ಮಕ್ಕಳ ಸಾಹಿತ್ಯವನ್ನು ನಿರಂತರವಾಗಿ ಸಾಕಷ್ಟು ಬರೆದುಕೊಂಡು ಬಂದಿರುವ ಹಿರಿಯ ಲೇಖಕ ನಾ. ಡಿಸೋಜ ಮತ್ತೊಂದು ಮಕ್ಕಳ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅಜ್ಜಿ ಹೇಳುವ ಕಥೆಗಳನ್ನು ಮಕ್ಕಳು ಕೇಳುವುದು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಅವರ `ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು' ಪುಸ್ತಕ ಪ್ರಕಟವಾಗಿದೆ. ಮಕ್ಕಳು ತಮ್ಮಷ್ಟಕ್ಕೇ ಓದಿಕೊಳ್ಳುವಂತೆ ಇದನ್ನು ರೂಪಿಸಲಾಗಿದೆ. ಹಾಡು, ಕಥೆ ಎರಡೂ ಒಟ್ಟಾಗಿಯೇ ಇರುವ ಕಥೆಗಳನ್ನು ಲೇಖಕರು ರಚಿಸಿದ್ದಾರೆ.
ಪುಟ್ಟಜ್ಜಿ ಮಕ್ಕಳಿಗೆ ಕಥೆಗಳನ್ನು ಹೇಳಿದಂತೆ ಇಲ್ಲಿನ ಕಥೆಗಳು ನಿರೂಪಿತವಾಗಿವೆ. ಪ್ರಕೃತಿ, ಪರಿಸರ, ಪ್ರಾಣಿಗಳ ಕಥೆ ಹೇಳುತ್ತ ಮಕ್ಕಳ ಕಲ್ಪನೆಯನ್ನು ಈ ಅಜ್ಜಿ ವಿಸ್ತರಿಸುತ್ತಾಳೆ. ಅಜ್ಜಿಯಿಂದ ಕಥೆಯನ್ನು ಕೇಳಿರದ ಮಕ್ಕಳಿಗೆ ಹೊಸತೊಂದು ಭಾವಲೋಕ ಇಲ್ಲಿ ತೆರೆದುಕೊಳ್ಳುತ್ತದೆ.
ಇಲ್ಲಿನ ಬಹುಪಾಲು ಕಥೆಗಳು `ಪ್ರಜಾವಾಣಿ'ಯಲ್ಲಿ ಪ್ರಕಟವಾದವು. ಜಾನಪದವೂ ಸೇರಿದಂತೆ ಬೇರೆ ಮೂಲಗಳಿಂದ ಈ ಕಥೆಗಳನ್ನು ತೆಗೆದುಕೊಂಡು ಇವನ್ನು ಸಂಗ್ರಹಿಸಲಾಗಿದೆ. ಹಾಡುಗಳೂ ಇರುವುದರಿಂದ ದೊಡ್ಡವರೊಂದಿಗೆ ಮಕ್ಕಳೂ ಗಟ್ಟಿಯಾಗಿ ಓದಿಕೊಂಡರೆ ಇವುಗಳ ಚಿತ್ರಕ ಗುಣ ಮತ್ತು ನಾದ ಎಳೆಯ ಮನಸ್ಸುಗಳನ್ನು ತುಂಬಬಲ್ಲದು.
ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು
ಲೇ: ನಾ. ಡಿಸೋಜ
ಪು: 80; ಬೆ: ರೂ. 45
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ
ಕಂದಾಯ ಭವನ, ನೂರಡಿ ರಸ್ತೆ,
ರಾಜೇಂದ್ರ ನಗರ
ಶಿವಮೊಗ್ಗ- 577 201
.........
ವೈಜ್ಞಾನಿಕ ಕಥೆಗಳ ಲೇಖಕ ರಾಜಶೇಖರ ಭೂಸನೂರಮಠ ಅವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಸ್ನೇಹಿತರು, ಬಂಧುಗಳು ಸೇರಿ ಅರ್ಪಿಸಿದ ಅಭಿನಂದನಾ ಗ್ರಂಥ `ವೈಭವಿ'. ಸುಮಾರು 50 ವರ್ಷಗಳಿಂದ ಕಲ್ಪಿತ ವೈಜ್ಞಾನಿಕ ಕಥೆ, ಕಾದಂಬರಿಗಳನ್ನು ಬರೆದುಕೊಂಡು ಬಂದ ಭೂಸನೂರಮಠ ಮಕ್ಕಳಿಗಾಗಿಯೂ ಸಾಕಷ್ಟು ಬರೆದಿದ್ದಾರೆ. ಈ ಕ್ಷೇತ್ರದಲ್ಲಿ ಸುದೀರ್ಘ ಕಾಲ ಅಪಾರ ಕೆಲಸ ಮಾಡಿದ ಲೇಖಕರಲ್ಲಿ ಭೂಸನೂರಮಠರು ಮುಖ್ಯರಾದವರು.
ಈ ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗದಲ್ಲಿ ವಿಜ್ಞಾನ, ಅಧ್ಯಾತ್ಮ, ಪತ್ತೇದಾರಿ ಸಾಹಿತ್ಯ, ಅತೀಂದ್ರಿಯ ವಿಸ್ಮಯ, ಗಣಿತ, ಜೋತಿಷ್ಯ ಇತ್ಯಾದಿಗಳ ಬಗ್ಗೆ ಕೆಲ ಲೇಖಕರು ಬರೆದಿದ್ದಾರೆ. ಇನ್ನೊಂದು ಭಾಗ ಭೂಸನೂರಮಠರ ಸಾಹಿತ್ಯದ ಸಮೀಕ್ಷೆಯನ್ನು ಕುರಿತ ಲೇಖನಗಳನ್ನು ಒಳಗೊಂಡಿದೆ. ಮತ್ತೊಂದು ಭಾಗದಲ್ಲಿ ಭೂಸನೂರಮಠರ ಸಂಪರ್ಕಕ್ಕೆ ಬಂದ ಅವರ ಆತ್ಮೀಯರು, ಸ್ನೇಹಿತರು ಬರೆದಿದ್ದಾರೆ. ಭೂಸನೂರಮಠರ ಆತ್ಮವೃತ್ತಾಂತವೂ ಇಲ್ಲಿದೆ. ಈ ಭಾಗದಲ್ಲಿ ಅವರು ತಮ್ಮ ಬದುಕು, ಬರಹ ಸಾಗಿ ಬಂದ ದಾರಿಯ ಚಿತ್ರಣ ಕೊಟ್ಟಿದ್ದಾರೆ.
ಹಾಗೆನೋಡಿದರೆ ಇಲ್ಲಿ ಭೂಸನೂರಮಠರ ಸಾಹಿತ್ಯದ ಬಗ್ಗೆ ಬರೆದಿರುವ ಲೇಖನಗಳು ಕಡಿಮೆಯೇ. ಅವರ ಒಟ್ಟೂ ಸಾಹಿತ್ಯವನ್ನು ಬೆಲೆ ಕಟ್ಟಬಹುದಾದ ಬರಹಗಳು ಹೆಚ್ಚಾಗಿ ಇದ್ದಿದ್ದರೆ ಈ ಅಭಿನಂದನಾ ಗ್ರಂಥ ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು. ಅನಗತ್ಯ ಎನ್ನಲಾಗದಿದ್ದರೂ, ಕೌಟುಂಬಿಕ ಆವರಣವನ್ನು ಬಿಟ್ಟು ಹೊರಬರದಿರುವುದು ಇದರ ಮಿತಿಯಾಗಿದೆ. ಕನ್ನಡದಲ್ಲಿ ಹೊರಬರುವ ಬಹಳಷ್ಟು ಅಭಿನಂದನಾ ಗ್ರಂಥಗಳ ಸ್ವರೂಪದ ರೀತಿಯಲ್ಲಿಯೇ ಇದೂ ಕೂಡ ಪ್ರಕಟವಾಗಿದೆ.
ವೈಭವಿ (ಪ್ರೊ. ರಾಜಶೇಖರ ಭೂಸನೂರಮಠ ಅವರ ಅಭಿನಂದನಾ ಸಂಪುಟ)
ಪ್ರಧಾನ ಸಂಪಾದಕರು: ಡಾ. ಸಂಗಮೇಶ ಸವದತ್ತಿಮಠ
ಪು: 406; ಬೆ: ರೂ. 300
ಪ್ರ: ವೈಭವಿ ಜ್ಞಾನಮಂದಿರ
`ಬದುಕು', ಗಿರಿನಗರ
ಕಲಘಟಗಿ ರಸ್ತೆ, ಧಾರವಾಡ - 580 002
........
ಝೆನ್ ಮಾದರಿಯ ಪುಟ್ಟ ಕಥೆಗಳನ್ನು `ನನ್ನ ನೆರಳಿನ ಚಿತ್ರ' ಪುಸ್ತಕ ಒಳಗೊಂಡಿದೆ. ಅತಿಸಣ್ಣ ಕಥೆಗಳ ಸಂಗ್ರಹ ಗುಣವನ್ನು, ದರ್ಶನವನ್ನು, ಬದುಕಿನಲ್ಲಿ ಮಿಂಚಿ ಮರೆಯಾಗುವ ಸೂಕ್ಷ್ಮ ನೋಟ, ಕ್ಷಣಗಳನ್ನು ಲೇಖಕ ರಘು ಇಡ್ಕಿದು ತಮ್ಮ ಈ ಕಥೆಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಸುಮಾರು 85ರಷ್ಟಿರುವ ಈ ಪುಟ್ಟಕಥೆಗಳು ಬದುಕಿನ ಹಲವು ವೈಚಿತ್ರ್ಯಗಳನ್ನು ಚಿತ್ರವತ್ತಾಗಿ ದಾಖಲಿಸುತ್ತವೆ.
ಜೈಲಿಗೆ ಹೋಗಿದ್ದೆ./ ಅಲ್ಲಿ ಕೈದಿಗಳ ಭಾವಚಿತ್ರದ ಮೇಲಿನ ಸಾಲಿನಲ್ಲಿ/ ರಾಮ, ಏಸು, ಅಲ್ಲಾ ಇದ್ದರು. (ಜೈಲು)
ಆ ಕಣ್ಣುಗಳಿಗೆ ಜೀವ ಬರುವುದೇ ಅವಳು/ ಬಂದಾಗ. ಅವಳಲ್ಲಿ ಅಂತಹದ್ದೇನೂ ಇಲ್ಲ./ ಏನೇನೂ ಇಲ್ಲ. ಕನಸುಗಳ ಹೊರತಾಗಿ. (ಕನಸು) ಇಂತಹ ಕಥೆಗಳು ಕಾವ್ಯದ ದೀಪ್ತಗುಣವನ್ನು ಪಡೆದಿವೆ. ಬದುಕಿನಲ್ಲಿ ನಮ್ಮನ್ನು ಸುತ್ತುವರೆದಿರುವ ವೈರುಧ್ಯಗಳೇ ರಘು ಅವರ ಕಥೆಗಳ ವಸ್ತು. ಕೊಂಚ ರಮ್ಯವಾಗಿ ವಾಸ್ತವವನ್ನು ಬೇರೆ ರೀತಿಯಲ್ಲಿ ಇಲ್ಲಿನ ಕಥೆಗಳು ಕಾಣಿಸುತ್ತವೆ.
ಪ್ರತಿ ಕಥೆಯೂ ಚಿತ್ರಗಳೊಂದಿಗೆ ಪ್ರಕಟವಾಗಿದೆ. ಕೆಲವು ಪುಟಗಳಲ್ಲಿ ಬರಹಗಳಿಗಿಂತ ಅವೇ ಭಾರವಾಗಿರುವಂತೆ ಕಾಣುತ್ತವೆ. ಭಾರದ ಓದಿನ ಬಿಡುವಿನ ನಡುವೆ ಈ ಹೂಹಗುರ ಕಥೆಗಳನ್ನು ಓದಿ ಆನಂದಿಸಬಹುದು.
ನನ್ನ ನೆರಳಿನ ಚಿತ್ರ
ಲೇ: ರಘು ಇಡ್ಕಿದು
ಪು: 100; ಬೆ: ರೂ. 75
ಪ್ರ: ಅರೆಹೊಳೆ ಪ್ರತಿಷ್ಠಾನ
ನಂ.7, ಎಂ.ಎನ್. ಟವರ್ಸ್,
ಮಲ್ಲಿಕಟ್ಟೆ, ಕದ್ರಿ, ಮಂಗಳೂರು- 575002
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.