ಸ್ತನ ಕ್ಯಾನ್ಸರ್‌ಗೆ ತುತ್ತಾದ ತಾಯಿಯ ಚಿಕಿತ್ಸೆಯ ವೇಳೆ, ಅವರೊಂದಿಗೆ ಆಸ್ಪತ್ರೆಯಲ್ಲಿದ್ದ 16 ವರ್ಷದ ಮಗಳೊಬ್ಬಳು ಕಂಡ ಜೀವನ ಚಿತ್ರಣವೇ ‘ಕೀಮೋ’
ಲೇಖಕಿ ಫಾತಿಮಾ ರಲಿಯಾ ಅವರು ಕೀಮೋ ಪುಸ್ತಕದಲ್ಲಿ ಕೇವಲ ತಮ್ಮ ತಾಯಿಯ ಕ್ಯಾನ್ಸರ್ ಚಿತ್ರಣವನ್ನಷ್ಟೇ ಕಟ್ಟಿಕೊಟ್ಟಿಲ್ಲ. ಬದಲಾಗಿ, ಚಿಕಿತ್ಸೆಯ ವೇಳೆ ತಾವು ಗಮನಿಸಿದ, ಅನುಭವಿಸಿದ ಎಲ್ಲಾ ರೀತಿಯ ಬದುಕಿನ ಅನುಭವಗಳನ್ನು, ಕಂಡ ವಿದ್ಯಮಾನಗಳನ್ನು ಕೂಡ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಕ್ಯಾನ್ಸರ್ ಬಗೆಗಿನ ಸಾಮಾನ್ಯ ಜನರ ತಪ್ಪು ಕಲ್ಪನೆ, ಚಿಕಿತ್ಸೆಯ ರೀತಿಯ ಜತೆಗೆ ಮುಸ್ಲಿಂ ಕುಟುಂಬದ ಹೆಣ್ಣು ಮಗಳೊಬ್ಬಳ ಶಿಕ್ಷಣದ ಕನಸು, ಅದಕ್ಕೆ ಒತ್ತಾಸೆಯಾಗಿ ನಿಲ್ಲುವ ತಾಯಿಯ ಕಥನ ಇಲ್ಲಿದೆ.
ತೆರೆದಗಣ್ಣಿಗೆ ಸಾವಿನ ಮನೆಯಲ್ಲೂ ಕಥೆಗಳು ಕಾಣುತ್ತವೆ ಎನ್ನುವಂತೆ, ಆಸ್ಪತ್ರೆಯಂತಹ ಗಂಭೀರ ಸ್ಥಳದಲ್ಲೂ, ಲೇಖಕಿಗೆ ಗೀತಕ್ಕ, ಅಮನ್ ದೀಪ್, ಚಾಂದಜ್ಜಿಯರಂತಹ ವಿಭಿನ್ನ ಬದುಕಿನ ದರ್ಶನವಾಗುತ್ತದೆ. ಅವರ ಬದುಕು, ಲೇಖಕಿಯ ಬದುಕಿನಲ್ಲೂ ಪ್ರಭಾವ ಬೀರುತ್ತದೆ.
ಆಸ್ಪತ್ರೆಯ ಯಮಯಾತನೆಯ ಬದುಕು ಕೂಡ, ಹೇಗೆ ಬದುಕಿನ ದಾರಿಯನ್ನು, ಆಲೋಚಿಸುವ ಕ್ರಮವನ್ನು, ಜೀವನ ಶೈಲಿಯನ್ನು ಬದಲಾಯಿಸಿತು ಎನ್ನುವ ಅಂಶಗಳು ಆಸಕ್ತಿ ಹುಟ್ಟಿಸುತ್ತವೆ.
ಪುಸ್ತಕದ ಬೆನ್ನುಡಿಯಲ್ಲಿ ರಹಮತ್ ತರೀಕೆರೆಯವರು ಹೇಳಿರುವಂತೆ, ಇಲ್ಲಿನ ವ್ಯಕ್ತಿ ಮತ್ತು ಸ್ಥಳಗಳ ಹೆಸರನ್ನು ಬದಲಿಸಿದರೆ, ಎಲ್ಲ ದೇಶದ, ಎಲ್ಲ ಕಾಲದ ಮನುಷ್ಯರ ಕಥನವೂ ಆಗುವಂತೆ ಅರಳಿಕೊಳ್ಳುತ್ತದೆ.
ಸ್ತನ ಕ್ಯಾನ್ಸರ್‌ನ ಗಂಭೀರತೆ, ನೋವು, ಚಿಕಿತ್ಸೆಯ ಕಠೋರತೆಗಳನ್ನು ಹೇಳುತ್ತಲೇ, ಅವೆಲ್ಲವನ್ನೂ ಗೆದ್ದು ಬದುಕಬಹುದು ಎನ್ನುವುದು ಕೃತಿಯ ಆಶಯ.
ಪುಸ್ತಕ: ಕೀಮೋ (ಅನುಭವ ಕಥನ)
ಲೇ: ಫಾತಿಮಾ ರಲಿಯಾ
ಪ್ರ: ಜೀರುಂಡೆ ಪುಸ್ತಕ
ಪುಟ ಸಂಖ್ಯೆ: 120
ಬೆಲೆ: ₹160
ಫೋನ್ ನಂ: 9742225779
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.