ದರ್ಗಾ ಮಾಳದ ಚಿತ್ರಗಳು
ಚಳವಳಿ, ಸಾಹಿತ್ಯ, ರಂಗಭೂಮಿ, ಸಿನಿಮಾ ರಂಗದಲ್ಲಿ ದಶಕಗಳಿಂದ ತೊಡಗಿಕೊಂಡಿರುವ ಕೋಟಿಗಾನಹಳ್ಳಿ ರಾಮಯ್ಯ ಅವರ ದೀರ್ಘಕಾಲದ ಬರಹಗಳನ್ನು ಕೆ.ಪಿ. ಲಕ್ಷ್ಮಣ್ ಸಂಪಾದಿಸಿದ್ದಾರೆ. ರಾಮಯ್ಯ ಅವರು ದಲಿತ ಸಂಘರ್ಷ ಸಮಿತಿಯ ಆರಂಭ ಕಾಲದಿಂದಲೂ ಅದರ ಭಾಗವಾಗಿದ್ದವರು. ಜಾತಿ ದೌರ್ಜನ್ಯ, ಅತ್ಯಾಚಾರದ ಅಮಾನವೀಯ ಘಟನೆಗಳು ನಡೆದ ಸಂದರ್ಭದಲ್ಲೆಲ್ಲ ಬೀದಿಗಿಳಿದು ಪ್ರತಿಭಟಿಸಿದವರು. ಹೋರಾಟದ ಭಾಗವಾಗಿ ಹಾಡುಗಳನ್ನು ಬರೆದು ಸಾಂಸ್ಕೃತಿಕ ಪ್ರತಿರೋಧ ದಾಖಲಿಸಿದವರು.
‘ಸೂಫಿ ನಾಡು’ ಕೋಲಾರದಲ್ಲಿ ರಾಮಯ್ಯ ‘ಆದಿಮ’ದ ಮೂಲಕ ಹಲವು ಪ್ರಯೋಗಗಳನ್ನು ಮಾಡಿದರು. ‘ಆದಿಮ’ ಸಾಂಸ್ಕೃತಿಕ ಕೇಂದ್ರದ ಅನುಭವಗಳು, ಉಸ್ಮಾನ್ ತಾತನ ದರ್ಗಾ, ಬೆಟ್ಟ ಮತ್ತು ಅದಕ್ಕೆ ಅಂಟಿಕೊಂಡ ಊರು, ಕೇರಿ, ಶಾಲೆಗಳ ಜನರೊಂದಿಗೆ ಲೇಖಕರ ಒಡನಾಟದ ಚಿತ್ರಗಳು ಇದರಲ್ಲಿವೆ. ವಿಚಿತ್ರ ಹಾಗೂ ವಿಶಿಷ್ಟ ವ್ಯಕ್ತಿತ್ವದ ಸಾಮಾನ್ಯರ ‘ಅಸಾಮಾನ್ಯ’ ಚಿತ್ರಣ ಇರುವ ಸಂಕಲನಕ್ಕೆ ‘ದರ್ಗಾ ಮಾಳದ ಚಿತ್ರಗಳು’ ಎಂಬ ಹೆಸರಿಟ್ಟಿರುವುದು ಔಚಿತ್ಯಪೂರ್ಣವಾಗಿದೆ. ಸಾಹಿತ್ಯ, ರಂಗಭೂಮಿ, ಸಮಾಜಕ್ಕೆ ಸಂಬಂಧಿಸಿದ ವೈವಿಧ್ಯಮಯವಾದ 41 ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಲೇಖನಗಳು ಬಿಡಿ ಚಿತ್ರಗಳ ಮೂಲಕ ಸಮುದಾಯದ ಸಂಸ್ಕೃತಿಯನ್ನು ಕಟ್ಟಿಕೊಡುತ್ತವೆ.
ಆತ್ಮಾವಲೋಕನದಂತೆ ಕಾಣಿಸುವ ಇಲ್ಲಿನ ಲೇಖನಗಳಲ್ಲಿ ಸಾಂಸ್ಕೃತಿಕ ವಿಮರ್ಶೆಯೂ ಇದೆ. ಅನೇಕ ಚಾರಿತ್ರಿಕ ಮಹತ್ವದ ಘಟನೆಗಳಿಗೆ ಸೃಜನಶೀಲ ಚಿಂತನೆಯ ಆಯಾಮವನ್ನೂ ನೀಡಲಾಗಿದೆ. ಸಾಮಾನ್ಯರಲ್ಲಿ ಇರಬಹುದಾದ ಅಸಾಮಾನ್ಯ ವ್ಯಕ್ತಿತ್ವ, ಹುಡುಕಾಟವನ್ನು ಲಘುವಾದ ಧಾಟಿಯಲ್ಲಿ ಓದುಗರಿಗೆ ದಾಟಿಸಿದ್ದಾರೆ. ರಾಮಯ್ಯ ಅವರ ಕಥನಗಳು ಭಿನ್ನವೂ ಅಪೂರ್ವವೂ ಆಗಿವೆ.
ದರ್ಗಾ ಮಾಳದ ಚಿತ್ರಗಳು
ಸಂ: ಕೆ.ಪಿ. ಲಕ್ಷ್ಮಣ್
ಪ್ರ: ಆಕೃತಿ ಪುಸ್ತಕ ಬೆಂಗಳೂರು
ಸಂ: 080– 23409479
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.