ADVERTISEMENT

ಕಲಾಂ ಜೀವನ ದರ್ಶನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 19:45 IST
Last Updated 14 ಸೆಪ್ಟೆಂಬರ್ 2019, 19:45 IST
abdul kalam
abdul kalam   

‘ಸರಳವಾಗಿ ಬದುಕಿ, ಉದಾತ್ತವಾಗಿ ಚಿಂತಿಸಿ’ ಎನ್ನುವ ಮಾತಿಗೆ ಅನ್ವರ್ಥವಾಗಿ ಬದುಕಿದ್ದವರು ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ. ವೃತ್ತಿ ಇರಲಿ, ವೈಯಕ್ತಿಕ ಬದುಕೇ ಇರಲಿ; ಎಲ್ಲರೊಂದಿಗೆ ಅವರು ಬೆರೆತು ಒಂದಾಗುತ್ತಿದ್ದ ಬಗೆ ಎಂಥವರಲ್ಲೂ ಬೆರಗು ಮೂಡಿಸುತ್ತದೆ. ಇಂಥ ಹಲವು ಬೆರಗುಗಳ ಗುಚ್ಛವೇ ಜಯಪ್ರಕಾಶ ಪುತ್ತೂರು ಅವರ ‘ಕಲಾಂ ಜೀವನ ಧರ್ಮ’ ಕೃತಿ.

ಸಾರ್ವಜನಿಕ ಸಂಪರ್ಕ ವಲಯದಲ್ಲಿದ್ದ ಜಯಪ್ರಕಾಶ್‌ ಪುತ್ತೂರು ಎಡಿಎ ಹಾಗೂ ಡಿಆರ್‌ಡಿಒ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು. ಈ ಸಂದರ್ಭದಲ್ಲಿ ಅಬ್ದುಲ್‌ ಕಲಾಂ ಅವರ ಜತೆಗಿನ ನಿಕಟ ಸಂಪರ್ಕದಿಂದ ಒದಗಿಬಂದ ಕ್ಷಣಗಳನ್ನು ದಾಖಲಿಸಿದ್ದಾರೆ. ದೊಡ್ಡ ವ್ಯಕ್ತಿತ್ವದ ಒಡನಾಟಗಳನ್ನು ನೆನಪಿಸಿಕೊಂಡಿದ್ದಾರೆ. ಕೃತಿಯುದ್ದಕ್ಕೂ ಕಲಾಂ ಅವರ ಶಿಸ್ತು, ಮಾನವೀಯತೆಯ ಮುಖಗಳು ಅನಾವರಣಗೊಳ್ಳುತ್ತವೆ. ಅವರು ಬದುಕು ರೂಪಿಸಿಕೊಂಡ ಬಗೆ ಇತರರಿಗೆ ಪ್ರೇರಣೆಯನ್ನು ಒದಗಿಸುತ್ತದೆ.

ರಾಷ್ಟ್ರಪತಿಯಾಗಿದ್ದಾಗ ತಿರುವನಂತಪುರಕ್ಕೆ ಹೋದ ಸಂದರ್ಭ ಶಿಷ್ಟಾಚಾರದಂತೆ ರಾಜಭವನದಲ್ಲಿ ವಾಸ್ತವ್ಯ ಹೂಡಿದ ವೇಳೆಯಲ್ಲಿ ಈ ಹಿಂದೆ ಕಾರಿನ ಚಾಲಕರಾಗಿದ್ದವರು, ಶೂ ಪಾಲಿಷ್‌ ಮಾಡಿದ್ದವರು, ರಸ್ತೆ ಬದಿಯಲ್ಲಿ ಚಹಾ ಮಾಡಿಕೊಟ್ಟವರು ಎಲ್ಲರನ್ನು ನೆನೆದು ಮಾತನಾಡಿಸಿದ ಘಟನೆ ಎಂಥವರಲ್ಲೂ ಅಭಿಮಾನವನ್ನು ಉಕ್ಕಿಸುತ್ತದೆ. ಯಾರಿಂದಾದರೂ ಇರಿಸು ಮುರಿಸು ಆಗುವ ಪ್ರಸಂಗ ಬಂದರೆ, ಅಂಥವರನ್ನು ‘ಫೆಂಟಾಸ್ಟಿಕ್‌ ಫೆಲೊ’ ಎಂದೇ ಸಂಬೋಧಿಸಿ, ಆ ಪದಕ್ಕೆ ಹೊಸ ಅರ್ಥ ತುಂಬಿದ್ದರು ಎಂಬುದನ್ನು ಲೇಖಕರು ಇಲ್ಲಿ ಸ್ಮರಿಸುತ್ತಾರೆ.

ADVERTISEMENT

ಆದರೆ, ಲೇಖಕರು ಅನುಭವಗಳನ್ನು ದಾಖಲಿಸುವ ಭರದಲ್ಲಿ ನಿರೂಪಣೆಯಲ್ಲಿ ಬಿಗಿತನವನ್ನು ಕಾಯ್ದುಕೊಂಡಿಲ್ಲ. ನೆನಪುಗಳೆಲ್ಲವೂ ಇನ್ನಷ್ಟು ನವಿರಾಗಿ ನಿರೂಪಿಸಿದ್ದರೆ ಕೃತಿಯ ಓದಿನ ಆಪ್ತತೆ ಮತ್ತಷ್ಟು ಹೆಚ್ಚುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.