ADVERTISEMENT

ಸಂಗೀತ, ಸಾಹಿತ್ಯ, ವಿನ್ಯಾಸಗಳ ಕೂಡುಬಿಂದು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 19:30 IST
Last Updated 12 ಸೆಪ್ಟೆಂಬರ್ 2020, 19:30 IST
Swara vinyasa, ಸ್ವರ ವಿನ್ಯಾಸ
Swara vinyasa, ಸ್ವರ ವಿನ್ಯಾಸ   

ಹೆಸರು: ಸ್ವರ ವಿನ್ಯಾಸ

ಲೇಖಕರು: ಸಚ್ಚಿದಾನಂದ ಹೆಗಡೆ

ಪು: 120 ಬೆ: ₹120

ADVERTISEMENT

ಪ್ರಕಾಶನ: ಅಂಕಿತ ಪ್ರಕಾಶನ, ಬಸವನಗುಡಿ, ಬೆಂಗಳೂರು

ದೂರವಾಣಿ: 080 26617100

***

ಸಚ್ಚಿದಾನಂದ ಹೆಗಡೆ ಕಥೆಗಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತರು. ವಿನ್ಯಾಸ ಅವರ ವೃತ್ತಿ. ಸಂಗೀತ ಅವರ ಆಸಕ್ತಿ. ಅವರ ವ್ಯಕ್ತಿತ್ವದ ಈ ಮೂರು ಕೋನಗಳು ಸೇರಿದ ಕ್ಯಾನ್ವಾಸಿನಲ್ಲಿಯೇ ರೂಪುತಳೆದ ಕೃತಿ ‘ಸ್ವರ ವಿನ್ಯಾಸ’. ಈ ಪುಸ್ತಕದ ಶೀರ್ಷಿಕೆಯನ್ನು ಸ್ವರ ಮತ್ತು ವಿನ್ಯಾಸ ಎಂದೂ ಸ್ವರದ ವಿನ್ಯಾಸ ಎಂದೂ ಅರ್ಥೈಸಬಹುದು. ಈ ಎರಡೂ ಅರ್ಥಗಳಿಗೆ ಒಗ್ಗುವ ಹಾಗೆಯೇ ಇದರ ಬರಹಗಳಿವೆ‌. ಸಂಗೀತ ಮತ್ತು ವಿನ್ಯಾಸ ಎರಡರ ಕ್ರಾಸಿಂಗ್ ಪಾಯಿಂಟ್ ಆಗಿ ಅವರ ಸಾಹಿತ್ಯದ ನೋಟ ಕೆಲಸ ಮಾಡಿದೆ. ಹಾಗಾಗಿಯೇ ಯಕ್ಷಗಾನ ಕಲಾವಿದರೆಂದೇ ಪ್ರಸಿದ್ಧರಾದ ಶಂಭು ಹೆಗಡೆ ಅವರಲ್ಲಿ ಒಬ್ಬ ಕುಶಲ ವಿನ್ಯಾಸಕಾರನೂ ಪ್ರಬುದ್ಧ ಮ್ಯಾನೇಜ್ಮೆಂಟ್ ಗುರುವೂ ಇದ್ದುದನ್ನು ಗುರ್ತಿಸಲು ಸಾಧ್ಯವಾಗಿದೆ. ಅಷ್ಟೇ ಅಲ್ಲ, ಜಗದ್ವಿಖ್ಯಾತ ವಿನ್ಯಾಸಕಾರ ರೇಮಂಡ್‌ ಲೋವಿಯ ಜೊತೆಗೆ ಶಂಭು ಹೆಗಡೆಯವರನ್ನು ನೆನಪಿಸಿಕೊಳ್ಳಲು ಸಾಧ್ಯವಾಗಿದೆ.

ಸಂಗೀತ ಮತ್ತು ವಿನ್ಯಾಸ ಲೋಕಕ್ಕೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಲೇ ಬರಹ ಒಣಗಾಂಭೀರ್ಯದ ಬಿಸಿಲಿಗೆ ಸೊರಗದೆ ಹಗುರಾಗಿ ಓದಿಸಿಕೊಂಡು ಹೋಗುತ್ತದೆ. ಹಾರ್ಮೋನಿಯಂ ಸ್ವರಗಳ ಹುಡುಕಾಟ, ಫಾಲ್ಸೆಟೊದ ಟ್ರೂಸೆಟೊ- ಕಳ್ಳದನಿಯಂಥ ಲೇಖನ ಸಂಗೀತಕ್ಷೇತ್ರದಲ್ಲಿ ಅಷ್ಟಾಗಿ ಚರ್ಚೆಯಾಗದ ರೋಗಮೂಲಗಳ ಕುರಿತು ಗಮನ ಸೆಳೆಯುತ್ತದೆ.

ಕೃತಿಯ ಮುಖ್ಯಧಾರೆಯಲ್ಲಿರುವುದು ಸಂಗೀತ ಮತ್ತು ವಿನ್ಯಾಸ ಆದರೂ ಲೇಖಕರು ಈ ಚೌಕಟ್ಟಿನ ಆಚೆಗೂ ಆಗೀಗ ಇಣುಕಿ ‘ಕಾಣೆಯಾದವರು’ ‘ನಿತ್ಯವೂ ದೀಪಾವಳಿ’ ‘ಭಾಷೆ’ ‘ಐಡೆಂಟಿಟಿ ಕ್ರೈಸಿಸ್’ನಂಥ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ. ಕೆಲವು ವಸ್ತುಗಳನ್ನು ಹಲವು ಒಳನೋಟಗಳೊಂದಿಗೆ ಚರ್ಚಿಸಿದರೆ ಅನುಪ್ ಜಲೊಟ ಅವರಂಥವರ ಬಗ್ಗೆ ಬರೆಯುತ್ತ ತುಸು ಮೇಲಿಂದ ಮೇಲಕ್ಕೆ ಹಾದು ಹೋಗುವುದೂ ಇದೆ.

ಎದುರಾಬದಿರು ಕೂತು ಮಾತುಕತೆಯಾಡಿದಂತೆ ಭಾಸವಾಗುವುದು ಇಲ್ಲಿನ ಎಲ್ಲ ಪ್ರಬಂಧಗಳ ಮುಖ್ಯಗುಣ. ಇದೇ ಕಾರಣಕ್ಕೆ ಇದು ಸಂಗೀತ, ವಿನ್ಯಾಸದ ವಿದ್ಯಾರ್ಥಿಗಳು ಮಾತ್ರವಲ್ಲ, ಉಳಿದ ಓದುಗರೂ ಆರಾಮವಾಗಿ ಓದಬಹುದಾದ ಪುಸ್ತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.