ADVERTISEMENT

ಪುಸ್ತಕ ಪರಿಚಯ | ಹೊಸತಾಗದ ಹೊನ್ನು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 4:42 IST
Last Updated 20 ಅಕ್ಟೋಬರ್ 2019, 4:42 IST
   

ಹೊನ್ನು ಎಷ್ಟು ಹಳತಾದರೂ ಅದು ಹೊನ್ನೇ. ಕಾಲದ ದಾಳಿ ಹೊನ್ನಿನ ಹೊಳಪನ್ನು ಕಡಿಮೆ ಮಾಡುವುದಿಲ್ಲ; ಅದನ್ನು ತಿಕ್ಕುವ ಕೆಲಸ ಆಗಬೇಕಷ್ಟೆ. ಹೊನ್ನು ಕಾಲಪ್ರವಾಹದಲ್ಲಿ ಕೊಳೆಯುವುದೂ ಇಲ್ಲ; ಇದೇ ಅದರ ಹಿರಿಮೆ. ಹೊನ್ನಿನಲ್ಲಿ ತಯಾರಾದ ಆಭರಣಗಳಿಗೆ ಕಾಲದ ಹಂಗು ಇರಬಹುದು; ಆದರೆ ಮೂಲಧಾತುವಾದ ಹೊನ್ನಿಗೆ ಅಂಥ ಹಂಗು ಇರದು. ನಮ್ಮ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಹಳಗನ್ನಡ ಎಂದರೆ ಅದು ಹೊನ್ನೇ ಹೌದು. ಅದನ್ನು ನಮ್ಮ ಕಾಲದ ಆಶಯಗಳ ನಿಕಷಕ್ಕೆ ಒಡ್ಡಿ, ನಮ್ಮ ಇಂದಿನ ರುಚಿಗೆ ಅನುಗುಣವಾಗಿ ಒಗ್ಗಿಸಿಕೊಂಡು ರೂಪಿಸಿಕೊಳ್ಳಬಹುದಾದ ಆಭರಣಗಳ ಮಾದರಿಗಳನ್ನು ಕಂಡುಕೊಳ್ಳುವ ಪ್ರಯತ್ನವೇ ‘ಹಳತು–ಹೊನ್ನು’ ಕೃತಿಯ ಆಶಯ.

ಶ್ರವಣಬೆಳಗೊಳದಲ್ಲಿ 2018ರ ಜೂನ್‌ನಲ್ಲಿ ನಡೆದ ಅಖಿಲ ಭಾರತ ಮಟ್ಟದ, ಹಳಗನ್ನಡ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿತ್ತು. ಈ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನವೇ ‘ಹಳತು–ಹೊನ್ನು.’ ಇದರ ಸಂಪಾದಕರು ಪದ್ಮರಾಜ ದಂಡಾವತಿ; ತುಂಬ ಪ್ರಯಾಸದಿಂದ ಈ ಪ್ರಬಂಧಗಳನ್ನು ಒಟ್ಟುಗೂಡಿಸಿದ್ದಾರೆ. ಜತೆಗೆ ಅವರ ಸುದೀರ್ಘ ಪೀಠಿಕೆ ಎಲ್ಲ ಪ್ರಬಂಧಗಳ ಸಾರವನ್ನು ಕನ್ನಡಿಯಲ್ಲಿ ತೋರಿಸುವಂತಿದೆ. ಕೆಲವೊಂದು ಪ್ರಬಂಧಗಳಲ್ಲಿ ಮುದ್ರಣದೋಷಗಳು ಉಳಿದಿವೆಯಾದರೂ, ಒಟ್ಟಂದದಲ್ಲಿಪುಸ್ತಕ ಅಚ್ಚುಕಟ್ಟಾಗಿ ಮೂಡಿದೆ ಎನ್ನಲಡ್ಡಿಯಿಲ್ಲ.

ಹಳಗನ್ನಡದಲ್ಲಿ ಕೃಷಿಮಾಡಿರುವ ಹಿರಿಯ–ಕಿರಿಯ ವಿದ್ವಾಂಸರ, ವಿದುಷಿಯರ ಇಪ್ಪತ್ತು ಪ್ರಬಂದಗಳು ಇಲ್ಲಿ ಅಡಕವಾಗಿವೆ. ‘ಈ ಸಮ್ಮೇಳನ(ವನ್ನು) ರೂಪಿಸಲು ಪರಿಷತ್ತಿಗೆ ಇದ್ದ ಒತ್ತಾಸೆ ಎಂದರೆ ಹಳಗನ್ನಡದ ಓದು ಏಕೆ ಮುಖ್ಯ ಎಂಬುದನ್ನು ಇಂಥ ಸಮ್ಮೇಳನದ ವೇದಿಕೆಯಲ್ಲಿ ಚರ್ಚಿಸಬೇಕು ಹಾಗೂ ಹಳಗನ್ನಡ ಕಾವ್ಯದ ಓದಿನ ಅಗತ್ಯವನ್ನು ಮನವರಿಕೆ ಮಾಡಿಕೊಡಬೇಕು ಎನ್ನುವುದು ಆಗಿತ್ತು’ ಎಂಬ ಸಂಪಾದಕರ ಮಾತಿನ ಹಿನ್ನೆಲೆಯಲ್ಲಿ ಈ ಪ್ರಬಂಧಗಳನ್ನು ನೋಡಬೇಕಾಗುತ್ತದೆ. ಆದರೆ ಈ ಆಶಯವನ್ನು ಈ ಪ್ರಬಂಧಗಳು ಎಷ್ಟರ ಮಟ್ಟಿಗೆ ಪೂರೈಸಿವೆ ಎನ್ನುವುದೇ ಪ್ರಶ್ನೆ. ಎಲ್ಲ ಪ್ರಬಂಧಗಳೂ ಹಳಗನ್ನಡ ಎಂಬ ಕಸವರದ ರಸ ಪರತೆಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿಲ್ಲ; ಯಶಸ್ವಿಯಾಗಿರುವಂಥವೂ ಕೂಡ ಆಂಶಿಕವಾಗಿ ಮಾತ್ರವೇ. ಆಶಯಭಾಷಣಕಾರರಾದ ಹಂಪ ನಾಗರಾಜಯ್ಯ ಅವರು ಹಳಗನ್ನಡದ ಮಾತುಗಳನ್ನು ಗಣ್ಯರ ಪರಿಚಯಕ್ಕೆ ಮಿತಮಾಡಿಕೊಂಡಿರುವುದು ಹಳಗನ್ನಡದ ಇಂದಿನ ಸ್ಥಿತಿಯನ್ನು ಧ್ವನಿಸುವಂತಿದೆ. ಹಳಗನ್ನಡವನ್ನು ಹೊಗಳಿಕೆಯ ಹೊನ್ನಶೂಲದಿಂದ ಬಿಡುಗಡೆಗೊಳಿಸಿ, ಸಹಜ ಜನಪ್ರೀತಿಗೆ ಹೇಗೆ ಪಾತ್ರವನ್ನಾಗಿಸುವುದು ಎನ್ನುವುದೇ ಇಂದಿನ ದೊಡ್ಡ ಪ್ರಶ್ನೆಯಲ್ಲವೆ?

ADVERTISEMENT

ಷ.ಶೆಟ್ಟರ್‌, ಪುರುಷೋತ್ತಮ ಬಿಳಿಮಲೆ, ಚಂದ್ರಶೇಖರ ನಂಗಲಿ, ಶಾಂತಿನಾಥ ದಿಬ್ಬದ, ದುರ್ಗಾದಾಸ್‌, ಗೀತಾ ವಸಂತ, ಪ್ರಮೀಳಾ ಮಾಧವ್, ಶ್ರೀಕಂಠ ಕೂಡಿಗೆ, ಕೆ. ವೈ. ನಾರಾಯಣಸ್ವಾಮಿ, ಎಂ.ಎಸ್‌. ಆಶಾದೇವಿ, ಪಿ.ವಿ. ನಾರಾಯಣ, ಮೇಟಿ ಮಲ್ಲಿಕಾರ್ಜುನ, ಮಾಧವ ಪೆರಾಜೆ, ಶ್ರೀವತ್ಸ ಎಸ್‌.ವಟಿ, ಎಸ್‌.ಪಿ. ಪದ್ಮಪ್ರಸಾದ್‌, ವೆಂಕಟಗಿರಿ ದಳವಾಯಿ, ತಮಿಳ್‌ ಸೆಲ್ವಿ, ಜಿನದತ್ತ ಹಡಗಲಿ ಮತ್ತು ಪ್ರೀತಿ ಶುಭಚಂದ್ರ – ಇವರ ಪ್ರಬಂಧಗಳು ‘ಹಳತು–ಹೊನ್ನು’ ಕೃತಿಯಲ್ಲಿ ಸಂಗ್ರಹವಾಗಿವೆ. ‘ಹಳಗನ್ನಡ ಸಾಹಿತ್ಯ–ಮರುಸೃಷ್ಟಿಯ ಸವಾಲುಗಳು’, ‘ಪಂಪಭಾರತದರ್ಶನಂ’, ‘ಹಳಗನ್ನಡದ ಓದು: ಪಂಪ, ರನ್ನ’, ‘ಹಳಗನ್ನಡ ಸಾಹಿತ್ಯದ ಪ್ರಸ್ತುತತೆ ಸ್ತ್ರೀಲೋಕದ ದೃಷ್ಟಿ’, ‘ರಟ್ಟಕವಿಯ ರಟ್ಟಮತ’, ‘ಶಾಸನಗಳ ಮೇಲೆ ಹಳಗನ್ನಡದ ಸಾಹಿತ್ಯದ ಪ್ರಭಾವ’, ‘ಕವಿರಾಜಮಾರ್ಗದ ಅನನ್ಯತೆ’ – ಹೀಗೆ ವಿಷಯದಲ್ಲಂತೂ ವೈವಿಧ್ಯವಿದೆ; ಪಂಪ–ರನ್ನರಿಗಷ್ಟೆ ಸೀಮಿತವಾಗದೆ, ಜನ್ನ, ನಾಗಚಂದ್ರ, ಪೊನ್ನರ ಬಗ್ಗೆಯೂ ಪ್ರಬಂಧಗಳಿವೆ. ಹಳಗನ್ನಡದ ಓದಿಗೆ ಪೂರಕವಾಗಿ ನೆರವಾಗುವಲ್ಲಿ ‘ಪಂಪಭಾರತದರ್ಶನಂ’ ಮತ್ತು ‘ಹಳಗನ್ನಡ ಓದು: ಪಂಪ, ರನ್ನ’ – ಈ ಎರಡು ಪ್ರಬಂಧಗಳು ಗಮನ ಸೆಳೆಯುತ್ತವೆ. ಹಳಗನ್ನಡದ ಇತಿಹಾಸದಲ್ಲಿರುವ ಪದರಗಳನ್ನು ಅರಿಯಲು ಶೆಟ್ಟರ್‌ ಅವರ ಅಧ್ಯಕ್ಷ ಭಾಷಣ ಮತ್ತು ಪುರುಷೋತ್ತಮ ಬಿಳಿಮಲೆ ಅವರ ಪ್ರಬಂಧ ನೆರವಾಗುತ್ತವೆ.

ಹಲವು ಶತಮಾನಗಳ ಹಿಂದೆ ರಚನೆಯಾಗಿರುವ ಹಳಗನ್ನಡ ಕೃತಿಗಳನ್ನು ಇಂದೂ ಏಕೆ ಓದಬೇಕು? ಏಕೆ ಓದುತ್ತಿದ್ದಾರೆ? ಹೇಗೆ ಓದಬೇಕು? ಇವು ಮತ್ತೆ ಮತ್ತೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಉತ್ತರವನ್ನು ಸೂಚಿಸುವ ಮೊದಲು ಹಳಗನ್ನಡ ಕಾವ್ಯಗಳನ್ನು ‘ಮೊದಲಿಗೆ ಅವು ಸಾಹಿತ್ಯಕೃತಿಗಳು’ ಎಂದು ನೋಡುವಂಥ ದೃಷ್ಟಿಯನ್ನು ಒದಗಿಸಬೇಕಲ್ಲವೆ? ಆ ಬಳಿಕವಷ್ಟೆ ಇಂದಿನ ವಾದ–ಇಸಂಗಳ ನೆರಳಿನಲ್ಲಿ ಬಳಸಿ ಅವನ್ನು ಪರೀಕ್ಷಿಸಲಾದೀತಲ್ಲವೆ? ಇಂಥದೊಂದು ತಿಳಿವಳಿಕೆಯನ್ನು ಕಟ್ಟಿಕೊಡುವಲ್ಲಿ ಇಲ್ಲಿಯ ಹಲವು ಪ್ರಬಂಧಗಳು ಸೋತಿವೆ. ಹಲವು ಪ್ರಬಂಧಗಳಲ್ಲಿರುವ ಮಾಹಿತಿಯೂ ದಿಕ್ಕುತಪ್ಪಿಸುವಂತಿದೆ (ಉದಾಹರಣೆಗೆ: ‘ರಘುವಂಶ’ವನ್ನು ಪ್ರಬಂಧವೊಂದು ಖಂಡಕಾವ್ಯ ಎನ್ನುತ್ತದೆ!). ಇಲ್ಲಿಯ ಪ್ರಬಂಧಕಾರರ ಮಾತೊಂದು ಹೀಗಿದೆ:

‘ಓದುವ ಮನಸ್ಸಿರುವವರಿಗೆ ಹಳಗನ್ನಡಕಾವ್ಯದಲ್ಲಿ ಸಿಗುವ ಸುಖಸಂತೋಷಕ್ಕೆ ಪರಿಮಿತಿಯೇ ಇಲ್ಲ. ಹಳಗನ್ನಡದ ಕವಿಗಳು ತುಂಬಾ ರಸಿಕರು. ಅಲ್ಲದೆ ನಮಗಿಂತ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಹೊಂದಿದ್ದರು. ವ್ಯಾಕರಣ, ಛಂದಸ್ಸು, ಅಲಂಕಾರ ಮುಂತಾದವವುಗಳನ್ನು ಬದಿಗಿರಿಸಿ ಮಾರ್ಗಕಾರನ ಗ್ರಂಥವನ್ನು ಓದಿ ನಾನು ಆನಂದಿಸಿರುವೆ.’

ಇಲ್ಲಿ ಪ್ರಶ್ನೆ ಇರುವುದು ‘ವ್ಯಾಕರಣ, ಛಂದಸ್ಸು, ಅಲಂಕಾರ ಮುಂತಾದವುಗಳನ್ನು ಬದಿಗಿರಿಸಿ ಮಾರ್ಗಕಾರನ ಗ್ರಂಥವನ್ನು ಓದುವುದು ಹೇಗೆ’ ಎಂದು!

ಹಳತು–ಹೊನ್ನು

ಸಂಪಾದಕರು: ಪದ್ಮರಾಜ ದಂಡಾವತಿ

ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು

ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ

ಬೆಂಗಳೂರು – 560018

ಪ್ರಥಮ ಮುದ್ರಣ: 2019

ಪುಟಗಳು: 296

ಬೆಲೆ: ₹ 210/–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.