ADVERTISEMENT

ಪುಸ್ತಕ ವಿಮರ್ಶೆ: ಪ್ರಚಲಿತ ರಾಜಕೀಯ ಮಹಾಭಾರತ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 19:30 IST
Last Updated 1 ಏಪ್ರಿಲ್ 2023, 19:30 IST
ಹಸ್ತಿನಾವತಿ
ಹಸ್ತಿನಾವತಿ   

ಮಹಾಭಾರತ ಅಂದಿಗೂ ಇಂದಿಗೂ ಪ್ರಸ್ತುತವೇ. ಅದರಲ್ಲೂ ರಾಜಕಾರಣದ ಸಂದರ್ಭದಲ್ಲಿ ನೋಡಿದರೆ ಕಾಲವಷ್ಟೇ ಬದಲಾಗಿದೆ; ತಂತ್ರ, ನೀತಿ, ವ್ಯವಸ್ಥೆ ಬದಲಾಗಿಲ್ಲ. ಇಂದಿನ ಕಾಲಘಟ್ಟಕ್ಕೆ ಹೊಂದುವಂತೆ ಹಿಂದಿನ ಮಹಾನ್‌ ಕಥನದ ಛಾಯೆ ಇಟ್ಟುಕೊಂಡು ರೂಪತಾಳಿದೆ ‘ಹಸ್ತಿನಾವತಿ’. ಪತ್ರಕರ್ತ ಜೋಗಿ ಅವರ 20ನೇ ಕಾದಂಬರಿ ಇದಾಗಿದ್ದು, ಈ ಕಾದಂಬರಿಯಲ್ಲೂ ಎಂದಿನಂತೆ ಜೋಗಿ ‘ಟಚ್‌’ ಇದೆ.

ದೇಶದ ಪ್ರಧಾನಿ ಸಂಜಯ್‌ ಸರ್ಕಾರ್‌, ಅವನಿಗೊಬ್ಬ ರಾಜಕೀಯ ತಂತ್ರಗಾರ ಸಹದೇವ, ಹೊರನೋಟಕ್ಕೆ ಏಕಾಂಗಿ ಅನಿಸಿಕೊಂಡಿರುವ ಪ್ರಧಾನಿಯ ಒಳಗಿನ ತುಮುಲಗಳು, ವೈಯಕ್ತಿಕ ಸಂಬಂಧಗಳು ಸಾರ್ವಜನಿಕ ಬದುಕಿನಲ್ಲಿ ಬಟಾ ಬಯಲಾಗುವ ಸಾಧ್ಯತೆ ಸದಾ ಇರುತ್ತದೆ. ಅದರಿಂದಾಗುವ ಅಪಾಯಗಳು, ಮುಗಿಬೀಳಲು ಕಾಯುತ್ತಿರುವ ಪ್ರತಿಸ್ಪರ್ಧಿಗಳು, ಸಣ್ಣ ಘಟನೆಗಳನ್ನೂ ವೈಭವೀಕರಿಸುವ (ಕೆಲವೊಮ್ಮೆ ವ್ಯವವಸ್ಥೆಯನ್ನು ಕುಲಗೆಡಿಸುವ) ಮಾಧ್ಯಮಗಳು ಒಟ್ಟಾರೆ ಸಂಘರ್ಷಗಳನ್ನು ‘ಮಹಾಭಾರತ’ದ ಒಳ ಚೌಕಟ್ಟಿನಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದೆ ಈ ಕೃತಿ. ಇಲ್ಲಿ ಬಿಲ್ಲು–ಬಾಣ, ಬುಲೆಟ್‌–ಬಾಂಬ್‌ಗಳು ಸದ್ದು ಮಾಡಿಲ್ಲ. ಆದರೆ, ಒಳಗೊಳಗೇ ನಡೆಯುವ ತಂತ್ರ–ಕುತಂತ್ರ, ಕುದಿ ಬೇಗುದಿಗಳನ್ನು ಯುದ್ಧದ ರೀತಿಯಲ್ಲೇ ಕಟ್ಟಿಕೊಡಲಾಗಿದೆ. ಸದ್ಯದ ಸರ್ಕಾರದ ಅವಧಿಯಲ್ಲೇ ನಡೆದ ಅನೇಕ ಘಟನೆಗಳಿಗೆ ಒಂದಿಷ್ಟು ಕಾಲ್ಪನಿಕ ಸ್ಪರ್ಶ ನೀಡಲಾಗಿದೆ. ದೆಹಲಿಯಲ್ಲಿ ಆರಂಭವಾಗುವ ಕಥೆ ದಕ್ಷಿಣ ಕನ್ನಡದ ಸುರತ್ಕಲ್‌ವರೆಗೂ ಬಂದು ಹಾದು ಹೋಗುತ್ತದೆ. ನಡುವೆ ಎಷ್ಟೊಂದು ರಾಜಕಾರಣ, ಏನೆಲ್ಲ ಧರ್ಮಕಾರಣ.

ಅಧ್ಯಾಯದಿಂದ ಅಧ್ಯಾಯಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಾ, ಅನಿರೀಕ್ಷಿತ ಘಟನೆಗಳಿಗೆ ಖೋ ಕೊಡುತ್ತಾ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಕಥೆ. ಇತಿಹಾಸ ಮರುಕಳಿಸುತ್ತದೆ ಎನ್ನುವ ಮಾತಿದೆ. ಅದು ಹೇಗೆ ಮರುಕಳಿಸುತ್ತದೆ ಎನ್ನುವುದಕ್ಕೆ ಈ ಕಾದಂಬರಿಯಲ್ಲಿ ಸಾಕ್ಷ್ಯಗಳಿವೆ. ಕಥೆಯ ಚೌಕಟ್ಟಿಗೆ ಹೊಂದುವಂತೆ ಆದಿಪರ್ವ, ಸಭಾಪರ್ವ, ಅರಣ್ಯಪರ್ವ, ಉದ್ಯೋಗಪರ್ವ, ಶಾಂತಿಪರ್ವ ಎಂಬ ಭಾಗಗಳನ್ನು ಲೇಖಕರು ಮಾಡಿಕೊಂಡಿದ್ದಾರೆ. ‘ಮತ್ತೆ ಮತ್ತೆ ಬರೆಸಿಕೊಳ್ಳುವ ಮಹಾಭಾರತ, ಮತ್ತೆ ಮತ್ತೆ ಹುಟ್ಟುವ ಶ್ರೀಕೃಷ್ಣ, ಮತ್ತೆ ಮತ್ತೆ ಸಾಯುವ ದುರ್ಯೋಧನ – ಈ ಚಕ್ರ ನಿರಂತರ. ಆ ಚಕ್ರವನ್ನು ನೆತ್ತಿಯಲ್ಲಿ ಹೊತ್ತವನ ಕತೆ ಇದು’ ಎಂದೆನ್ನುವ ಜೋಗಿ, ಪುರಾಣದ ಜಾಡಿನಲ್ಲಿ ಸಾಗಿ, ವರ್ತಮಾನದ ವಿದ್ಯಮಾನಗಳಿಗೆ ಕನ್ನಡಿ ಹಿಡಿಯಲು ಬಳಸಿದ ತಂತ್ರ ಕಾದಂಬರಿಗೆ ಬೇರೆಯದೇ ಆದ ಸೊಬಗನ್ನು ನೀಡಿದೆ.

ADVERTISEMENT

ಹಸ್ತಿನಾವತಿ
ಲೇ: ಜೋಗಿ
ಪ್ರ: ಅಂಕಿತ ಪುಸ್ತಕ ಬೆಂಗಳೂರು
ಸಂ: 9019190502

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.