ADVERTISEMENT

ಜಾನಪದ ದರ್ಶನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 13:37 IST
Last Updated 9 ಮಾರ್ಚ್ 2019, 13:37 IST
   

ಲೇ: ಡಾ.ಎಸ್‌.ಎಂ. ಮುತ್ತಯ್ಯ
ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಪುಟ: 172
ಬೆಲೆ: 140

ಜಾನಪದ ದರ್ಶನ– ಬಿ.ಟಿ. ಲಕ್ಷ್ಮಣ ದತ್ತಿನಿಧಿಯಡಿ ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಪುಸ್ತಕ. ಡಾ.ಎಸ್‌.ಎಂ. ಮುತ್ತಯ್ಯ ಅವರು ಸಾಂದರ್ಭಿಕವಾಗಿ ಬರೆದ ಲೇಖನಗಳ ಸಂಗ್ರಹವಿದು. ಜನಪದರ ಬದುಕನ್ನು ಇಲ್ಲಿ ಚಿತ್ರಿಸಲಾಗಿದೆ. ಬದಲಾದ ಕಾಲಘಟ್ಟದಲ್ಲಿ ಬುಡಕಟ್ಟು ಜನರ ಬದುಕು ಸ್ಥಿತ್ಯಂತರಗೊಂಡಿದೆ. ಅವರ ಬದುಕಿನ ಅಪರೂಪದ ವಿವರಗಳನ್ನು ಈ ಹೊತ್ತಿಗೆಯಲ್ಲಿ ದಾಖಲಿಸಲಾಗಿದೆ.

ಒಟ್ಟು ಹದಿನೇಳು ಲೇಖನಗಳಿವೆ. ಯಾವುದೇ ಸೈದ್ಧಾಂತಿಕ ಗೋಜಲುಗಳು ಇಲ್ಲದೆ ಸರಳವಾಗಿ ಓದುವರಿಗೆ ವಿಷಯ ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಕನ್ನಡ ಜಾನಪದ ಸಂಶೋಧನೆಉ ಹೊಸ ನೆಲೆಗಳು, ಬಡಕಟ್ಟುಗಳ ಮೌಖಿಕ ಸಾಹಿತ್ಯ, ಅವರ ಅನುಭಾವದ ನೆಲೆಗಳು, ತೊಗಲು ಗೊಂಬೆಯಾಟ, ಮ್ಯಾಸ ಬೇಡರ ಕೋಮ ಸೌಹಾರ್ದದ ಕುರುಹುಗಳ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಲಾಗಿದೆ.

ADVERTISEMENT

***

ಕಂಗಳ ಮುಂದಣ ಕತ್ತಲು
ಲೇ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಟ: 164
ಬೆಲೆ: 150

ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಪಿಎಚ್‌.ಡಿ ಮಹಾಪ್ರಬಂಧ ‘ವಿಶ್ವಗ್ರಾಮದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಭಾರತದ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯ ಸ್ವರೂಪ’ ಪುಸ್ತಕವಾಗಿ ಹೊರಬಂದಿದೆ. ಇದಕ್ಕೆ ‘ಕಂಗಳ ಮುಂದಣ ಕತ್ತಲು’ ಎಂಬ ಹೆಸರಿಡಲಾಗಿದೆ. ಜಾತಿಯೆಂಬ ಅಗೋಚರ ಸಮುದಾಯ ಭಾರತೀಯ ಸಮುದಾಯವನ್ನು ಆಳುತ್ತಿರುವುದು ಗುಟ್ಟೇನಲ್ಲ.

ಜಾತಿಪದ್ಧತಿಯ ಕಬಂಧಬಾಹುಗಳು ನಗರ ಪ್ರದೇಶ, ಕೊಳಚೆ ಪ್ರದೇಶ, ಗ್ರಾಮ, ರಾಷ್ಟ್ರೀಯ, ಅಂತರಾಷ್ಟ್ರೀಯಮಟ್ಟದಲ್ಲೂ ಪಾಪಸುಕಳ್ಳಿಯಂತೆ ಹಬ್ಬಿಸುವ ಬಗೆಯನ್ನು ಚಿನ್ನಸ್ವಾಮಿ ಅವರ ಬರಹದ ಆರಂಭದಲ್ಲಿಯೇ ಗಮನಿಸಬಹುದು. ಅವರು ಮಂಡಿಸುವ ವಿಶ್ವಗ್ರಾಮದ ಪರಿಕಲ್ಪನೆ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳ ನಡುವಿನ ನೀಚ ಅನುಸಂಧಾನವನ್ನು ಅನಾವರಣಗೊಳಿಸುತ್ತದೆ.

ಭಾರತೀಯ ಜಾತಿ ಮನಸ್ಸಿನ ದ್ವಿಬಗೆ ವ್ಯಕ್ತಿತ್ವ ಅಷ್ಟು ಸುಲಭವಾಗಿ ಬದಲಾಗಲು ಸಾಧ್ಯವಿಲ್ಲ ಎನ್ನುವುದು ಚಿನ್ನಸ್ವಾಮಿ ಅವರು ಇಲ್ಲಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.