ADVERTISEMENT

ವರ್ಣ ಪ್ರಪಂಚದ ಅನೂಹ್ಯ ಆಯಾಮಗಳು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ವರ್ಣ ಮಾಯಾಜಾಲ
ಲೇ: ಡಾ. ಎನ್.ಎಸ್. ಲೀಲಾ:ಪು: 144; ಬೆ: ರೂ. 475
ಪ್ರ: ನವಕರ್ನಾಟಕ ಪಬ್ಲಿಕೇಷನ್ಸ್ (ಪ್ರೈ.)ಲಿ., ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-01.
ಇಂಗ್ಲಿಷ್‌ನಲ್ಲಿ `ಕಾಫಿ ಟೇಬಲ್ ಬುಕ್ಸ್~ ಎನ್ನುವುದು ಐವತ್ತು ವರ್ಷಗಳಷ್ಟು ಹಿಂದಿನ ಪ್ರಯೋಗ. ಕಲೆ, ವಿನ್ಯಾಸ, ಛಾಯಾಚಿತ್ರ, ಭವ್ಯ ಕಟ್ಟಡಗಳ ಚಿತ್ರಗಳನ್ನೇ ಪುಟ ತುಂಬ ತುಂಬಿಕೊಂಡು, ಕೆಲ ಹೊತ್ತಾದರೂ ಕಣ್ಣುಗಳನ್ನು ಹಿಡಿದಿಡಬಲ್ಲ ಪುಸ್ತಕಗಳಿವು. ಮಿತಶಬ್ದಗಳು, ಎದ್ದುಕಾಣುವ ಚಿತ್ರಗಳೇ ಇವುಗಳ ಬಂಡವಾಳ; ಮಿದುಳಿಗೆ ಕೆಲಸ ಅಷ್ಟಕಷ್ಟೇ. ರಾಯಭಾರಿ ಕಚೇರಿಗಳಲ್ಲಿ, ಶ್ರೀಮಂತರ ಡ್ರಾಯಿಂಗ್ ರೂಮುಗಳಲ್ಲಿ ಇವುಗಳ ಮೆರವಣಿಗೆ.

ಕಾಫಿ ಟೇಬಲ್ ಪುಸ್ತಕ ಎನ್ನುವ ವರ್ಗಕ್ಕೆ ಬರದೆ ಬೇರೆಯದೇ ಆಶಯ ಹೊಂದಿರುವ ಡಾ. ಎನ್.ಎಸ್. ಲೀಲಾ ಅವರು ರಚಿಸಿರುವ `ವರ್ಣ ಮಾಯಾಜಾಲ~ ಕಲೆ, ವಿಜ್ಞಾನ, ಸಂಸ್ಕೃತಿ, ತಂತ್ರಜ್ಞಾನವನ್ನೂ ಒಳಗೊಂಡು ಬಣ್ಣದ ಮೂಲಕ ಭೌತಪ್ರಪಂಚವನ್ನು ಅನಾವರಣ ಮಾಡಹೊರಟ ಒಂದು ವಿಶಿಷ್ಟ ಪ್ರಯೋಗ. ಭೌತವಿಜ್ಞಾನ, ಜೀವಿವಿಜ್ಞಾನ, ರಸಾಯನವಿಜ್ಞಾನ, ಇಂದಿನ ನ್ಯಾನೊ ತಂತ್ರಜ್ಞಾನ ಕ್ಷೇತ್ರಗಳ ಪರಿಚಯವನ್ನು ಮಾಡುವಾಗ ಲೇಖಕಿ ವಿಶೇಷವಾದ ಮಾಹಿತಿಗಳನ್ನು ಇಲ್ಲಿ ಸೇರಿಸಿದ್ದಾರೆ.

ಇಲ್ಲಿನ ವಿಸ್ಮಯಕ್ಕೆ ಎರಡು ನಿದರ್ಶನಗಳು. ಕಾಮನಬಿಲ್ಲಿನ ಏಳು ಬಣ್ಣಗಳು ಬಹುತೇಕ ಎಲ್ಲರಿಗೂ ಪರಿಚಿತ. ಆದರೆ ಕಾಮನಬಿಲ್ಲಿನ ಮೆಣಸಿನಕಾಯಿಗಳೂ ಇಲ್ಲುಂಟು. ಕಾಯಿ ಬಿಡುವ ಹಂತದಲ್ಲಿ ಸೂರ್ಯಮುಖಿಯಾಗಿ ನಿಗುರಿ ನಿಲ್ಲುವ, ವಿವಿಧ ವರ್ಣಗಳ ಮೆಣಸಿನಕಾಯಿಗಳ ವರ್ಣನೆ, ಚಿತ್ರಗಳು ಇಲ್ಲಿವೆ. ಐಶ್ವರ್ಯ ರೈಗೆ ಏಕೆ ನೀಲನೇತ್ರ? ಎಲಿಜೆಬತ್ ಟೇಲರ್, ಆಡಾಲ್ಫ್ ಹಿಟ್ಲರ್ ಇವರಿಗೇಕೆ ನೇರಿಳೆ ಬಣ್ಣದ ಪಾಪೆ? ಇಲ್ಲಿ ಕಣ್ಣಿನ ಬಣ್ಣಗಳನ್ನು ನಿರ್ಧರಿಸುವ ವರ್ಣಕಗಳ ಬಗ್ಗೆ ಲಗುಬಗೆಯ ವಿವರಣೆಗಳಿವೆ.

ತುಟಿಯು ಜೀರ್ಣಾಂಗದ ಮೊದಲ ದ್ವಾರ. ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಯನ್ನು ವಾರ್ಡ್‌ಗೆ ಕಳಿಸುವ ಮುನ್ನ ವೈದ್ಯರು ತುಟಿಯನ್ನು ಗಮನಿಸುತ್ತಾರೆ. ತುಟಿ ದೇಹದ ರಕ್ತ ಪರಿಚಲನೆಯ ಪ್ರತೀಕವಾಗಿ ನಿಲ್ಲುತ್ತದೆ. ಈ ಬಗೆಯ ವಿಶೇಷ ಮಾಹಿತಿಗಳು 32 ಅಧ್ಯಾಯಗಳಲ್ಲಿ ವಿಸ್ತರಿಸಿವೆ. ಬಿಳಿ ನಾಲಗೆ, ನೇರಿಳೆ ನಾಲಗೆ, ನಸುಗೆಂಪು ನಾಲಗೆ, ಜಿರಾಫೆ ನಾಲಗೆ, ಹಲ್ಲಿ ನಾಲಗೆ - ಹೀಗೆ ನಾಲಗೆಯ ಪ್ರಪಂಚವನ್ನೇ ವಿವರವಾದ ಒಂದು ಅಧ್ಯಾಯವನ್ನಾಗಿ ರೂಪಿಸಿದ್ದಾರೆ.

ಹಸಿರುಹುಲ್ಲು ತಿನ್ನುವ ಹಸುವಿನ ಹಾಲೇಕೆ ಬಿಳಿ? ಕೋಳಿಮೊಟ್ಟೆಯ ಬಂಡಾರವೇಕೆ ಹಳದಿ? ಸ್ಕ್ವಿಡ್ ಎನ್ನುವ ಹತ್ತು ಬಾಹುವಿನ ಸಾಗರಜೀವಿ ಇಂಕನ್ನೇಕೆ ಉಗುಳುತ್ತದೆ? ಕಿತ್ತಳೆ ಹಣ್ಣು ಹಸುರಿನಿಂದ ಹಳದಿ ಬಣ್ಣಕ್ಕೆ ತಿರುಗುವುದು ಯಾವುದರಿಂದ? ಇಲ್ಲಿ ಇಂಥ ಪ್ರಶ್ನೆಗಳ ಜೊತೆಗೆ ವೈಜ್ಞಾನಿಕ ಉತ್ತರಗಳೂ ಉಂಟು. ಬರಾಕ್ ಒಬಾಮ ಅವರ ತಾಯಿಯ ಕಡೆಯ ಬಿಳಿಯ ಅಜ್ಜ ಅಜ್ಜಿಯರು ಫೋಟೋದಲ್ಲಿ ನಗುತ್ತಿದ್ದಾರೆ, ತಂದೆಯ ಕಡೆಯ ಆಫ್ರಿಕನ್ ವಂಶಜರ ಚಿತ್ರವೂ ಇಲ್ಲಿದೆ.

ಹಾಗೆಯೇ ಬಣ್ಣವನ್ನು ಅಳತೆಮಾಡಲು ಫೆಲಿಕ್ಸ್ ಫಾನ್ ಲುಷೌನೆಂಬ ವೈದ್ಯ ರಚಿಸಿದ 36 ವರ್ಣ ಛಾಯೆಗಳ ಮಾಪಕದ ವಿವರಣೆಯೂ ಇದೆ. ಅಲ್ಲಲ್ಲೇ ಪ್ರಾಸಂಗಿಕವಾಗಿ ವಿಜ್ಞಾನಿಗಳು ಕೈಗೊಂಡ ಶೋಧಗಳ ಬಗ್ಗೆ ಸಂಕ್ಷಿಪ್ತ ವಿವರಗಳಿವೆ. ನ್ಯೂಟನ್, ಸಿ.ವಿ. ರಾಮನ್, ಲಾರ್ಡ್ ರ‌್ಯಾಲೇ ಮುಂತಾದ ವಿಜ್ಞಾನಿಗಳು ಬಣ್ಣದ ಬಗ್ಗೆ ಮಾಡಿರುವ ಅಮೂಲ್ಯ ಸಂಶೋಧನೆಗಳ ಪ್ರಸ್ತಾಪಗಳಿವೆ.

ವಿಜ್ಞಾನದ ಹಿನ್ನೆಲೆ ಇರುವವರೂ ವಿಸ್ಮಯ ಪಡಬಹುದಾದ ಮಾಹಿತಿಗಳು ಇರುವುದು ಈ ಕೃತಿಯ ಇನ್ನೊಂದು ವೈಶಿಷ್ಟ್ಯ. ಬೇರೆ ಬೇರೆ ಪ್ರಯೋಗಗಳನ್ನು ಮಾಡಿ ನೆರಳಿಗೂ ಬಣ್ಣವಿದೆಯೆಂದು ಇಲ್ಲಿ ತೋರಿಸಿಕೊಟ್ಟಿದ್ದಾರೆ. ನ್ಯೂಗಿನಿ ಮೂಲದ ಕಿತ್ತಳೆ ಮತ್ತು ಕಪ್ಪುಬಣ್ಣದ ಪಿಟೋಹಿ ಹಕ್ಕಿಯು ಶತ್ರುಗಳಿಂದ ತಪ್ಪಿಸಿಕೊಳ್ಳಲು ಮೈಮೇಲೆ ವಿಷ ಲೇಪಿಸಿಕೊಂಡಿರುವ ಏಕೈಕ ಪಕ್ಷಿ ಎಂದರೆ ವರ್ಣಲೋಕದ ಇನ್ನೊಂದು ಮುಖ ಪರಿಚಯವಾಗುತ್ತದೆ. ಬಣ್ಣ ಬಳಸುವಾಗ ವಹಿಸಬೇಕಾದ ಎಚ್ಚರಿಕೆ ಬಗ್ಗೆಯೂ ಸೂಚನೆಗಳಿವೆ.

ಮನಸ್ಸಿಗೆ ಮುದಕೊಡುವ, ಮುಚ್ಚಿಟ್ಟ ನಂತರವೂ ಮತ್ತೊಮ್ಮೆ ಪುಟ ತಿರುವಿ ಹಾಕಬೇಕೆಂಬ ಕುತೂಹಲ ಹುಟ್ಟಿಸುವ `ವರ್ಣ ಮಾಯಾಜಾಲ~ದ ಅಧ್ಯಾಯಗಳನ್ನು ವಿಂಗಡಿಸುವಾಗ ನೇರವಾಗಿ ಬಣ್ಣಗಳ `ಫಿಸಿಕ್ಸ್~ ಅಂಶಗಳಿಂದ ಪ್ರಾರಂಭಿಸುವ ಬದಲು ಕೃತಿಯ ಇನ್ನೊಂದು ಅಧ್ಯಾಯವೇ ಆದ `ಗುಲಾಬಿಯ ಮೌನ ಭಾಷೆ~ಯೊಂದಿಗೆ ಪ್ರಾರಂಭವಾಗಿದ್ದರೆ ಬಣ್ಣ ಪ್ರಪಂಚಕ್ಕೆ ಒಳ್ಳೆಯ ಪ್ರವೇಶ ದೊರಕುತ್ತಿತ್ತು.
 
ಇಲ್ಲಿ ಬಳಸಿರುವ ವೈಜ್ಞಾನಿಕ ಶಬ್ದಗಳಲ್ಲಿ ಗೊಂದಲವಿದೆ. ಆಯಸ್ಕಾಂತ (ಶುದ್ಧ ಪ್ರಯೋಗ ಅಯಸ್ಕಾಂತ), ನೇರಳಾತೀತ (ಅತಿನೇರಿಳೆ), ಪೌರಾತ್ಯ (ಪೌರಸ್ತ್ಯ), ಕರಗು (ವಿಲೀನ). `ಶಾಸ್ತ್ರ~ ಎನ್ನುವ ಪದವನ್ನು ವಿಜ್ಞಾನ ಕೃತಿಗಳಲ್ಲಿ ಕೈಬಿಟ್ಟು `ವಿಜ್ಞಾನ~ ಎಂಬುದನ್ನು ಬಳಸಲು ಪ್ರಾರಂಭಿಸಿ ದಶಕವೇ ಆಗಿದೆ.

1/4 ಡೆಮ್ಮಿ ಗಾತ್ರದಲ್ಲಿ ಪ್ರಕಟವಾಗಿರುವ `ವರ್ಣ ಮಾಯಾಜಾಲ~ ಜನಸಾಮಾನ್ಯರು, ವಿದ್ಯಾರ್ಥಿಗಳು, ಪೋಷಕರನ್ನು ಏಕಕಾಲಕ್ಕೆ ಆಕರ್ಷಿಸುವ ವಿರಳ ಕೃತಿ. ಏನು? ಏಕೆ? ಹೇಗೆ? ಎಂದು ಮಕ್ಕಳು ಪ್ರಶ್ನಿಸುವ ಈ ದಿನಗಳಲ್ಲಿ ಇಂಥ ಆಕರಗಳಿಂದ ವೈಜ್ಞಾನಿಕ ಉತ್ತರಗಳನ್ನು ಧಾರಾಳವಾಗಿ ನೀಡಬಹುದು. ಇದರ ಇಂಗ್ಲಿಷ್ ಆವೃತ್ತಿಯು `ಮಿಸ್ಟರಿ, ಮ್ಯಾಜಿಕ್ ಅಂಡ್ ಮ್ಯೂಸಿಕ್ ಆಫ್ ಕಲರ್ಸ್‌~ ಹೆಸರಿನಲ್ಲಿ ಏಕಕಾಲಕ್ಕೆ ಹೊರಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.