ADVERTISEMENT

ಅಪ್ಪನ ಹೆಗಲಿನಿಂದ ಕಂಡ ಭಾವಜಗತ್ತು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 19:30 IST
Last Updated 14 ನವೆಂಬರ್ 2020, 19:30 IST
.
.   

ಅಪ್ಪನ ಹೆಗಲು
ಸಂಪಾದಕ: ರಾಜಶೇಖರ ಜಮದಂಡಿ
ಪು: 656 ಬೆ: ₹ 600
ಪ್ರಕಾಶನ: ಬಸವ ಪ್ರಕಾಶನ, ಹೊಸಪೇಟೆ (ದೂ: 9448441471)

ಸಾಹಿತ್ಯದಲ್ಲಿ ‘ಅಮ್ಮ’ ಮತ್ತೆ ಮತ್ತೆ ಬಳಕೆಯಾಗಿ, ಸವಕಲೂ ಆಗಿರುವ ವಿಷಯಗಳಲ್ಲಿ ಒಂದು. ಅಮ್ಮನ ಬಗ್ಗೆ ಬಂದ ಪದ್ಯಗಳು, ಕಥೆಗಳು, ಸನ್ನಿವೇಶಗಳು ರಾಶಿ ರಾಶಿ ಇವೆ. ಹಾಗಿದ್ದೂ ‘ಅಮ್ಮ’ ಇಂದಿನ ಲೇಖಕರನ್ನೂ ಎಡೆಬಿಡದೇ ಕಾಡುತ್ತಲೇ ಇದ್ದಾಳೆ. ಹಾಗೆ ನೋಡಿದರೆ ಅಮ್ಮ ಕಾಡಿದ ಒಂದಂಶದಷ್ಟೂ ಅಪ್ಪ ಕಾಡಿದಂತಿಲ್ಲ. ಈ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿ ‘ಅಪ್ಪನ ಹೆಗಲು’ ಕೃತಿ ಪ್ರಕಟವಾಗಿದೆ.

ರಾಜಶೇಖರ ಜಮದಂಡಿ ಸಂಪಾದಿಸಿರುವ 656 ಪುಟಗಳ ಈ ಕೃತಿಯಲ್ಲಿ ಸಾಹಿತ್ಯಲೋಕದ ನೂರು ಹಿರಿ ಕಿರಿಯ ಲೇಖಕರು ಅಪ್ಪನ ನೆನಪುಗಳನ್ನು ಮೊಗೆದು ಕೊಟ್ಟಿದ್ದಾರೆ. ಇಲ್ಲಿ ಗೊ.ರು. ಚನ್ನಬಸಪ್ಪ, ಮೂಡ್ನಾಕೂಡು ಚಿನ್ನಸ್ವಾಮಿ, ನಾ. ಮೊಗಸಾಲೆ, ಎಸ್‌. ನಟರಾಜ ಬೂದಾಳು, ಗಂಗಾವತಿ ಬಿ. ಪ್ರಾಣೇಶ್‌, ವಿ. ಮನೋಹರ, ಅಮರೇಶ ನುಗಡೋಣಿ, ತಾರಿಣಿ ಶುಭದಾಯಿನಿ, ಸುನಂದಾ ಕಡಮೆ, ಭುವನೇಶ್ವರಿ ಹೆಗಡೆ, ಅರವಿಂದ ಚೊಕ್ಕಾಡಿ, ಎಚ್. ಡುಂಡಿರಾಜ್‌ ಸೇರಿದಂತೆ ಹಲವು ಹಿರಿಯ, ಪ್ರಸಿದ್ಧ ಸಾಹಿತಿಗಳ ಜೊತೆಗೆ ಅಷ್ಟಾಗಿ ಪರಿಚಿತರಲ್ಲದ ಹಲವರ ಬರಹಗಳೂ ಇವೆ. ಆದರೆ ಎಲ್ಲರ ಭಾವವರ್ಣದಲ್ಲಿ ಅದ್ದಿ ತೆಗೆದ ಕುಂಚದಲ್ಲಿ ಮೂಡಿದ ಅಪ್ಪನ ಚಿತ್ರ ಮಾತ್ರ ಒಂದೇ. ಅದು ಅಂತಃಕರಣದಿಂದ ಮೂಡಿದ್ದು; ಕೃತಜ್ಞತೆಯ ಕಣ್ಣುಗಳಲ್ಲಿ ಜೀವ ತಳೆದಿದ್ದು; ಮತ್ತೊಮ್ಮೆ ತಮಗೆ ತಾವೇ ಹೇಳಿಕೊಂಡ ಆಪ್ತ ಸ್ವರದಲ್ಲಿ ರಿಂಗಣಿಸಿದ್ದು.

ADVERTISEMENT

ತನ್ನ ತಂದೆಯ ನೆನಪಿನಲ್ಲಿ ಕೈಗೆತ್ತಿಕೊಂಡ ಈ ಕೃತಿಯ ಸಂಪಾದನೆಯ ನೆಪದಲ್ಲಿ ರಾಜಶೇಖರ ಜಮದಂಡಿ, ಇಲ್ಲಿನ ಎಲ್ಲ ಲೇಖಕರಿಗೂ ಅವರ ತಂದೆಯನ್ನು ನೆನಪಿಸಿದ್ದಾರೆ. ಅಷ್ಟೇ ಅಲ್ಲ, ಇದನ್ನು ಓದಿದವರೂ ಅವರ ತಂದೆಯ ನೆನಪಲ್ಲಿ ಹನಿಗಣ್ಣಾಗುವ ಹಾಗೆ ಮಾಡಿದ್ದಾರೆ. ಇಲ್ಲಿನ ನೂರು ಲೇಖಕರ ಅಪ್ಪಂದಿರ ಭಾವುಕಚಿತ್ರಗಳೆಲ್ಲ ಸೇರಿ ನಮ್ಮ ಮನಸಲ್ಲಿ ಒಂದು ಭಾವಚಿತ್ರ ರೂಪುಗೊಳ್ಳುತ್ತದೆ. ಅದು ನಮ್ಮ ತಂದೆಯ ಆಪ್ತಚಿತ್ರವಾಗಿರುತ್ತದೆ. ಈ ಪುಸ್ತಕದ ಸಾರ್ಥಕತೆ ಇರುವುದೂ ಅಂಥದ್ದೊಂದು ಚಿತ್ರವನ್ನು ನಮ್ಮ ಮನಸ್ಸಿನ ಮುನ್ನೆಲೆಗೆ ತಂದು ನಿಲ್ಲಿಸುವುದರಲ್ಲಿಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.