್ಚು. ಕನ್ನಡದಲ್ಲಿ ಚೀನಾ ಪ್ರವಾಸ ಕಥನಗಳು ಕಡಿಮೆ. ಆ ದೃಷ್ಟಿಯಿಂದ ಮಾಲಗತ್ತಿಯವ ಪ್ರವಾಸ ಕಥನ ಚೀನಾದ ಕುರಿತಂತೆ ಒಂದು ಬದಿಯ ನೋಟವನ್ನು ಮಾತ್ರ ಕೊಡುತ್ತದೆ.

ಲೇಖಕರು ತಂಡದ ಸದಸ್ಯರೊಂದಿಗೆ ಹ್ವಾಂಗ್ ಹುಯ್ ವಿಶ್ವವಿದ್ಯಾಲಯ, ಅರಮನೆ, ತಿಯನನ್‌ಸ್ಕ್ವೇರ್ ಸೇರಿದಂತೆ ಚೀನಾದ ವಿವಿಧ ಸ್ಥಳಗಳಿಗೆ ನೀಡಿದ ಭೇಟಿಯ ವಿವರಗಳನ್ನು ಒಳಗೊಂಡಿದೆ. ಇದೊಂದು ವಿದೇಶಿ ದಿನಚರಿಯನ್ನು ದಾಖಲಿಸುವ ಪ್ರವಾಸಿಕಥನವಾಗಿದ್ದು ಯಾವುದೇ ವಿಶಿಷ್ಟತೆಗಳಿಂದ ಕೂಡಿಲ್ಲ.

ಪ್ರವಾಸಿಗೆ ಕುತೂಹಲದ ಕಣ್ಣುಗಳು ಬಹಳ ಮುಖ್ಯ. ಹಾಗೆ ಗ್ರಹಿಸುವ ಕಣ್ಣುಗಳಿದ್ದವರು ಕರ್ನಾಟಕದ ಹಳ್ಳಿಯೊಂದರಲ್ಲಿ ಹತ್ತು ದಿನವಿದ್ದು ಬರೆದರೂ ಅದೊಂದು ಮಹತ್ವದ ಪ್ರವಾಸಕಥನ ಆಗುವುದು ಸಾಧ್ಯ. ಸಾಕಷ್ಟು ಅದ್ದೂರಿಯಾಗಿ ಪ್ರಕಟವಾಗಿರುವ ಈ ಪುಸ್ತಕ ನಿಗೂಢ ದೇಶವಾದ ಚೀನಾದ ಬಗ್ಗೆ ಮೇಲುಮೇಲಿನ ಹೇಳಿಕೆಗಳನ್ನು ನೀಡಿ ವಿರಮಿಸುತ್ತದೆ.                                                                                                      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT