ADVERTISEMENT

ಮನುಷ್ಯತ್ವದ ಮೇರು ಜೈನ ಮಹಾಪುರಾಣ

ರವೀಂದ್ರ ಭಟ್ಟ
Published 29 ಫೆಬ್ರುವರಿ 2020, 19:30 IST
Last Updated 29 ಫೆಬ್ರುವರಿ 2020, 19:30 IST
‘ಜೈನ ಮಹಾಪುರಾಣ’ ಪುಸ್ತಕ
‘ಜೈನ ಮಹಾಪುರಾಣ’ ಪುಸ್ತಕ   
""
""

10ನೇ ಶತಮಾನದಿಂದ 12ನೇ ಶತಮಾನದವರೆಗಿನ ಕನ್ನಡ ಕಾವ್ಯ ಇತಿಹಾಸಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟ ಮಹಾಪುರಾಣ 16ನೇ ಶತಮಾನದವರೆಗೆ ಕಾವ್ಯ ಕೃಷಿ ಮಾಡಿದ ವೀರಶೈವ ಕವಿಗಳಿಗೆ ಪ್ರೇರಕ ಶಕ್ತಿಯಾಗಿತ್ತು ಎಂದೂ ತಜ್ಞರು ಹೇಳುತ್ತಾರೆ.

‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬುದು ಪಂಪ ಮಹಾಕವಿಯ ವಾಕ್ಯ. ‘ಏನಾದರೂ ಆಗು, ಮೊದಲು ಮಾನವನಾಗು’ ಎಂಬ ಕವಿವಾಣಿಯೂ ಕನ್ನಡದಲ್ಲಿ ಇದೆ. ಇದಕ್ಕೆಲ್ಲಾ ಪ್ರೇರಣೆಯಾಗಿದ್ದು ಜೈನ ಮಹಾಪುರಾಣದ ‘ಮನುಷ್ಯ ಜಾತಿರೇಕೇವ’ ಎಂಬ ಮಾತು. ಮನುಷ್ಯತ್ವವನ್ನೇ ಬೋಧಿಸುವ ಮಹಾಪುರಾಣ ಈಗಿನ ಕಾಲಕ್ಕೂ ಪ್ರಸ್ತುತ. ಯಾಕೆಂದರೆ ಇದು ರಾಜನೀತಿಯನ್ನೂ ಹೇಳುತ್ತದೆ. ಯುದ್ಧನೀತಿಯನ್ನೂ ಹೇಳುತ್ತದೆ. ವಿದೇಶ ನೀತಿ, ವ್ಯಾಪಾರ, ವಿಜ್ಞಾನ, ಕೃಷಿ, ಸಮತಾವಾದ, ಕುಟುಂಬ ನೀತಿ, ಸಮಾಜಶಾಸ್ತ್ರ, ಕಾಮಶಾಸ್ತ್ರ, ಗಣಿತ, ಪ್ರಾಣಿ, ಸಸ್ಯಶಾಸ್ತ್ರ, ಕೇಶ ವಿನ್ಯಾಸ ಹೀಗೆ ಸರ್ವ ವಿಷಯಗಳ ಬಗ್ಗೆಯೂ ಇಲ್ಲಿ ಚರ್ಚೆಯಾಗಿದೆ. ಇದರಲ್ಲಿ ಮಹಾಭಾರತವೂ ಇದೆ. ರಾಮಾಯಣವೂ ಇದೆ.

ಜೈನ ಮಹಾಪುರಾಣ ಗಾತ್ರದಲ್ಲಿಯೂ, ಗುಣದಲ್ಲಿಯೂ, ವಸ್ತುವಿನಲ್ಲಿಯೂ ಮಹಾ ಪುರಾಣವೇ ಸೈ. ಬೃಹತ್ ಜ್ಞಾನ ಭಂಡಾರ. 9ನೇ ಶತಮಾನದಲ್ಲಿ ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯ ಅವರು ಇದನ್ನು ರಚಿಸಿದರು. ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಸಂಸ್ಕೃತದಲ್ಲಿ ರಚಿತವಾದ ಮಹಾಪುರಾಣ ನಂತರ ಬಂದ ಬಹುತೇಕ ಮಹಾಕವಿಗಳ ಮೇಲೆ ಪ್ರಭಾವ ಬೀರಿದೆ. ಆದಿಕವಿ ಪಂಪ, ಪೊನ್ನ, ರನ್ನ, ನಾಗಚಂದ್ರ, ಇಮ್ಮಡಿ ನಾಗವರ್ಮ, ನೇಮಿಚಂದ್ರ, ಜನ್ನ, ಇಮ್ಮಡಿ ಗುಣಧರ್ಮ, ಮಧುರ, ಮುಮ್ಮಡಿ ಮಂಗರಸ ಮುಂತಾದ ಕವಿಗಳ ಮೇಲೆ ಮಹಾಪುರಾಣ ಪ್ರಭಾವ ಬೀರಿದೆ ಎನ್ನುವುದನ್ನು ಸಂಶೋಧಕರು ಗುರುತಿಸಿದ್ದಾರೆ.

ADVERTISEMENT

24 ಮಂದಿ ತೀರ್ಥಂಕರರು, 12 ಚಕ್ರವರ್ತಿಗಳು, 9 ಪ್ರತಿ ನಾರಾಯಣರು ಸೇರಿ ಒಟ್ಟು 63 ಮಂದಿ ಜೈನ ಪುರಾಣ ಪುರುಷರ ಚರಿತ್ರೆ ಇದರಲ್ಲಿದೆ. 10ನೇ ಶತಮಾನದಿಂದ 12ನೇ ಶತಮಾನದವರೆಗಿನ ಕನ್ನಡ ಕಾವ್ಯ ಇತಿಹಾಸಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟ ಮಹಾಪುರಾಣ 16ನೇ ಶತಮಾನದವರೆಗೆ ಕಾವ್ಯ ಕೃಷಿ ಮಾಡಿದ ವೀರಶೈವ ಕವಿಗಳಿಗೆ ಪ್ರೇರಕ ಶಕ್ತಿಯಾಗಿತ್ತು ಎಂದೂ ತಜ್ಞರು ಹೇಳುತ್ತಾರೆ.

ಮಹಾಪುರಾಣದ 42 ಪರ್ವಗಳ ಪೂರ್ವ ಭಾಗವನ್ನು ಜಿನಸೇನಾಚಾರ್ಯರು ಹಾಗೂ 5 ಪರ್ವಗಳ ಉತ್ತರ ಭಾಗವನ್ನು ಗುಣಭದ್ರಾಚಾರ್ಯರು ರಚಿಸಿದರು. ಜಿನಸೇನಾಚಾರ್ಯರ ಶಿಷ್ಯರಾಗಿದ್ದ ಗುಣಭದ್ರಾಚಾರ್ಯರು ಉತ್ತರ ಪುರಾಣದ 29 ಪರ್ವಗಳು ಹಾಗೂ ಒಂದು ಪ್ರಶಸ್ತಿ ಪರ್ವವನ್ನೂ ರಚಿಸಿ ಮಹಾಪುರಾಣವನ್ನು ಪೂರ್ಣಗೊಳಿಸಿದರು. 9ನೇ ಶತಮಾನದಿಂದ 20ನೇ ಶತಮಾನದವರೆಗೂ ಇದು ಸಂಸ್ಕೃತದಲ್ಲಿ ಮಾತ್ರ ಇತ್ತು. 1925ರಲ್ಲಿ ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಪೂರ್ವ ಪುರಾಣದ ಮೊದಲ 42 ಪರ್ವಗಳನನ್ನು ಕನ್ನಡಕ್ಕೆ ಭಾಷಾಂತರಿಸಿದರು. ಉಳಿದ ಭಾಗ 1933ರಲ್ಲಿ ಕನ್ನಡದಲ್ಲಿ ಬಂತು. ಮೂವತ್ತು ಪರ್ವಗಳ ಉತ್ತರ ಪುರಾಣವನ್ನು 1940ರಲ್ಲಿ ಅವರು ಪ್ರಕಟಿಸಿದರು. ಸುಮಾರು 25 ವರ್ಷ ತಪಸ್ಸಿನಂತೆ ಈ ಕಾರ್ಯವನ್ನು ಅವರು ಮಾಡಿದ್ದಾರೆ. ಈ ಬೃಹತ್ ಗ್ರಂಥ ಕನ್ನಡದಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆ.

ಜೈನ ಮಹಾಪುರಾಣದ ತಿರುಳು ಅಂತರರಾಷ್ಟ್ರೀಯ ಮಟ್ಟಕ್ಕೂ ತಲುಪಬೇಕು ಎನ್ನುವ ಕಾರಣದಿಂದ ಶಾಂತಿರಾಜ ಶಾಸ್ತ್ರಿಗಳ ಪುತ್ರ ಹಿರಿಯ ಭೂವಿಜ್ಞಾನಿ ಜಿತೇಂದ್ರಕುಮಾರ್ ಅವರು ಅದರ ಇಂಗ್ಲಿಷ್ ಭಾಷಾಂತರ ಪ್ರಕಟಣೆಗೂ ಮುಂದಾಗಿದ್ದಾರೆ. ಸುಮಾರು 20 ಸಾವಿರ ಶ್ಲೋಕಗಳು ಇರುವ ಈ ಮಹಾಗ್ರಂಥವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದವರು ಪ್ರೊ.ಕೆ.ಈ.ರಾಧಾಕೃಷ್ಣ.

ಪ್ರೊ.ರಾಧಾಕೃಷ್ಣ

ಪ್ರೊ.ರಾಧಾಕೃಷ್ಣ ಅವರು ಕೆ.ಆರ್.ಶಾಂತಾರಾಂ, ಪ್ರೊ.ವಿಜಯಲಕ್ಷ್ಮಿ ಸೇರಿದಂತೆ 20 ಮಂದಿಯ ತಂಡ ಕಟ್ಟಿಕೊಂಡು ನಾಲ್ಕು ವರ್ಷ ನಿರಂತರ ಯತ್ನ ನಡೆಸಿ ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. 7 ಸಂಪುಟಗಳ 5500 ಪುಟಗಳ ಈ ಬೃಹತ್ ಗ್ರಂಥ ಈಗ ಇಂಗ್ಲಿಷ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ವಿಶ್ವದ ನೂರು ವಿಶ್ವವಿದ್ಯಾಲಯಗಳಿಗೆ ಇದನ್ನು ತಲುಪಿಸುವ ಕಾರ್ಯವೂ ನಡೆಯುತ್ತಿದೆ ಎಂದು ಪ್ರೊ.ರಾಧಾಕೃಷ್ಣ ಹೇಳುತ್ತಾರೆ.

ಜೈನರ ಧರ್ಮಿಕ ನೀತಿ ಸಂಹಿತೆಯನನ್ನು ರೂಪಿಸಿದವನು ಭರತ, ಜೈನರ ಆದ್ಯ ಪ್ರವೃರ್ತಕ ವೃಷಭನಾಥ ಅವರ ವಿವರಗಳೂ ಇದರಲ್ಲಿ ಇದೆ. ಜೈನ ಮಹಾಪುರಾಣ ಸಂಶೋಧಕರಿಗೆ ವಿಪುಲ ಅವಕಾಶವನ್ನು ಒದಗಿಸುತ್ತದೆ. ಪುರಾಣದಲ್ಲಿರುವ ನೂರಾರು ವಿಷಯಗಳ ಬಗ್ಗೆ ಸಂಶೋಧನೆ ಮಾಡಬಹುದಾಗಿದೆ ಎಂದು ಅವರು ಹೇಳುತ್ತಾರೆ. ಜೈನ ಮಹಾಪುರಾಣವನ್ನು ಇಂಗ್ಲಿಷ್‌ಗೆ ಭಾಷಾಂತರಿಸುವುದು ತಮ್ಮ ಜೀವಮಾನದ ಸಾಧನೆ ಎಂದೇ ಅವರು ಪರಿಗಣಿಸಿದ್ದಾರೆ.

‘ಸಂಸ್ಕೃತ ಮತ್ತು ಕನ್ನಡದ ಮನೋಧರ್ಮ ಬೇರೆ. ಇಂಗ್ಲಿಷ್ ಮನೋಧರ್ಮ ಬೇರೆ. ಸಂಸ್ಕೃತದ ಈ ಕೃತಿಯನ್ನು ಇಂಗ್ಲಿಷ್‌ಗೆ ತರುವುದು ಬಹಳ ಕಷ್ಟದ ಕೆಲಸ. ಆದರೂ ಈ ಸವಾಲನ್ನು ನಾನು ಸ್ವೀಕರಿಸಿದೆ’ ಎಂದು ಅವರು ಹೇಳುತ್ತಾರೆ. ಇಂಗ್ಲಿಷ್ ಜೈನ ಮಹಾಪುರಾಣಕ್ಕೆ ಹೆಸರಾಂತ ಸಂಶೋಧಕ, ವಿದ್ವಾಂಸ ಪ್ರೊ.ಷ. ಶೆಟ್ಟರ್ ಮುನ್ನುಡಿ ಬರೆದಿದ್ದಾರೆ. ಸಾಹಿತಿ ಡಾ.ಎಚ್.ಎಸ್.ಶಿವಪ್ರಕಾಶ್ ಅವರ ವಿಶ್ಲೇಷಣೆ ಕೂಡ ಇದರೊಂದಿಗೆ ಇದೆ.

ಮನುಷ್ಯತ್ವವನ್ನೇ ಬೋಧಿಸುವ ಜೈನ ಮಹಾಪುರಾಣ ಈಗ ಆಂಗ್ಲ ಅಂಗಳಕ್ಕೆ ಜಿಗಿಯಲು ಸಿದ್ಧವಾಗಿ ನಿಂತಿದೆ.

(ಈ ಕೃತಿಯ ಬಿಡುಗಡೆ ಸಮಾರಂಭವು ಬೆಂಗಳೂರು ವಿ.ವಿ. ಪುರಂನ ಕೆ.ಆರ್‌.ರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ಮಾ.6ರಂದು ಸಂಜೆ 4ಕ್ಕೆ ನಡೆಯಲಿದೆ).

ಶಾಂತಿರಾಜ ಶಾಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.