
ಒಂದುವೇಳೆ ಬಾಬಾಸಾಹೇಬರು ಇರದಿದ್ದರೆ
ಕನ್ನಡಕ್ಕೆ: ವಿಕ್ರಮ ವಿಸಾಜಿ
ಪ್ರ: ಸುಮೇಧ
ಸಂ: 9886100277
ಬಾಬಾಸಾಹೇಬರು ‘ಭಾರತದಲ್ಲಿ ಹಾಕಿದ ಅಡಿಪಾಯದ ವಾರಸುದಾರರು ನಾವಾಗಬೇಕು’ ಎನ್ನುವ ಆಶಯದಿಂದ ‘ಒಂದುವೇಳೆ ಬಾಬಾಸಾಹೇಬರು ಇರದಿದ್ದರೆ’ ಕೃತಿಯನ್ನು ರೂಪಿಸಲಾಗಿದೆ. ಪ್ರಮುಖ ಬೌದ್ಧ ಬಿಕ್ಕು ಭದಂತ ಆನಂದ ಕೌಸಲ್ಯಾಯನ ಅಂಬೇಡ್ಕರ್ ಜೊತೆ ಒಡನಾಡಿದವರು. ಅವರು ‘ಯದಿ ಬಾಬಾ ನ ಹೋತೆ’ ಎಂಬ ಹಿಂದಿಯಲ್ಲಿ ಬಾಬಾಸಾಹೇಬರ ಜೀವನ ಚರಿತ್ರೆಯನ್ನು ಭಿನ್ನವಾಗಿ ಕಟ್ಟಿದ್ದಾರೆ. ಅದನ್ನು ವಿಕ್ರಮ ವಿಸಾಜಿ ಕನ್ನಡಕ್ಕೆ ತಂದಿದ್ದಾರೆ.
ಬಾಬಾಸಾಹೇಬರ ತಾತ ಮಾಲೋಜಿ ರಾವ್ ಸೇನೆಯಲ್ಲಿ ಇದ್ದರು. ತಂದೆ ರಾಮ್‌ಜಿ ಕೂಡ ಸೇನಾ ಧೀರ. 1882ರಲ್ಲಿ ಮಹರ್ ಜನಾಂಗಕ್ಕೆ ಸೇನೆಗೆ ನಿಷೇಧ ವಿಧಿಸಲಾಯಿತು. ಸೇನಾ ನಿವೃತ್ತಿ ನಂತರ ರಾಮ್‌ಜಿ ಸತಾರದಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಆರಂಭಿಸುತ್ತಾರೆ. ಕಬೀರ್ ಪಂಥದ ಅನುಯಾಯಿ ಕುಟುಂಬ ಅವರದು. ಮನೆಯಲ್ಲಿ ನಿತ್ಯವೂ ಪೂಜೆ ಭಜನೆ ತಪ್ಪುತ್ತಿರಲಿಲ್ಲ. ಭೀಮ ಹೆಸರಿಗೆ ತಕ್ಕಂತೆ ಗಟ್ಟಿಮುಟ್ಟಾಗಿದ್ದರು. ತುಂಟತನದ ಅವರು ದೊಡ್ಡ ಹುಡುಗರ ಜೊತೆಯೂ ಜಗಳಕ್ಕಿಳಿಯಲು ಹಿಂಜರಿಯುತ್ತಿರಲಿಲ್ಲ ಎನ್ನುವ ಸಂಗತಿಯನ್ನು ಇಲ್ಲಿ ಸ್ಮರಿಸಿದ್ದಾರೆ.
ಭೀಮಾಬಾಯಿ ತೀರಿದ ನಂತರ ರಾಮ್‌ಜಿ ಜೀಜಾಬಾಯಿಯನ್ನು ಮದುವೆಯಾಗುತ್ತಾರೆ. ತಾಯಿಯ ಅಗಲಿಕೆ ಭೀಮನಿಗೆ ಓದಿನ ಬಗ್ಗೆ ನಿರಾಸಕ್ತಿ ಹುಟ್ಟಿಸುತ್ತದೆ. ತಂದೆಗೆ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎನ್ನುವ ತವಕ. ತಮ್ಮ ಕುಟುಂಬವನ್ನು ಮುಂಬೈಗೆ ವರ್ಗಾಯಿಸುತ್ತಾರೆ. ‘ಎಲ್ಫಿನ್ಸ್ ಟನ್’ ಶಾಲೆಯಲ್ಲಿ ಓದುತ್ತಿದ್ದ ಭೀಮನಿಗೆ ಅಪಾರ ಪುಸ್ತಕ ಪ್ರೀತಿ ಹುಟ್ಟುತ್ತದೆ. ತಮ್ಮ ಜೀವಕ್ಕಿಂತಲೂ ಪುಸ್ತಕವೇ ಮುಖ್ಯ ಆಗುತ್ತದೆ. ‘ರಾಜಗೃಹ’ ನಿವಾಸವನ್ನು ಕಟ್ಟಿಸಿದ್ದೂ ಪುಸ್ತಕಗಳಿಗಾಗಿ ಎನ್ನುತ್ತಾರೆ ಕೃತಿಕಾರರು. ಜಾತಿಯ ಕಾರಣಕ್ಕೆ ಗಣಿತ ತರಗತಿಯಲ್ಲಿ ಆದ ಅವಮಾನ, ಸಲೂನ್‌ನಲ್ಲಿ ಕೂದಲು ಕತ್ತರಿಸಲು ನಿರಾಕರಣೆಯಿಂದ ದುಃಖಿತ ಬಾಲ ಭೀಮನಿಗೆ ಅಕ್ಕ ಅಕ್ಕರೆಯಿಂದ ಮುದ್ದು ಮಾಡಿ ಕೂದಲು ಕತ್ತರಿಸಿದ ಕರುಣಾಜನಕ ಸನ್ನಿವೇಶವೂ ಬರುತ್ತದೆ.
ಅಂಬೇಡ್ಕರ್ ಓದು, ಉದ್ಯೋಗ, ಹೋರಾಟ, ವರ್ಣ ಬಹಿಷ್ಕಾರ, ಬೌದ್ಧ ಧರ್ಮ ಸ್ವೀಕಾರ, ಕಾನೂನು ಸಚಿವ, ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಹೀಗೆ ಮಹತ್ವದ ಜವಾಬ್ದಾರಿಯ ನಿರ್ವಹಣೆಯನ್ನು ಚಿತ್ರಿಸುವ ಮೂಲಕ ‘ಬಾಬಾಸಾಹೇಬರು ಒಂದುವೇಳೆ ಹುಟ್ಟದಿದ್ದರೆ’ ಇದೆಲ್ಲ ಆಗುತ್ತಿತ್ತೇ ಎನ್ನುವ ಪ್ರಶ್ನೆಗೆ ಉತ್ತರದಂತೆ ಈ ಕೃತಿ ಕಾಣಿಸುತ್ತದೆ. ಅಂಬೇಡ್ಕರ್ ಬದಕಿನಲ್ಲಿ ಸಂಭವಿಸಿದ ಘಟನೆಗಳೇ ಕೃತಿಯ ಜೀವಾಳ. ಒಂದು ಘಟನೆಯೂ ಒಂದು ಘಟಕವಾಗಿದ್ದು, ಒಟ್ಟು 24 ಘಟಕಗಳನ್ನು ಇದು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.