ADVERTISEMENT

ಪುಸ್ತಕ ವಿಮರ್ಶೆ | ಅಂಗೈಯಲ್ಲಿ ಜಗತ್ತು ಕಟ್ಟಿಕೊಡುವ ಕೃತಿ

ಪ್ರಜಾವಾಣಿ ವಿಶೇಷ
Published 25 ಮಾರ್ಚ್ 2023, 23:15 IST
Last Updated 25 ಮಾರ್ಚ್ 2023, 23:15 IST
ಜಗಲಿಯಿಂದ ಜಗತ್ತು
ಜಗಲಿಯಿಂದ ಜಗತ್ತು   

ಜಗಲಿಯಿಂದ ಜಗತ್ತು

ಲೇ: ನಾಗತಿಹಳ್ಳಿ ಚಂದ್ರಶೇಖರ

ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ

ADVERTISEMENT

ಸಂ: 080–26712230

ಈ ಹಿಂದೆ ‘ಅರಿಗಟೊ ಗೊಜಾಯಿಮಸ್‌’ ಎಂಬ ಶೀರ್ಷಿಕೆ ಹೊತ್ತ ಕೃತಿಯಲ್ಲಿ ಜಪಾನ್‌ಗೊಂದು ಕೃತಜ್ಞತೆ ಸಲ್ಲಿಸುತ್ತಾ, ಪುಟ್ಟ ದೇಶದಲ್ಲಿ ಓಡಾಡಿದ ನೆನಪುಗಳ ಬುತ್ತಿಯನ್ನು ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರು ಓದುಗರ ಮುಂದಿಟ್ಟಿದ್ದರು. ಈ ಹೊಸ ಕೃತಿಯಲ್ಲಿ ಅವರ ಪಯಣ ವಿಸ್ತಾರವಾಗಿದೆ, ವಿವರವಾಗಿದೆ.

ಜಪಾನ್‌ ಜೊತೆಗೆ ಅಮೆರಿಕ, ಫ್ರಾನ್ಸ್‌, ಈಜಿಪ್ಟ್‌ ಹೀಗೆ ಸುತ್ತಾಡುತ್ತಾ ಅಲ್ಲಿನ ಸ್ಥಳಗಳಿಗೆ ತಾವು ಭೇಟಿ ಕೊಟ್ಟಾಗ ಸೆಳೆದ ವಸ್ತುಗಳು, ವ್ಯಕ್ತಿಗಳು, ಚೆಂದದ ಏರೋಪ್ಲೇನ್‌ಗಳು, ಎದುರಾದ ಅಪರೂಪದ ಘಟನೆಗಳು, ಹಬ್ಬ ಹೀಗೆ ಅನುಭವ, ಅನುಭಾವದ ಸರಣಿಗಳನ್ನು ಹೆಕ್ಕಿ, ಓದುಗರಿಗೆ ಕಥೆಯಂತೆ ಇಲ್ಲಿ ಹೇಳುತ್ತಾ ಹೋಗಿದ್ದಾರೆ. ವಿದೇಶದ ಪ್ರವಾಸದ ಜೊತೆಗೆ ಹೊರನಾಡಿನಲ್ಲಿ ಭೇಟಿ ಮಾಡಿದ ಅಪರೂಪದ ಸ್ಥಳಗಳ ಬಗ್ಗೆಯೂ ಇಲ್ಲಿ ವರ್ಣನೆಯಿದೆ. ಉದಾಹರಣೆಗೆ ‘ಚಾಪ್ಲಿನ್‌ ಮನೆಯಲ್ಲಿ’ ಎಂಬ ಅಧ್ಯಾಯದಲ್ಲಿ ಆತನ ಮನೆಯನ್ನು ಮನೆಯನ್ನಷ್ಟಾಗೇ ನೋಡದೆ ಆತನ ಸಿನಿಮಾಗಳು ಪ್ರಸಕ್ತ ಕಾಲಕ್ಕೂ ಹೇಗೆ ವಾಸ್ತವ ಎಂದು ವಿವರಿಸಿದ್ದಾರೆ. ವೈಟ್ ಹೌಸ್ ಮುಂದಿದ್ದ ಫಲಕಕ್ಕೂ, ಬೆಂಗಳೂರಿನ ವಿಧಾನಸೌಧದ ಮುಂದಿರುವ ಫಲಕದಲ್ಲಿನ ಮಾತಿಗೂ ಸಂಪರ್ಕ ಕಲ್ಪಿಸಿ ಅವರು ಸೂಕ್ಷ್ಮವಾಗಿ ಕುಟುಕುವ ಕೆಲಸವನ್ನೂ ಮಾಡಿದ್ದಾರೆ. ಜಪಾನ್‌ನಲ್ಲಿ ತಿರುಗಾಡಿದ್ದಷ್ಟೇ ಅಲ್ಲದೆ, ಅಲ್ಲಿನ ಪದಗಳನ್ನು ಪಟ್ಟಿ ಮಾಡಿ ಜಪಾನ್‌ಗೆ ಹೋದವನು ಬದುಕಬಹುದಾದಷ್ಟು ಬೇಕಾಗುವ ಒಂದಿಷ್ಟು ಮಾತುಗಳನ್ನು ಕಟ್ಟಿ ಕೊಟ್ಟಿದ್ದಾರೆ. ಹೊರನಾಡಿನ ಹೆಜ್ಜೆಗಳ ಜೊತೆಗೆ ಒಳನಾಡಿನ ಕೇರಳ, ಶ್ರವಣಬೆಳಗೊಳ ಹೀಗೆ ಹಲವು ಸ್ಥಳಗಳಿಗೆ ಭೇಟಿ ನೀಡಿದ ಅನುಭವಗಳ ಬುತ್ತಿ ಇಲ್ಲಿದೆ.

ಪ್ರವಾಸ ಕಥನಗಳ ಸಿದ್ಧಸೂತ್ರವನ್ನು ಬದಿಗೊತ್ತಿ, ಒಂದೇ ಒಂದು ಛಾಯಾಚಿತ್ರವನ್ನು ಅಡಕಗೊಳಿಸದೆ ಊರಿನ, ಘಟನೆಗಳ ವರ್ಣನೆಯನ್ನು ಮಾಡುತ್ತಾ ಲೇಖಕರು ಹೆಜ್ಜೆ ಇಡುತ್ತಾರೆ. ಹೃದ್ಯ ಬರವಣಿಗೆಯಲ್ಲಿ ಚಿತ್ರಕಶಕ್ತಿ ಇದ್ದರೂ, ಕೇವಲ ಅಕ್ಷರಗಳೇ ತುಂಬಿರುವ ಈ ಬೃಹತ್‌ ಕೃತಿಯನ್ನು ಇಂದಿನ ಓದುಗ ಅರಗಿಸಿಕೊಳ್ಳುವುದು ಕಷ್ಟಸಾಧ್ಯ! ಒಟ್ಟಿನಲ್ಲಿ ಬಾಲ್ಯದಲ್ಲಿ ಸ್ಕೂಲ್‌ ಇನ್ಸ್‌ಪೆಕ್ಟರ್‌ ಎದುರು ‘ಲಾರಿ ಡ್ರೈವರ್‌ ಆಗ್ತೀನಿ’ ಎಂದು ಎದೆ ಸೆಟೆಸಿ ಹೇಳಿದ್ದ ನಾಗತಿಹಳ್ಳಿ ಅವರು ಓದುಗರನ್ನೆಲ್ಲಾ ಲಾರಿಯಲ್ಲೇ ಗುಡ್ಡೆ ಹಾಕಿ ವಿಶ್ವ ಸುತ್ತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.