ADVERTISEMENT

ಮೊದಲ ಓದು | ಸಮುದಾಯದ ಕಥೆ ನಿರೂಪಿಸುವ ಆತ್ಮಕಥನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 22:30 IST
Last Updated 18 ಅಕ್ಟೋಬರ್ 2025, 22:30 IST
ನನ್ನೊಳಗಿನ ಅಪ್ಪ
ನನ್ನೊಳಗಿನ ಅಪ್ಪ   

‘ನನ್ನೊಳಗಿನ ಅಪ್ಪ’ ನಿವೃತ್ತ ಪ್ರಾಧ್ಯಾಪಕ ಆತ್ಮಾನಂದ ಅವರ ಆತ್ಮಕಥನ. ಲೇಖಕರು ತಂದೆಯನ್ನು ಕೇಂದ್ರೀಕರಿಸಿ ಸಮುದಾಯದ ಬದುಕನ್ನು ಕಲಾತ್ಮಕವಾಗಿ ತಂದಿದ್ದಾರೆ. ಕೃತಿಕಾರರ ತಂದೆ ಪ್ರಭಾವಕ್ಕೆ ಒಳಗಾದ ಚಿಂತನೆ, ಅವರಲ್ಲಿ ಉಂಟಾದ ಪರಿವರ್ತನೆ ಕೃತಿ ರೂಪುಗೊಳ್ಳಲು ಪ್ರೇರಣೆಯಾಗಿದೆ. ಮಂಡ್ಯದ ಶಾಲೆಯೊಂದರಲ್ಲಿ ವಾಚ್‌ಮನ್‌ ಆಗಿದ್ದ ‘ಅಪ್ಪ’ ದೇವರ ಪರಮ ಭಕ್ತ. ದಾಸ ಒಕ್ಲು ಪರಂಪರೆಯನ್ನು ಪಾಲಿಸುತ್ತಿದ್ದರು. ಬಂಧು ಬಳಗದವರ ಮನೆಯಲ್ಲಿ ಶುಭ ಕಾರ್ಯ ಇದ್ದರೆ ಅವರೇ ಶಂಕು, ಜಾಗಟೆ ತೆಗೆದುಕೊಂಡು ಹೋಗಿ ಪೂಜೆ ಮಾಡಿ ಬರುತ್ತಿದ್ದರು. ಹೀಗಿದ್ದ ಅವರ ಬದುಕಿನಲ್ಲಿ ‘ಬೂಸಾ ಸಾಹಿತ್ಯ’ ಹೇಳಿಕೆಯಿಂದ ಸುದ್ದಿಯಲ್ಲಿದ್ದ ಬಿ. ಬಸವಲಿಂಗಪ್ಪ ಪ್ರತಿರೋಧದ ಅಲೆಯನ್ನೇ ಎಬ್ಬಿಸುತ್ತಾರೆ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ಬಸವಲಿಂಗಪ್ಪ ಅವರು ‘ದೇವರ ಪಟಗಳನ್ನು ಚರಂಡಿಗೆ ಎಸೆಯಿರಿ’ ಎಂಬ ಹೇಳಿಕೆ ನೀಡುತ್ತಾರೆ. ಅದರಿಂದ ಪ್ರಭಾವಿತರಾದ ‘ಅಪ್ಪ’ ಮನೆಯಲ್ಲಿದ್ದ ದೇವರ ಪಟಗಳನೆಲ್ಲ ಹರಿದು ಬಿಸಾಕುತ್ತಾರೆ. ನಂತರ ಬುದ್ಧ ಅನುಯಾಯಿಯಾಗಿ ಮನೆಯ ಗೋಡೆಯನ್ನು ಬುದ್ಧ–ಬಸವ–ಅಂಬೇಡ್ಕರ್‌ ಫೋಟೊಗಳಿಂದ ಅಲಂಕರಿಸುತ್ತಾರೆ. ಈ ವಿವರವನ್ನು ನೀಡುತ್ತಾ ಲೇಖಕರು ಸಾಂಸ್ಕೃತಿಕ ಸಂಘರ್ಷದ ಸ್ವರೂಪವನ್ನೂ ದಾಟಿಸಿದ್ದಾರೆ. 

ಯುಗಾದಿಯ ಮುನ್ನ ದಿನ ‘ಅಪ್ಪ’ ತೀರಿಹೋಗುತ್ತಾರೆ. ಅವರು ಒಮ್ಮೆ ‘ಈ ಬಾಡ್ಕ ದೇಹನ ತುಳ್ದು ಮೂಟೆ ಕಟ್ಟಿ ಬಿಸಾಡು, ಊದ್ಕಡ್ಡಿನೂ ಹಚ್ಬೇಡ’ ಎಂದು ಹೇಳಿದ್ದನ್ನು ಲೇಖಕರು ನೆನಪಿಸಿಕೊಳ್ಳುತ್ತಾರೆ. ಅಪ್ಪ ಹಾಸಿಗೆ ಹಿಡಿದಿದ್ದರು. ತೀರುವ ಮುನ್ನ ದಿನದ ಮಧ್ಯರಾತ್ರಿ ಲೇಖಕರು ತಂದೆಯನ್ನು ನೋಡುವ ತವಕದಲ್ಲಿ ಏಳುತ್ತಾರೆ. ಗೋಡೆ ಕಡೆ ತಿರುಗಿ ಮಲಗಿದ್ದ ಅವರನ್ನು ನೋಡುತ್ತಾರೆ. ಸಣ್ಣದಾಗಿ ಹೊರಳಾಡಿದರೂ ಎಬ್ಬಿಸಲು ಮನಸಾಗದೆ ಕಣ್ಣು ತುಂಬಿಕೊಳ್ಳುತ್ತಾರೆ.

ಅಂಬೇಡ್ಕರ್‌ ಪ್ರಭಾವ ಸಮುದಾಯದ ಆಳದಲ್ಲಿ ಹೇಗೆ ಬೇರೂರಿ ಹಸಿರಾಗಿ ಬೆಳೆದಿದೆ ಎನ್ನುವುದಕ್ಕೆ ಈ ಕೃತಿ ಸಾಕ್ಷಿ. ವ್ಯಕ್ತಿ ಸಂಬಂಧದ ಭಾವುಕತೆ ಮತ್ತು ವೈಚಾರಿಕ ವಿವೇಕವನ್ನು ‘ನನ್ನೊಳಗಿನ ಅಪ್ಪ’ ಅಭಿವ್ಯಕ್ತಿಸುತ್ತದೆ.

ADVERTISEMENT

ನನ್ನೊಳಗಿನ ಅಪ್ಪ ಆತ್ಮಾನಂದ 

ಪ್ರ: ಆತ್ಮ ಪುಸ್ತಕ 

ಮೊ: 9740839068

ಪುಟ: 162 ₹: 200

ಲೇ: ಆತ್ಮಾನಂದ

ಸಂ: 9740839068

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.