ಕನ್ನಡದ ಪ್ರಮುಖ ಕಥೆಗಾರ ಹಾಗೂ ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವ ಬಿ.ಎಲ್.ವೇಣು ಅವರ ಹದಿನಾಲ್ಕನೇ ಕಥಾಸಂಕಲನ ‘ಮಸೀದಿ ಬಾವಿ ಮತ್ತು ಇತರ ಕಥೆಗಳು’. ಈ ಕಥಾ ಸಂಕಲನದಲ್ಲಿ ಒಟ್ಟು 15 ಸಣ್ಣ ಕಥೆಗಳಿವೆ.
ಸಂಕಲನದ ಬಹುತೇಕ ಕಥೆಗಳು ಜಾತಿ, ಧರ್ಮಗಳ ಸಂಕೋಲೆಗಳ ಸುತ್ತಲೇ ಸುತ್ತುತ್ತವೆ. ಈ ಕಥೆಗಳ ಪಾತ್ರಗಳು ಅಲ್ಲಿಂದ ಬಿಡುಗಡೆ ಪಡೆಯಲು ನಡೆಸುವ ಹೋರಾಟಗಳೇ, ಕಥೆಗಳಾಗಿ ರೂಪುಗೊಂಡಿವೆ.
‘ಮಸೀದಿ ಬಾವಿ’ ಕಥೆಯು ವಿಡಂಬನಾತ್ಮಕವಾಗಿ ಧರ್ಮಗಳ ನಡುವಿನ ಕಿತ್ತಾಟವನ್ನು ತೋರಿಸಿಕೊಡುತ್ತದೆ. ಮಸೀದಿ ಬಾವಿಯಲ್ಲಿ ನಾಯಿಯೊಂದು ಬೀಳುವ ಮೂಲಕ ಆರಂಭವಾಗುವ ಕಥೆಯು, ಧರ್ಮಗಳ ಹೆಸರಲ್ಲಿ ಕೊಳೆತು ನಾರುವ ಮನುಷ್ಯ ಸಂಬಂಧಗಳನ್ನು ಸೂಚ್ಯವಾಗಿ ನಿರೂಪಿಸುತ್ತದೆ.
‘ಒಂದು ಸಾವಿನ ಸುತ್ತಾ’, ‘ಅಗೋಚರ’ ಕಥೆಗಳು ಧರ್ಮದ ಅಮಲಿನಲ್ಲಿರುವವರ ಸುತ್ತ ಸುತ್ತುವ ಕಥೆಗಳಾಗಿವೆ. ‘ಜೆಸಿಬಿ ಮಾಲಿಂಗ’, ‘ಅಜಗಜಾಂತರ’, ‘ನಾಳೆಗಳಿಲ್ಲದವರು’, ‘ಕರುಣಾಳು ಬಾ ಬೆಳಕೆ’ ಕಥೆಗಳು ಹಳ್ಳಿಯ ಜನರಲ್ಲಿ ಬೇರೂರಿರುವ ಜಾತೀಯತೆಯನ್ನು ತೆರೆದಿಡುತ್ತದೆ.
‘ಹೀಗೊಂದು ಪ್ರೇಮಾಯಣ’, ‘ಮದುವೆಯ ಈ ಬಂಧ’, ‘ಸಂಗಾತಿ’ ಕಥೆಗಳು ಪ್ರೀತಿ, ಪ್ರೇಮ, ಮದುವೆಗಳ ಕಥೆಗಳಾಗಿವೆ. ‘ಯಲಕ್ಷನ್ಗೆ ನಿಂತ್ರು ಕಾವಿ ಶೂರರು!’, ‘ಸ್ವಾಮೀಜಿ’ ಕಥೆಗಳು ಮಠಾಧೀಶರೆನಿಸಿಕೊಂಡವರ ಪುರಾಣಗಳನ್ನು ಬಿಚ್ಚಿಡುತ್ತವೆ.
ವಿಡಂಬನಾತ್ಮಕ ನಿರೂಪಣೆಯ ಮೂಲಕ ಪ್ರಚಲಿತ ಸಂಗತಿಗಳು ಹಾಗೂ ಸಮಕಾಲೀನ ಘಟನೆಗಳನ್ನು ಕಥಾ ವಸ್ತುಗಳನ್ನಾಗಿಸುವ ವೇಣು ಅವರ ಬರವಣಿಗೆಯಲ್ಲಿ ಓದಿಸಿಕೊಂಡು ಹೋಗುವ ಗುಣವಿದೆ. ಇಲ್ಲಿನ ಕಥೆಗಳ ಪಾತ್ರಗಳು ನಮ್ಮೊಳಗಿನ ಸಮಾಜದಿಂದಲೇ ಜೀವತಾಳಿದಂತಿವೆ.
ಮಸೀದಿ ಬಾವಿ ಮತ್ತು ಇತರ ಕಥೆಗಳು
ಸಂ: ಬಿ.ಎಲ್. ವೇಣು
ಪ್ರ: ಗೀತಾಂಜಲಿ ಪಬ್ಲಿಕೇಷನ್ಸ್
ಸಂ: 9740066842
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.