ADVERTISEMENT

ಮಾಗದ ಕಥೆಗಳ ಒಗರು

​ಪ್ರಜಾವಾಣಿ ವಾರ್ತೆ
Published 9 ಮೇ 2020, 19:45 IST
Last Updated 9 ಮೇ 2020, 19:45 IST
ಕರಿಜಾಲಿಮರ
ಕರಿಜಾಲಿಮರ   

ಒಟ್ಟು 14 ಕಥೆಗಳ ಸಣ್ಣ ಕಥಾ ಸಂಕಲನವಿದು. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು. ಮಂಜಯ್ಯ ದೇವರಮನಿ ಅವರು ಹಳ್ಳಿಗಳಲ್ಲಿ ತಾವು ಕಂಡುಂಡ ಘಟನೆಗಳನ್ನು, ಪಾತ್ರಗಳನ್ನು ಇಲ್ಲಿ ಕಥೆಯಾಗಿಸಿದ್ದಾರೆ. ಅವರೇ ಅಂದಂತೆ, ಮಧ್ಯೆ ಕರ್ನಾಟಕದ ಎರೆಮಣ್ಣಿನ ವಾಸನೆಯಲ್ಲಿ ಇಲ್ಲಿನ ಕಥೆಗಳು ಹುಟ್ಟಿವೆ.

ಗ್ರಾಮ್ಯಭಾರತದಲ್ಲಿ ಇನ್ನೂ ಬರೆಯಬಹುದಾದ ಎಷ್ಟೊಂದು ಕಥೆಗಳಿವೆ ಎನ್ನುವುದನ್ನು ಗಮನಿಸಿದಾಗ ಅಚ್ಚರಿ ಉಂಟಾಗುತ್ತದೆ. ಗ್ರಾಮೀಣ ಬದುಕಿನ ನೋವು, ನಲಿವು, ದುಗುಡಗಳಿಗೆ ಧ್ವನಿ ನೀಡುವಾಗ ಕಥೆಗಾರರು ಅಲ್ಲಿಯ ಭಾಷಾಸೊಗಡನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಲ್ಲಿಯ ಕಥೆಗಳಲ್ಲಿ ಘಟನೆಗಳು ಯಥೇಚ್ಛವಾಗಿವೆ. ಘಟನೆಗಳನ್ನು ಸ್ವಾರಸ್ಯ ಕೆಡದಂತೆ ಬರೆಯುವ ಕಲೆಯೂ ಕಥೆಗಾರರಿಗೆ ಸಿದ್ಧಿಸಿದೆ.

ಪಾತ್ರಗಳ ಚಿತ್ರಣವೂ ವಿವರಪೂರ್ಣವಾಗಿದೆ. ಆದರೆ ಅವೆಲ್ಲವೂ ಕಥೆಗಳಾಗುತ್ತವೆಯೆ ಎನ್ನುವುದರ ಕಡೆಗೆ ಗಮನ ಕೊಟ್ಟಂತಿಲ್ಲ. ಕಟ್ಟುವ ಕಲೆಗಾರಿಕೆಯ ಹಿನ್ನೆಲೆಯಲ್ಲಿ 2-3 ಕಥೆಗಳನ್ನು ಬಿಟ್ಟರೆ ಉಳಿದವು ನಿರಾಶೆ ಹುಟ್ಟಿಸುತ್ತವೆ. ಮಾಗುವ ಮುನ್ನವೇ ನೆಲಕ್ಕೆ ಬೀಳುವ ಮಾವಿನ ಮಿಡಿಗಳಂತೆ ಕಥೆಗಳು ಹರಟೆ, ಪ್ರಬಂಧಗಳ ಶೈಲಿಯಲ್ಲಿ ಸೊರಗಿರುವುದು ಎದ್ದು ಕಾಣುತ್ತದೆ. ಇದನ್ನು ಮುನ್ನುಡಿಯಲ್ಲಿ ಇನ್ನೊಬ್ಬ ಕಥೆಗಾರ ಇಂದ್ರಕುಮಾರ್‌ ಎಚ್‌.ಬಿ. ಸರಿಯಾಗಿಯೇ ಗುರುತಿಸಿದ್ದಾರೆ.

ADVERTISEMENT

ಕಥೆಗಾರರು ಮಾಗುವುದಕ್ಕೆ ಇನ್ನಷ್ಟು ‘ಕಾಯ’ಬೇಕು. ಇಲ್ಲವಾದಲ್ಲಿ, ‘ಕಾರ್ಮುಗಿಲು ಕೋಲ್ಮಿಂಚು’ ಕಥೆಯ ‘ಅಯ್ಯೋ ಗುಡ್ಡದಯ್ಯ.. ಇದಕರ ಏನು ಬ್ಯಾನಿ ಬಂತಾ.. ಹೋಗಿ ಹೋಗಿ ಅವನ ಹೊಲ್ದಾಗ ಮೇದತಿ. ಬೇರೆಲ್ಲಿ ಮೇಯಕ ಹುಲ್ಲು ಇರಲಿಲ್ಲ?’ ಎಂಬ ಮಾಳವ್ವನ ಮಾತುಗಳನ್ನು ಓದುಗರೂ ಹೇಳಬೇಕಾಗುತ್ತದೆ.

ಕರಿಜಾಲಿ ಮರ (ಕಥಾ ಸಂಕಲನ)
ಲೇ: ಮಂಜಯ್ಯ ದೇವರಮನಿ
ಪ್ರ: ಸುದೀಕ್ಷ ಸಾಹಿತ್ಯ ಪ್ರಕಾಶನ, ರಾಣೇಬೆನ್ನೂರು.
ಮೊ: 78926 21172

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.