
ಕನ್ನಡದ ಮಣ್ಣಿನಲ್ಲಿ ವಿಶ್ವ ಸಾಹಿತ್ಯದ ಅತ್ಯುತ್ತಮ ಬೀಜಗಳನ್ನು ನೆಡುವುದರಲ್ಲಿ ಅದ್ವಿತೀಯರಾದ ಎಸ್. ದಿವಾಕರ್, ಪ್ರಯೋಗಶೀಲತೆಗೂ ಇನ್ನೊಂದು ಹೆಸರು. ವೈಯಕ್ತಿಕ ಬರವಣಿಗೆ ಮಾತ್ರವಲ್ಲದೆ, ದಿವಾಕರರು ಕನ್ನಡದಲ್ಲಿ ರೂಪಿಸಿದ ಅನುವಾದಿತ ಕೃತಿಗಳಲ್ಲೂ ಆ ಪ್ರಯೋಗಶೀಲತೆ ಎದ್ದುಕಾಣಿಸುತ್ತದೆ. ಇದಕ್ಕೆ ಹೊಸ ಉದಾಹರಣೆ, ‘ಎರಡು ರಟ್ಟುಗಳ ನಡುವೆ’.
ಪುಸ್ತಕ, ಗ್ರಂಥಾಲಯ ಹಾಗೂ ಓದುಗನೇ ಕಥಾವಸ್ತುವಾಗಿರುವ ಕಥೆಗಳು ಈ ಸಂಕಲನದಲ್ಲಿವೆ. ‘ಕಥೆಗಾರರ ಕಲ್ಪನೆಯಲ್ಲಿ ಪುಸ್ತಕ, ಓದು, ಲೈಬ್ರರಿ’ ಎಂಬ ಅಡಿ ಟಿಪ್ಪಣಿಯೇ ಕಥೆಗಳ ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ. ವಿವಿಧ ದೇಶ–ಭಾಷೆಗಳ ಹದಿಮೂರು ಕಥೆಗಳು ಸೇರಿದಂತೆ, ದಿವಾಕರ್ ಬರೆದ ಕನ್ನಡ ಕಥೆಯೂ ಸಂಕಲನದಲ್ಲಿ ಸೇರಿದೆ. ಈ ಕಥೆಗಳು ವಸ್ತುವಿನ ಕಾರಣದಿಂದಷ್ಟೇ ಅನನ್ಯವಲ್ಲ, ಕಥೆಯ ವ್ಯಾಕರಣದ ಕಾರಣದಿಂದಲೂ ಮುಖ್ಯವಾದವು. ವಸ್ತುವಿಗೆ ನಿರ್ದಿಷ್ಟ ಚೌಕಟ್ಟಿದ್ದರೂ ಒಂದು ಕಥೆಯಂತೆ ಇನ್ನೊಂದಿಲ್ಲ. ಈ ಕಥೆಗಳ ಕೇಂದ್ರದಲ್ಲಿ ಪುಸ್ತಕ, ಗ್ರಂಥಾಲಯ ಅಥವಾ ಓದುಗ ಇದ್ದರೂ, ಇವು ಪುಸ್ತಕ ಸಂಸ್ಕೃತಿಯ ನೆಪದಲ್ಲಿ ಮನುಷ್ಯನ ಅನೂಹ್ಯ ಮನೋಲೋಕವನ್ನು ಇಣುಕಿನೋಡುವ ಪ್ರಯತ್ನದಂತಿವೆ.
ಓದುವುದರಲ್ಲೇ ಜೀವನ ಕಳೆದಿರುವ ವ್ಯಕ್ತಿಯೊಬ್ಬ ಇಲ್ಲಿದ್ದಾನೆ. ಓದಲಿಕ್ಕೆ ಸಾಧ್ಯವಾಗದೆ ಹೋದರೆ ಬದುಕಿರುವುದರಲ್ಲಿ ಅರ್ಥವಿಲ್ಲ ಎಂದು ನಂಬಿರುವ ವ್ಯಕ್ತಿ ಮತ್ತೊಂದು ಕಥೆಯಲ್ಲಿದ್ದಾನೆ. ಓದು ನಮ್ಮೊಳಗೆ ಅನಾವರಣಗೊಳಿಸುವ ಬೆರಗು–ತಲ್ಲಣಗಳು ಇಲ್ಲಿನ ಕಥೆಗಳಲ್ಲಿವೆ. ವಾಸ್ತವ ಹಾಗೂ ಪ್ರತಿವಾಸ್ತವದ ಮುಖಾಮುಖಿಯಂತೆ ಕೆಲವು ಕಥೆಗಳು ಕಾಣಿಸುತ್ತವೆ. ಸಾಹಿತ್ಯದ ಆರ್ದ್ರತೆಯ ಜೊತೆಗೆ ಪ್ರತಿರೋಧದ ಮಾಧ್ಯಮವಾಗಿಯೂ ಸಾಹಿತ್ಯ ಬಳಕೆಯಾಗುವ ಸೋಜಿಗದ ರಚನೆಗಳು ಇಲ್ಲಿವೆ. ದಿವಾಕರರ ಕಥೆಯಂತೂ ಪುಸ್ತಕಗಳ ಕಥೆಯನ್ನು ಹೇಳುತ್ತಲೇ, ಅದು ಪುಸ್ತಕದಾಚೆಗೂ ಮನುಷ್ಯನ ಅನುಭವದಾಚೆಗೂ ಹಬ್ಬಿರಬಹುದಾದ ಲೋಕವೊಂದನ್ನು ಕಾಣಿಸುವ ಪ್ರಯತ್ನದಂತಿದೆ. ಓದು ಮತ್ತು ಪುಸ್ತಕದ ಸ್ವರೂಪ ಬದಲಾಗುತ್ತಿರುವ ಸಂದರ್ಭದಲ್ಲಿ ರೂಪುಗೊಂಡಿರುವ ಈ ಕೃತಿ ಪುಸ್ತಕ ಹಾಗೂ ‘ಪುಸ್ತಕ ಸಂಸ್ಕೃತಿ’ ಅವಿನಾಶಿ ಎನ್ನುವುದನ್ನು ಹೇಳುವ ಪ್ರಯತ್ನದಂತೆಯೂ ಕಾಣಿಸುತ್ತದೆ.
ಎರಡು ರಟ್ಟುಗಳ ನಡುವೆ
ಕನ್ನಡಕ್ಕೆ: ಎಸ್. ದಿವಾಕರ್
ಪು: 128
ಬೆ: ರೂ. 150
ಪ್ರ: ವೀರಲೋಕ ಬೆಂಗಳೂರು.
ಮೊಬೈಲ್: 7022122121
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.