ADVERTISEMENT

ದೇವನೂರು ಕಥನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 19:45 IST
Last Updated 28 ಮಾರ್ಚ್ 2020, 19:45 IST
ದೇವನೂರು ಕಥನ
ದೇವನೂರು ಕಥನ   

ಸಾಹಿತಿ ದೇವನೂರ ಮಹಾದೇವ ಅವರ ಸಮಗ್ರ ಬರಹಗಳ ಅಧ್ಯಯನದ ಪುಸ್ತಕ ರೂಪ ಟಿ.ಪಿ. ಅಶೋಕ ಅವರ ‘ದೇವನೂರು ಕಥನ’. ಕನ್ನಡದ ಮಹತ್ವದ ಹಾಗೂ ಖ್ಯಾತ ಸಾಹಿತಿ, ಬರಹಗಾರರ ಸಾಹಿತ್ಯವನ್ನು ಅಧ್ಯಯನ ಮಾಡಿ, ಅದರ ಬಗ್ಗೆ ಸಾಹಿತ್ಯಾಭ್ಯಾಸಿಗಳಿಗೆ ಹಿತವಾಗುವ ರೀತಿಯಲ್ಲಿ ಪುಸ್ತಿಕೆ ಸಿದ್ಧಪಡಿಸುವುದು ವಿಮರ್ಶಕ ಅಶೋಕ ಅವರಿಗೆ ಹೊಸ ಕೆಲಸವೇನೂ ಅಲ್ಲ. ದೇವನೂರ ಮಹಾದೇವ ಅವರ ಬರಹಗಳು ಹಾಗೂ ವಿವಿಧ ಸಂದರ್ಭಗಳಲ್ಲಿ ಅವರು ಮಾಡಿದ ಭಾಷಣಗಳನ್ನು ಉಲ್ಲೇಖಿಸುತ್ತ ಸಾಗುವ ಈ ಪುಸ್ತಕವು, ದೇವನೂರರ ಬರಹಗಳ ಒಡಲಾಳವನ್ನು ತಲುಪುವ ಪ್ರಯತ್ನ ಮಾಡಿದೆ.

‘ದಲಿತ ಅನುಭವವನ್ನು ಅವರಷ್ಟು ಅಧಿಕೃತವಾಗಿ, ದಟ್ಟವಾಗಿ ಚಿತ್ರಿಸಿದವರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ತೀರ ವಿರಳ’ ಎಂದು ಅಶೋಕ ಅವರು ಒಂದೆಡೆ ಬರೆದಿದ್ದಾರೆ. ಈ ಪುಸ್ತಕದಲ್ಲಿ ಅಶೋಕ ಅವರು ದೇವನೂರರ ಸಾಹಿತ್ಯವನ್ನು ಮಾತ್ರ ವಿಮರ್ಶಿಸಿಲ್ಲ. ಶಿವರಾಮ ಕಾರಂತರ ‘ಚೋಮನ ದುಡಿ‘, ಮುಲ್ಕ್‌ ರಾಜ್‌ ಆನಂದ ಅವರ ‘Untouchable’ (ಅಸ್ಪೃಶ್ಯ) ಕಾದಂಬರಿಯನ್ನೂ ಚಿಕ್ಕದಾಗಿ ವಿಮರ್ಶಿಸಿದ್ದಾರೆ. ಅಸ್ಪೃಶ್ಯತೆಯ ಸಮಸ್ಯೆ, ಅದರ ಸಾಮಾಜಿಕ ಆಯಾಮಗಳ ಬಗ್ಗೆ ಭಾರತದ ಇಂಗ್ಲಿಷ್‌ ಲೇಖಕರು ಬರೆದ ಅತ್ಯಂತ ಮಹತ್ವದ ಕೃತಿಗಳಲ್ಲಿ ‘ಅಸ್ಪಶ್ಯ’ ಕೂಡ ಒಂದು ಎಂದು ಹಲವು ವಿಮರ್ಶಕರು ಗುರುತಿಸಿದ್ದಾರೆ. ಹಾಗಾಗಿ, ಈ ಕಾದಂಬರಿಯ ವಿಮರ್ಶೆಯನ್ನು ಕನ್ನಡದಲ್ಲಿ ಲಭ್ಯವಾಗಿಸಿರುವುದು ಅಶೋಕ ಅವರ ಪುಸ್ತಕದಲ್ಲಿ ಗುರುತಿಸಲೇಬೇಕಾದ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT