ADVERTISEMENT

ಮೊದಲ ಓದು: ಜಮ್ಲೊ ಹಾಕಿದ ಹೆಜ್ಜೆ ಗುರುತುಗಳು

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 19:30 IST
Last Updated 11 ಜೂನ್ 2022, 19:30 IST
ಜಮ್ಲೊ ಹೆಜ್ಜೆ ಹಾಕುತ್ತಾಳೆ
ಜಮ್ಲೊ ಹೆಜ್ಜೆ ಹಾಕುತ್ತಾಳೆ   

ಮನೆಯ ಮಕ್ಕಳೆಲ್ಲ ಮನೆಯೊಳಗೇ ಬೋರು ಎಂದು ಅಳುತ್ತಿರುವಾಗ, ಆನ್ಲೈನ್‌ ಕ್ಲಾಸಿನಲ್ಲಿ ಮುಖ ಹುದುಗಿಸಿ ಕೂತಿರುವಾಗ, ಹೊರಗೆ ರಣಬಿಸಿಲಲ್ಲಿ, ಧಗೆಯೇರುವ ಡಾಂಬರು ರಸ್ತೆಯಲ್ಲಿ ಬರಿಗಾಲಲ್ಲಿ ಊರಿಗೆ ಹೊರಟವರ ಸರದಿಯನ್ನು ಪ್ರತ್ಯಕ್ಷವಾಗಿಯೋ, ಟಿವಿಯ ಪರದೆಯಲ್ಲಿಯೋ ನಾವೆಲ್ಲ ನೋಡಿಯೇ ಇರುತ್ತೇವೆ. ಹಾಗೆ ಹೊರಟವರ ಗುಂಪಿನಿಂದ, ಒಣಗಿದ ಗಂಟಲಿನ, ಆರಿದ ಕಂಗಳಿನ, ದಣಿದ ಹುಡುಗಿಯೊಬ್ಬಳು ತನ್ನ ಕಥೆಯನ್ನು ಹೇಳಿಕೊಂಡರೆ ಹೇಗಿರುತ್ತದೆ? ತನ್ನದೇ ವಯಸ್ಸಿನ ಹುಡುಗಿಯ ಆ ಪಾಡನ್ನು ಮನೆಯೊಳಗಿನ ಮಕ್ಕಳು ಕೇಳಿಸಿಕೊಂಡರೆ ಅವರಿಗೆ ಏನನಿಸಬಹುದು? ಈ ಪ್ರಶ್ನೆಗಳಿಗೆ ಉತ್ತರದಂತಿದೆ ‘ಜಮ್ಲೊ ಹೆಜ್ಜೆ ಹಾಕುತ್ತಾಳೆ’.

ಇದು 36‍ಪುಟದ ಸಚಿತ್ರ ಮಕ್ಕಳ ಪುಸ್ತಕ. ಸಮೀನಾ ಮಿಶ್ರಾ ಇಂಗ್ಲಿಷಿನಲ್ಲಿ ಬರೆದಿರುವ ಈ ಕೃತಿಯನ್ನು ಬೇದ್ರೆ ಮಂಜುನಾಥ ಅವರು ಕನ್ನಡಕ್ಕೆ ತಂದಿದ್ದಾರೆ. ನವಕರ್ನಾಟಕ ಪ್ರಕಾಶನ ಇದನ್ನು ಪ್ರಕಟಿಸಿದೆ. ಇದನ್ನು ಮಕ್ಕಳ ಪುಸ್ತಕ ಎಂದು ಸುಮ್ಮನಾದರೆ ಅದು ನಮ್ಮೊಳಗೆ ಎಬ್ಬಿಸುವ ತಲ್ಲಣಗಳಿಗೆ ವಂಚನೆ ಮಾಡಿದಂತಾಗುತ್ತದೆ. ಹಾಗೆ ನೋಡಿದರೆ ಇದು ದೊಡ್ಡವರೇ ಓದಬೇಕಾದ ಪುಸ್ತಕ. ಕಂದಮ್ಮಗಳನ್ನು ಕಾಪಾಡಿಕೊಳ್ಳಲಾಗದ ಇಂಥದ್ದೊಂದು ಸಮಾಜವನ್ನು ಕಟ್ಟಿರುವುದಕ್ಕೆ ನಾಚಿಕೊಳ್ಳುವಂತೆ ಮಾಡುವ ಪುಸ್ತಕ. ಈ ಕ್ರೂರ ವ್ಯವಸ್ಥೆಯ ಭಾಗವಾಗಿರುವುದಕ್ಕೆ ವಿಷಾದ ಹುಟ್ಟಿಸುವ ಪುಸ್ತಕ.

ತಾರೀಖ್ ಅಜೀಜ್‌ ಅವರು ಅದ್ಭುತ ಚಿತ್ರಗಳು ಈ ಪುಸ್ತಕದ ಜಗತ್ತನ್ನು ಕಟ್ಟಿಕೊಟ್ಟಿವೆ. ಆದರೆ ಈ ಅದ್ಭುತ ಚಿತ್ರಗಳು ಮಕ್ಕಳನ್ನು ರಂಚಿಸುತ್ತವೆ ಎಂದು ಹೇಳುವುದೂ ತಪ್ಪೇನೋ ಎಂಬ ಭಾವವನ್ನು ಇದರ ಕಥೆ ಹುಟ್ಟಿಸುತ್ತದೆ.ಹನ್ನೆರಡು ವರ್ಷದ ಬಾಲಕಿ ಜಮ್ಲೊ ಮುಕ್ದಂ, ಲಾಕ್‌ಡೌನ್‌ ಕಾರಣದಿಂದ ಇನ್ನೂರು ಕಿಲೋಮೀಟರ್ ದೂರದ ತನ್ನೂರಿಗೆ ನಡೆಯುತ್ತ ಹೋಗಿ, ಊರಿಗೆ ತಲುಪಲು ಇನ್ನೊಂದು ಐವತ್ತು–ಅರವತ್ತು ಕಿಲೋಮೀಟರ್ ಇರುವಾಗ ಕುಸಿದು ಬೀಳುತ್ತಾಳೆ.ಪುಟವಿಡೀ ಹರಡಿಕೊಂಡಿರುವ ಚಿತ್ರ, ನಡುವೆ ಆ ಚಿತ್ರದ ಭಾಗಗಳಂತೆಯೇ ಅಚ್ಚಾಗಿರುವ ಅಕ್ಷರಗಳು ಈ ಪುಸ್ತಕಕ್ಕೆ ನೋಡಿಸಿಕೊಂಡು ಹೋಗುವ ಗುಣವನ್ನು ನೀಡಿವೆ. ಆದರೆ ಅನುವಾದದ ಪ್ರಕ್ರಿಯೆಯಲ್ಲಿ ಇನ್ನಷ್ಟು ಶ್ರಮವಹಿಸಿ, ಕನ್ನಡದ ಜಾಯಮಾನಕ್ಕೆ ಒಗ್ಗಿಸಿದ್ದರೆ, ಕನ್ನಡದ ಪುಟಾಣಿಗಳಿಗೆ ಇನ್ನಷ್ಟು ಹತ್ತಿರವಾಗಬಹುದಿತ್ತು.

ADVERTISEMENT

ಕೃತಿ: ಜಮ್ಲೊ ಹೆಜ್ಜೆ ಹಾಕುತ್ತಾಳೆ

ಲೇ: ಸಮೀನಾ ಮಿಶ್ರಾ ಕನ್ನಡಕ್ಕೆ: ಬೇದ್ರೆ ಮಂಜುನಾಥ

ಚಿತ್ರಗಳು: ತಾರೀಖ್‌ ಅಜೀಜ್

ಪು: 36 ಬೆ: ₹ 90

ಪ್ರ: ನವಕರ್ನಾಟಕ ಪ್ರಕಾಶನ

ಸಂ: 080 22161900

ವೆಬ್:www.navakarnatakaonline.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.