ADVERTISEMENT

ಮೊದಲ ಓದು: ಅಘೋಷಿತ ತುರ್ತುಪರಿಸ್ಥಿತಿ ಇನ್ನೂ ಭಯಾನಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 20:45 IST
Last Updated 6 ಸೆಪ್ಟೆಂಬರ್ 2025, 20:45 IST
ಆರದ ಹೋರಾಟದ ಕಿಚ್ಚು
ಆರದ ಹೋರಾಟದ ಕಿಚ್ಚು   

ಒಂದು ಘಟನೆ ಕೇಂದ್ರೀಕರಿಸಿ ಪ್ರಬೀರ್‌ ಅವರ ಆತ್ಮಕಥೆ ತೆರೆದುಕೊಳ್ಳುತ್ತದೆ. 1975ರ ಸೆ. 25ರ ಬೆಳಿಗ್ಗೆ ಆಂತರಿಕ ಭದ್ರತಾ ಕಾಯ್ದೆ (MISA) ಅಡಿ ಪ್ರಬೀರ್‌ ಪುರಕಾಯಸ್ತರ ಬಂಧನಕ್ಕೆ ಒಳಗಾಗುತ್ತಾರೆ. ಅಂದಿನಿಂದ ಈ ದಿನಮಾನಗಳ ಚರಿತ್ರೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಐದು ದಶಕಗಳಿಂದ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ವರ್ತಮಾನಕ್ಕೆ ಪ್ರತಿಕ್ರಿಯಿಸುತ್ತಿರುವ ಬಗೆಯನ್ನೂ ಅವಲೋಕಿಸಿದ್ದಾರೆ. ಘೋಷಿತ ತುರ್ತುಪರಿಸ್ಥಿತಿ ಮತ್ತು ಅಘೋಷಿತ ತುರ್ತುಪರಿಸ್ಥಿತಿಯನ್ನು ಲೇಖಕರು ತಮ್ಮ ಅನುಭವದ ಹಿನ್ನೆಲೆಯಲ್ಲಿ ತುಲನಾತ್ಮಕವಾಗಿ ನೋಡಿದ್ದಾರೆ. ಪ್ರಜಾಪ್ರಭುತ್ವದ ಜೀವಂತಿಕೆಯನ್ನು ಸೂಕ್ಷ್ಮವಾಗಿ ಇಂದು ಪರೀಕ್ಷಿಸಿದರೆ ಅದು ಅಪಾಯದಲ್ಲಿದೆ ಎನ್ನುವ ಅಭಿಮತ ಅವರದು. 

ಸ್ವತಂತ್ರ ಭಾರತದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ತಕ್ಷಣ ಪ್ರಜಾಪ್ರಭುತ್ವದ ಮೂಲ ಲಕ್ಷಣ ನಾಶವಾಯಿತು. ನಂತರದ 21 ತಿಂಗಳು ವಾಕ್‌ ಸ್ವಾತಂತ್ರ, ಭಿನ್ನಮತದ ಹಕ್ಕು ಇಲ್ಲದಾಯಿತು. ಈಗ ಆ ತುರ್ತುಪರಿಸ್ಥಿತಿ ಹೇಗಿತ್ತು ಎಂದು ಕೇಳಿದರೆ, ‘ನನ್ನನ್ನು ವರ್ತಮಾನದಲ್ಲಿ ತಂದು ನಿಲ್ಲಿಸುತ್ತದೆ. ಇದಕ್ಕೆ ಉತ್ತರಿಸಲು ನಾನು ಹಿಂದಕ್ಕೆ ಹೋಗುವುದಾದರೆ, ಹತ್ತು ವರ್ಷ ಹಿಂದಕ್ಕೆ ಹೋಗುತ್ತೇನೆ’ ಎನ್ನುತ್ತಾರೆ. ‘ಅಂದಿಗೆ ಹೋಲಿಸಿದರೆ, ಇಂದು ದೇಶದಲ್ಲಿ ದ್ವೇಷ ಮತ್ತು ಭಯದ ವಾತಾವರಣ ಆಳವಾಗಿ ಬೇರು ಬಿಟ್ಟಿದೆ’ ಎನ್ನುವ ಅಂಶವನ್ನು ಗುರುತಿಸುತ್ತಾರೆ. ಪತ್ರಕರ್ತರು, ಅಲ್ಪಸಂಖ್ಯಾತರು, ಚಳವಳಿಗಳ ಮೇಲೆ ಒತ್ತಡ ಹೆಚ್ಚಿದೆ. ಅಂತರಧರ್ಮೀಯ ಮದುವೆ, ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ಏರಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ದ್ವೇಷಪೂರಿತ ನಡವಳಿಕೆ, ಟ್ರೋಲ್‌ ಮಾಡುವುದು, ದಾಳಿ ಹಿಂಸಾಚಾರವನ್ನು ಮೆಲುಕು ಹಾಕುತ್ತಾರೆ. ವಿಚಾರವಾದಿಗಳನ್ನು ವ್ಯವಸ್ಥಿತವಾಗಿ ಕೊಂದುಹಾಕಿದ ಘಟನೆಗಳು, ಅದಕ್ಕೆ ಸಾಂಸ್ಕೃತಿಕವಾಗಿ ವ್ಯಕ್ತವಾದ ಪ್ರತಿರೋಧ ‘ಪ್ರಶಸ್ತಿ ವಾಪಸಾತಿ’ ಚಳವಳಿಯನ್ನು ಒಬ್ಬ ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತನ ದೃಷ್ಟಿಯಲ್ಲಿ ಪ್ರಬೀರ್‌ ವಿಶ್ಲೇಷಣೆ ಮಾಡಿದ್ದಾರೆ.     

ಪ್ರಜಾಪ್ರಭುತ್ವದ ಉಳಿವಿಗೆ ಮಾಧ್ಯಮ ಹೇಗೆ ಸ್ಪಂದಿಸುತ್ತಿದೆ ಎನ್ನುವ ಅಂಶವನ್ನು ‘ಮಾಧ್ಯಮಗಳು: ಅಂದು ಮತ್ತು ಇಂದು’ ಅಧ್ಯಾಯದಲ್ಲಿ ವಿವರಿಸುತ್ತಾರೆ. ಅಂದು ‘ಖಾಲಿ ಸಂಪಾದಕೀಯ ಪುಟ’ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಮಾಧ್ಯಮ ಎನ್ನುವುದನ್ನು ಸಂಕೇತಿಸುತ್ತಿತ್ತು. ಇಂದು ಸ್ವಯಂ ಸೆನ್ಸಾರ್‌ಶಿಪ್‌ ಜಾರಿಗೆ ಬಂದಿದೆ ಎನ್ನುತ್ತಾರೆ. ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಐಟಿ, ಇಡಿ ದಾಳಿಯ ಸ್ವಯಂ ಅನುಭವವೂ ಕೃತಿಯಲ್ಲಿ ಕಣ್ದೆರೆದುಕೊಂಡಿದೆ. 

ADVERTISEMENT

‘ಹೋರಾಟವನ್ನು ಕಲಿತ ಬಗೆ: ನನ್ನ ಜೀವನ ಯಾನ’, ‘ತುರ್ತು ಪರಿಸ್ಥಿಯಡಿಯಲ್ಲಿ ವಿಶ್ವವಿದ್ಯಾನಿಲಯ’, ‘ರಾಜಕಾರಣವನ್ನು ಜೀವಿಸುವುದು’ ಅಧ್ಯಾಯಗಳು ಸೇರಿ ಒಟ್ಟು ಏಳು ಅಧ್ಯಾಯಗಳನ್ನು ಈ ಕೃತಿ ಒಳಗೊಂಡಿದೆ. 

Cut-off box - ಆರದ ಹೋರಾಟದ ಕಿಚ್ಚು(1975ರ ತುರ್ತುಪರಿಸ್ಥಿತಿಯಿಂದ ಇಂದಿನವರೆಗೆ) ಮೂಲ ಲೇ: ಪ್ರಬೀರ್‌ ಪುರಕಾಯಸ್ತರ ಕನ್ನಡಕ್ಕೆ: ಸದಾನಂದ ಆರ್‌. ಪ್ರ: ಅಭಿರುಚಿ ಪ್ರಕಾಶನ ಪು: 248 ರೂ: 250 ಮೊ: 9980560013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.