ADVERTISEMENT

‘ತನು ಬಿಂದಿಗೆ’ ಪುಸ್ತಕ ವಿಮರ್ಶೆ | ಗ್ರಾಮೀಣ ಬದುಕಿನ ಸಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 19:30 IST
Last Updated 21 ಸೆಪ್ಟೆಂಬರ್ 2019, 19:30 IST
ತನು ಬಿಂದಿಗೆ
ತನು ಬಿಂದಿಗೆ   

ತನು ಬಿಂದಿಗೆ (ಕತೆಗಳು)
ಲೇ: ನಾಗರಾಜ ಕೋರಿ
ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಮೊ: 94491 74662

**

ಬಯಲು ಸೀಮೆಯ ಜನರ ಬದುಕು, ಬವಣೆಗಳನ್ನು ತೆರೆದಿಡುವ ‘ತನುಬಿಂದಿಗೆ’ ಎಲ್ಲ ಕಾಲ, ದೇಶಕ್ಕೆ ನಿಲುಕುವ, ಅನ್ವಯಿಸುವ ಕಥೆಗಳ ಗುಚ್ಛ. ಕಾಡುವ ಕಾಮನೆ, ಬಯಕೆ, ಪ್ರೀತಿ, ನಂಬಿಕೆಯೊಳಗಿನ ಮೌಢ್ಯ, ಸಾಮಾಜಿಕ ಕಟ್ಟುಪಾಡು ಮುಂತಾದವುಗಳ ಅಭಿವ್ಯಕ್ತಿ ಈ ಪುಸ್ತಕ. ಗ್ರಾಮೀಣ ಜೀವನದ ನಿತ್ಯ ಘಟನೆಗಳೇ ಇಲ್ಲಿನ ಕಥೆಗಳ ಸಾರ.

ADVERTISEMENT

ಶ್ರೀಮಂತಿಕೆಯ ಸೊಕ್ಕು, ಸಂಪ್ರದಾಯ–ಆಚಾರ ವಿಚಾರಗಳು, ದೈವ ನಂಬಿಕೆ ತಂದೊಡ್ಡುವ ಅಸಂಗತತೆ, ದೌರ್ಬಲ್ಯ–ಅಸಹಾಯಕತೆಗಳ ನಡುವಿನ ಸಂಘರ್ಷ, ದೈಹಿಕ ಮಿಲನಕ್ಕಂಟಿದ ಸಲ್ಲದ ಮಡಿ, ಅನಿರೀಕ್ಷಿತ ಸಂಗತಿಗಳನ್ನು ನವಿರಾಗಿ ಚಿತ್ರಿಸಿದ್ದಾರೆ ಲೇಖಕರು.

ಜೀವನದ ಪಯಣದಲಿ ನಿಲ್ದಾಣಗಳೆಷ್ಟೋ. ಸಹಯಾತ್ರಿಕರು ಕೂಡ. ‘ತನುಬಿಂದಿಗೆ’ ಇಂತಹದ್ದೇ ಪಯಣದ ಸಾಕ್ಷಿ. ಚಲನಶೀಲ ಬದುಕಿನ ಬದಲಾವಣೆ, ಪಲ್ಲಟಗಳು ಒಮ್ಮೊಮ್ಮೆ ಜಡತ್ವಕ್ಕೂ, ಕೆಲವೊಮ್ಮೆ ದುರಂತಕ್ಕೂ ನಾಂದಿ ಹಾಡಬಲ್ಲವು. ಪರಿಣಾಮ ದಿನದಿನಕ್ಕೂ ಮಗ್ಗಲು ಬದಲಿಸುವ ಬಾಳು, ಕಟ್ಟಳೆಗಳ ಕೂಪದಲ್ಲಿ ಇನ್ನಿಲ್ಲವಾಗಬಹುದು, ಇರಲೂಬಹುದು ಜೀವಚ್ಛವದಂತೆ ಅಥವಾ ಸುಖಾಂತ್ಯಗೊಳ್ಳಬಹುದು.

ಆದಾಗ್ಯೂ ಒಳಬೇಗುದಿ, ಸಂಕಟ, ತಲ್ಲಣಗಳು ಕಾಡುತ್ತಲೇ ಇರುತ್ತವೆ ಬೆನ್ನತ್ತಿದ ಬೇತಾಳದಂತೆ ಎಂಬುದು ಪುಸ್ತಕದ ಧ್ವನಿ. ಗಮನದ ಹಾದಿಗೆ ದಿಕ್ಸೂಚಿಯಂತಿವೆ ಈ ಕಥಾಸಂಕಲದಲ್ಲಿನ ಬಹುತೇಕ ಕಥೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.