ADVERTISEMENT

ಅಪೂರ್ಣರ ಏಕಸೂತ್ರಬಂಧ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:36 IST
Last Updated 9 ಮಾರ್ಚ್ 2019, 19:36 IST
ಆಧೇ ಅಧೂರೇ
ಆಧೇ ಅಧೂರೇ   

ನಾಟಕ: ಆಧೇ ಅಧೂರೇ
ನಾಟಕಕಾರ: ಮೋಹನ್ ರಾಕೇಶ್
ಕನ್ನಡಕ್ಕೆ: ಸಿದ್ಧಲಿಂಗ ಪಟ್ಟಣಶೆಟ್ಟಿ
ಪ್ರಕಾಶಕರು: ಅನನ್ಯ ಪ್ರಕಾಶನ, ಧಾರವಾಡ
ಬೆಲೆ: ₹120
ಪುಟಗಳು: 132

‘ಆಧೇ ಅಧೂರೇ’ ಸಮಕಾಲೀನ ಬದುಕಿನ ಅರ್ಥಪೂರ್ಣವಾದ ಹಿಂದಿ ನಾಟಕ. ‘ಆಧೇ ಅಧೂರೇ’ ಅಂದರೆ ‘ಅಪೂರ್ಣರು’ ಎಂಬ ಅರ್ಥ ಧ್ವನಿಸುತ್ತದೆ. ಮೋಹನ್ ರಾಕೇಶ್ ಅವರು ಬರೆದ ಈ ನಾಟಕವನ್ನು ಇದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ ಸಿದ್ಧಲಿಂಗ ಪಟ್ಟಣಶೆಟ್ಟಿ. ಮೋಹನ್ ಅವರು ಹಿಂದಿಯ ಆಡು ಶೈಲಿಗಳನ್ನು ಬಳಸಿರುವಂತೆ, ಪಟ್ಟಣಶೆಟ್ಟಿಯವರು ಧಾರವಾಡ ಶೈಲಿಯ ಕನ್ನಡವನ್ನು ಇಲ್ಲಿ ಬಳಸಿಕೊಂಡಿದ್ದಾರೆ. ಸೂತ್ರಧಾರ, ನಾಲ್ಕು ಪುರುಷ ಪಾತ್ರಗಳು, ಮುಖ್ಯ ಸ್ತ್ರೀ ಪಾತ್ರವೊಂದು ನಾಟಕದಲ್ಲಿದೆ. ಪುರುಷ ಪಾತ್ರಗಳಲ್ಲಿ ಅವರವರ ವ್ಯಕ್ತಿತ್ವ ಬಿಂಬಿಸುವ ರೀತಿಯಲ್ಲಿ, ಅಲ್ಲಲ್ಲಿ ಭಾಷೆಯನ್ನು ಬದಲಿಸಿ ಬಳಸಲಾಗಿದೆ.

ನಮ್ಮೆಲ್ಲರ ಬದುಕಿನಲ್ಲಿ ಸಂಭವಿಸುವ ಮಹತ್ವದ ಪರಿಸ್ಥಿತಿಗಳನ್ನು ವಿಡಂಬಿಸುವ ನಾಟಕವಿದು. ಇದರಲ್ಲಿ ಬರುವ ಪಾತ್ರಗಳು, ಮನಸ್ಥಿತಿಗಳು ನಮ್ಮದೇ ಬದುಕಿನ ವಾಸ್ತವದ ಕನ್ನಡಿಯಂತಿವೆ. ಇದಕ್ಕೆ ವಿಶಿಷ್ಟ ಭಾಷಾ ಪ್ರಯೋಗ ಸೇರಿ, ಕೇಳಿಸಿಕೊಳ್ಳುವ ಗುಣವನ್ನೂ ಹೊಂದಿದೆ. ಸ್ತ್ರೀ- ಪುರುಷರ ಜೀವನದಲ್ಲಿ ಮೂಡುವ ಆಕರ್ಷಣೆ, ವಿಕರ್ಷಣೆಗಳ ಜೀವಂತ ಚಿತ್ರಣವಿದೆ.

ADVERTISEMENT

ಆಧುನಿಕ ಸಮಾಜದಲ್ಲಿ ಕೌಟುಂಬಿಕ ಜೀವನ ವಿಚ್ಛಿದ್ರಗೊಳ್ಳುವ ಸನ್ನಿವೇಶಗಳಿಗೂ ನಾಟಕ ಸಾಕ್ಷಿಯಾಗಿದೆ. ಮನುಷ್ಯನ ಅಸಂತೋಷಗಳ ಅಪೂರ್ಣತೆಯ ಚಿತ್ರಣವನ್ನು ಇದು ಹೊಂದಿದೆ. ಎಷ್ಟೇ ಭಿನ್ನವಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಅವರ ನಡೆಯಲ್ಲಿ ಇಣುಕುವ ಏಕಸೂತ್ರದ ವಿಶ್ಲೇಷಣೆಯಿದೆ. ಒಬ್ಬನೇ ನಟ ಐದು ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸುವ ರಂಗಚಾತುರ್ಯ ಮತ್ತು ರಂಗ ಸಂಯೋಜನೆಯನ್ನು ಯಶಸ್ವಿಯಾಗಿ ರೂಪಿಸಿದ್ದಾರೆ ನಾಟಕಕಾರ. ಅದನ್ನು ಕನ್ನಡದಲ್ಲಿ ಅಷ್ಟೇ ಸೊಗಸಾಗಿ
ಕಟ್ಟಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.