ADVERTISEMENT

ಪರಿಸರ ಕಾಳಜಿಯ ಲಾಮಾ ಸೇನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 19:30 IST
Last Updated 18 ಜನವರಿ 2020, 19:30 IST
ಪುಸ್ತಕ ವಿಮರ್ಶೆ
ಪುಸ್ತಕ ವಿಮರ್ಶೆ   

ಪರಿಸರ ರಕ್ಷಣೆ ಎನ್ನುವುದು ಭಾರತದ ಬಹುತೇಕ ಸಂಸ್ಕೃತಿಗಳಿಗೆ ಆಧುನಿಕ ವಿಜ್ಞಾನ ಹೇಳಿಕೊಟ್ಟಿದ್ದಲ್ಲ. ಪರಿಸರದ ಬಗ್ಗೆ ಕಾಳಜಿ ಮಾಡುವುದು ಹಾಗೂ ಅದನ್ನು ರಕ್ಷಿಸುವುದು ಧಾರ್ಮಿಕವಾಗಿ ಬದುಕುವುದರ ಒಂದು ಭಾಗ ಎಂದು ನಂಬಿರುವ ಸಂಸ್ಕೃತಿಗಳು ಭಾರತದಲ್ಲಿ ಹತ್ತು ಹಲವಾರು ಇವೆ. ಅಂಥದ್ದೊಂದು ಸಂಸ್ಕೃತಿಯಲ್ಲಿ ಬೆಳೆದ ಮೂವರು ಸಾಹಸಿಗಳ ಕಥೆ ‘ಕೊಕ್ಕರೆಗಳ ರಕ್ಷಣೆಗೆ ಲಾಮಾ ಸೇನೆ’.

ಇದು ನೀರಜ್ ವಾಘೋಲಿಕರ್ ಅವರು ಇಂಗ್ಲಿಷ್‌ನಲ್ಲಿ ಬರೆದ ‘ಸೇವಿಂಗ್‌ ದಿ ದಲೈ ಲಾಮಾಸ್ ಕ್ರೇನ್ಸ್‌’ ಎನ್ನುವ ಪುಸ್ತಕದ ಕನ್ನಡ ಅನುವಾದ. ಇದನ್ನು ಕನ್ನಡಕ್ಕೆ ತಂದವರು ಲೇಖಕ ನಾಗೇಶ ಹೆಗಡೆ. ಅರುಣಾಚಲ ಪ್ರದೇಶದಲ್ಲಿ ಒಂದು ಅಣೆಕಟ್ಟು ನಿರ್ಮಾಣ ಆಗುವುದರಿಂದ ನಿರ್ದಿಷ್ಟ ಪ್ರದೇಶದ ಜೀವವೈವಿಧ್ಯಕ್ಕೆ ಧಕ್ಕೆ ಆಗುತ್ತದೆ ಎನ್ನುವ ಒಂದು ವರದಿ ಇದ್ದರೂ, ಅದನ್ನು ಸಾರ್ವಜನಿಕರಿಂದ ಮುಚ್ಚಿಟ್ಟು, ಇನ್ನೊಂದು ಖೊಟ್ಟಿ ವರದಿ ಸಿದ್ಧಪಡಿಸಿ, ಆ ವರದಿಯ ಆಧಾರದಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ಮುಂದಡಿ ಇರಿಸಲಾಗುತ್ತದೆ. ಈ ವಿಚಾರವನ್ನು ತಿಳಿದ ಪೆಮಾ, ತೆಂಜಿನ್ ಮತ್ತು ತಾರಾ ಎನ್ನುವ ಮೂವರು ಸಾಹಸಿಗರು ಅಣೆಕಟ್ಟೆ ನಿರ್ಮಾಣದ ವಿರುದ್ಧ ಜನಾಭಿಪ್ರಾಯ ರೂಪಿಸುವ ಕಥೆ ಇದು.

ಪುಸ್ತಕದಲ್ಲಿನ ಚೆಂದದ ಚಿತ್ರಗಳನ್ನು ನೋಡಿದರೆ ಇದನ್ನು ಮಕ್ಕಳಿಗಾಗಿ ಬರೆಯಲಾಗಿದೆ ಅನಿಸುತ್ತದೆ. ಆದರೆ ಪುಸ್ತಕದ ವಸ್ತು ಹಾಗೂ ನಿರೂಪಣಾ ಶೈಲಿಯನ್ನು ಗಮನಿಸಿದರೆ, ಈ ಪುಸ್ತಕ ಓದಲು ವಯಸ್ಸಿನ ಬೇಲಿ ಹಾಕುವುದು ಉದ್ಧಟತನದ ಕೆಲಸ ಎಂಬುದು ಖಚಿತವಾಗುತ್ತದೆ. ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಅಣೆಕಟ್ಟು ನಮ್ಮ ಸುತ್ತಲಿನ ಯಾವುದಾದರೂ ಒಂದು ಅಣೆಕಟ್ಟು ಅಥವಾ ಯಾವುದೋ ಒಂದು ಬೃಹತ್ ಯೋಜನೆ ಕೂಡ ಆಗಿರಬಹುದು ಎಂದು ಓದಿನ ಸಮಯದಲ್ಲಿ ಅನಿಸದಿರದು.

ADVERTISEMENT

ಕೊಕ್ಕರೆಗಳ ರಕ್ಷಣೆಗೆ
ಲಾಮಾ ಸೇನೆ

ಪುಟ: 60
ಬೆಲೆ: ₹130
ಅನುವಾದ: ನಾಗೇಶ ಹೆಗಡೆ
ಪ್ರ: ಅಂಕಿತಪುಸ್ತಕ, ಬೆಂಗಳೂರು
ದೂ: 080– 26617100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.