ಆ ಕಾಲದಲ್ಲಿ ವರನಟ ರಾಜ್‌ಕುಮಾರ್ ಎಂದರೆ ಎಲ್ಲರಿಗೂ ಒಂದು ರೀತಿ ಪುಳಕ. ಬದುಕಿನಲ್ಲೊಮ್ಮೆಯಾದರೂ ಅವರನ್ನು ಭೇಟಿಯಾಗಬೇಕೆಂಬ ಹಂಬಲ. ರಾಜ್‌ಕುಮಾರ್ ಅವರನ್ನು ಭೇಟಿಯಾದ ಅನುಭವ ಸೇರಿದಂತೆ ಚಿತ್ರರಂಗದ ಕುರಿತಾಗಿನ ತಮ್ಮ ನೆನಪು, ಅನುಭವಗಳನ್ನೇ ಕೃತಿಯಾಗಿಸಿದ್ದಾರೆ ಲೇಖಕ ದೊಡ್ಡಮನೆ ಆನಂದ್. ಒಟ್ಟು ಹತ್ತು ಲೇಖನಗಳಿರುವ ಪುಟ್ಟ ಕೃತಿಯಿದು. ಎಲ್ಲವೂ ಸಿನಿಮಾ ರಂಗಕ್ಕೆ ಸೇರಿದ ಬರಹಗಳು.
ಕೆಲವು ಬರಹಗಳು ಅನುಭವ ಕಥನಗಳಾದರೆ, ಇನ್ನು ಕೆಲವು ವಿಮರ್ಶೆಯಂತಿವೆ. ಬದುಕಿನ ಯೌವ್ವನದ ದಿನಗಳಲ್ಲಿ ಚಿತ್ರ ನಿರ್ದೇಶಕನಾಗಬೇಕೆಂದು ಕನಸು ಕಂಡಿದ್ದ ಲೇಖಕ ಆ ನಿಟ್ಟಿನಲ್ಲಿ ಮಾಡಿದ ಯತ್ನಗಳು, ಸಿನಿಮಾ ಮೇಲೆ ತಮಗಿದ್ದ ಆಸಕ್ತಿ ಕುರಿತು ಪ್ರತಿ ಲೇಖನದಲ್ಲಿಯೂ ಒಂದಷ್ಟು ವಿವರ ದಾಖಲಿಸಿದ್ದಾರೆ.
‘ನಾನು ಆರಾಧನಾ ಸಿನಿಮಾ ನೋಡಿದ್ದು’ ಎಂಬ ಲೇಖನ 1970ರ ದಶಕದಲ್ಲಿ ಸಿನಿಮಾ ಸಂಸ್ಕೃತಿ ಹೇಗಿತ್ತು, ಅಂದಿನ ಹುಡುಗರು ಒಂದು ಚಿತ್ರವನ್ನು ವೀಕ್ಷಿಸಲು ಎಷ್ಟೆಲ್ಲ ಸಾಹಸ ಮಾಡಬೇಕಿತ್ತು ಎಂಬ ಚಿತ್ರವಣವನ್ನು ಕಟ್ಟಿಕೊಡುತ್ತದೆ. ಪುಸ್ತಕದ ಶೀರ್ಷಿಕೆಯಾಗಿರುವ ‘ಚಿಕ್ಕಮಗಳೂರಿನಲ್ಲಿ ಬಂಗಾರದ ಮನುಷ್ಯ ಡಾ.ರಾಜ್’ ಬರಹ ಆ ದಿನಗಳಲ್ಲಿ ರಾಜ್‌ಕುಮಾರ್ ಅವರ ಕ್ರೇಜ್ ಹೇಗಿತ್ತು ಎಂಬುದನ್ನು ತೋರಿಸಿಕೊಡುತ್ತದೆ.
ಸಾಕಷ್ಟು ಕಡೆ ಬದುಕಿನ ಅನುಭವ ಕಥನಗಳೊಂದಿಗೆ ನಿರೂಪಣೆ ಸರಳವಾಗಿದೆ. ಲೇಖಕ ತಾವು ಮಾಡಿದ ಕಾರ್ಯಗಳನ್ನು, ತೆಗೆದುಕೊಂಡ ನಿರ್ಧಾರಗಳನ್ನು ಪದೇ ಪದೇ ಹೊಗಳಿಕೊಳ್ಳುವುದು ಕೆಲವೆಡೆ ಓದಿನ ಓಘಕ್ಕೆ ಅಡ್ಡಿಯೆನಿಸುತ್ತದೆ.
ಚಿಕ್ಕಮಗಳೂರಿನಲ್ಲಿ ಬಂಗಾರದ ಮನುಷ್ಯ ಡಾ.ರಾಜ್
ಲೇ: ದೊಡ್ಡಮನೆ ಆನಂದ್
ಪ್ರ: ಅಭಿರುಚಿ
ಸಂ: 9980560013
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.