ADVERTISEMENT

ಪುಸ್ತಕ ವಿಮರ್ಶೆ | ಕಾನ್ಪುರ ಟು ಕಾಲಾಪಾನಿ - ಕರಿನೀರಲ್ಲಿ ಕರಗಿದವನ ಕಥೆ

ಪ್ರಜಾವಾಣಿ ವಿಶೇಷ
Published 2 ಜುಲೈ 2022, 20:30 IST
Last Updated 2 ಜುಲೈ 2022, 20:30 IST
ಕಾಲಾಪಾನಿ... ಪುಸ್ತಕದ ಮುಖಪುಟ
ಕಾಲಾಪಾನಿ... ಪುಸ್ತಕದ ಮುಖಪುಟ   

ಬ್ರಿಟಿಷರ ವಿರುದ್ಧ ಸೆಟೆದು ನಿಂತವರನ್ನು ಅಂಡಮಾನ್‌ನಲ್ಲಿ ಕರಿನೀರಿನ ಶಿಕ್ಷೆಗೊಳಪಡಿಸುತ್ತಿದ್ದ ಅಮಾನವೀಯ ಘಟನೆಯ ಕುರಿತು ಗೊತ್ತಲ್ಲಾ? ಅಂಥ ಶಿಕ್ಷೆಗೊಳಗಾದ ಒಬ್ಬ ತ್ಯಾಗಿಯ ಕತೆಯಿದು. ಅಲ್ಲಿ ಶಿಕ್ಷೆಗೊಳಗಾದವರು ನೂರಾರು ಮಂದಿ. ಆದರೆ, ಆ ಪೈಕಿ ದಾಖಲೆಯಾಗಿ ಕಥೆಗಳಾದವರು, ಸಿನಿಮಾ, ನಾಟಕಗಳಾದವರು ಬೆರಳೆಣಿಕೆಯಷ್ಟು ಕೆಲವೇ ಮಂದಿ. ಆದರೆ, ಅದೆಷ್ಟೋ ತ್ಯಾಗಿಗಳು ಕಾಲಾಪಾನಿಯ ಶಿಕ್ಷೆಗೊಳಗಾಗಿ ಅಜ್ಞಾತವಾಗಿ ಕಾಲನ ಮರೆಗೆ ಸರಿದಿದ್ದಾರೆ. ಅಂಥ ಬೆಳಕಿಗೆ ಬಾರದ ಹೋರಾಟಗಾರ ಸರಜೂನ ಕಥೆಯೇ ಇದು.

ಕಾನ್ಪುರ ಸಮೀಪದ ಮಸವಾನ್‌ಪುರದ ಹಳ್ಳಿಗ ಸರಜೂ ಜಗತ್ತಿನ ಅನುಭವ ಪಡೆಯಲು ಬ್ರಿಟಿಷ್‌ ಸೈನ್ಯ ಸೇರುವುದು, ಹಲವಾರು ದೇಶ ಸುತ್ತಿ ಸ್ವದೇಶಕ್ಕೆ ಹಿಂತಿರುಗುವುದು, ಬ್ರಿಟಿಷರ ವಿರುದ್ಧ ತಿರುಗಿ ಬಿದ್ದ ಆತ ಕಾಲಾಪಾನಿ ಶಿಕ್ಷೆಗೊಳಗಾಗುವುದು... ಹೀಗೆ ಚರಿತ್ರೆಯ ಪುಟಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಅಲ್ಲಿಯೇ ಕ್ಯಾನ್ಸರ್‌ಗೆ ತುತ್ತಾಗಿ ಕೊನೆಯುಸಿರೆಳೆಯುವ ಘಟನೆಯ ವಿವರವಂತೂ ಕಣ್ಣಾಲಿಗಳು ತುಂಬುವಂತೆ ಮಾಡುತ್ತದೆ.ಈ ಕಥೆಯಲ್ಲಿ ದೇಶ ಭಕ್ತಿಯಿದೆ. ಕಾನ್ಪುರದ ಸಂಸ್ಕೃತಿಯಿದೆ. ಸಂಬಂಧಗಳ ಮೌಲ್ಯ ಹಾಗೂ ನಡುವಿನ ಸಿಕ್ಕುಗಳೂ ಇವೆ.ಕೃತಿಯನ್ನು ಅನುವಾದಿಸಿದ್ದಾರೆ ಅನ್ನುವುದಕ್ಕಿಂತ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಚಿತ್ರ ಬಿಡಿಸಿಟ್ಟಿದ್ದಾರೆ ಅನುವಾದಕ ಎಚ್‌.ಎಂ. ಕುಮಾರಸ್ವಾಮಿ. ಸ್ವಾತಂತ್ರ್ಯ ಹೋರಾಟದ ಅಗೋಚರ ಮುಖಗಳ ಬಗ್ಗೆ ತಿಳಿಯಲು ಆಸಕ್ತರು ಓದುವಂತಹ ಕೃತಿ ಇದಾಗಿದೆ.

ಕೃತಿ: ಕಾನ್ಪುರ ಟು ಕಾಲಾಪಾನಿ

ADVERTISEMENT

ಹಿಂದಿ ಮೂಲ: ರೂಪ್‌ಸಿಂಗ್‌ ಚಂದೇಲ

ಅನುವಾದ: ಡಾ.ಎಚ್‌ಎಂ.ಕುಮಾರಸ್ವಾಮಿ

ಪ್ರ: ಕುವೆಂಪು ಭಾಷಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.