
ಕಬ್ಬಿಣದ ಕುದುರೆಗಳು
ಹನೂರು ಚನ್ನಪ್ಪ, ತಮ್ಮ ಸೀಮೆಯ ದೇಸಿತನವನ್ನು ‘ಕಬ್ಬಿಣದ ಕುದುರೆಗಳು’ ಕಾದಂಬರಿಯಲ್ಲಿ ದುಡಿಸಿಕೊಂಡಿದ್ದಾರೆ. ವಿಸ್ತಾರ ಕಥಾ ಹಂದರದಲ್ಲಿ ವರ್ಗ–ವರ್ಣ ವ್ಯವಸ್ಥೆಗಳ ಭಿನ್ನ ಸ್ವರೂಪದ ತರತಮ ನೀತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಆಹಾರದ ಆಯ್ಕೆಯ ಸ್ವಾತಂತ್ರ್ಯವನ್ನು ಸಮರ್ಥನೀಯವಾಗಿ ನಿಭಾಯಿಸಿದ್ದಾರೆ. ಆ ಮೂಲಕ ಆಹಾರ ಸಂಸ್ಕೃತಿ ಅನನ್ಯತೆಯನ್ನು ಚಿತ್ರಿಸಿದ್ದಾರೆ. ಗ್ರಾಮ ಸಮಾಜದ ಬಾಂಧವ್ಯದ ಬದುಕಿನ ಬೆಸುಗೆ ಇಲ್ಲಿ ಬಿಗಿಗೊಂಡಿರುವುದನ್ನು ಕಾಣಬಹುದು. ಮಾದೇಶ ಮತ್ತು ಮಾಲಿಂಗನಲ್ಲಿ ಶಿಕ್ಷಣ ಮೂಡಿಸಿದ ಪರಿವರ್ತನೆ ಮತ್ತು ಅವರ ವೈಚಾರಿಕ ಪ್ರಜ್ಞೆ ಕೂಡ ಸಮಾಜದ ಸಂಚಲನವನ್ನು ತೋರಿಸುತ್ತದೆ.
ಗ್ರಾಮ ದೇವತೆ ಮಾರಮ್ಮನ ಅವತಾರಗಳು ಕೂಡ ಸಾರವತ್ತಾಗಿ ಬಂದಿವೆ. ಊರ ಹೊರಗಿನ ದೇವಿಯ ಆರಾಧನೆ ಮತ್ತು ಪೂಜಾರಿ ಮೇಲೆ ದೇವಿ ಮೈದುಂಬುವ ಸನ್ನಿವೇಶ ಸೊಗಸಾಗಿದೆ. ಊಟೋಪಚಾರದಲ್ಲಿ ದೊಡ್ಕೇರಿ ಮತ್ತು ಚಿಕ್ಕೇರಿ ಜನರ ನಡುವೆ ಅಂತರ ಇದ್ದೇ ಇತ್ತು. ಆದರೆ ದೇವಿ ಸೇವೆಯನ್ನು ಇಬ್ಬರೂ ಸೇರಿಯೇ ಮಾಡಬೇಕು. ಈ ಸನ್ನಿವೇಶದಲ್ಲಿ; ‘ಹೆಂಡಬಾಡಿನ ವಿಚಾರದಲಿ ದೊಡ್ಡಕೇರಿನ ನಂಬಕಾಗಲ್ಲ, ಅಂತನೂ ಅವುರನ್ನ ನಾಮಲ್ಲ, ದೇವ್ರೆ ಬಂದ್ರೂ ಸಮಾದಾನ ಮಾಡಕ್ಕಾಗಲ್ಲ ಎಂತಲೂ ಅವರು ನಾಕು ವರ್ಷದ ಹಿಂದ ಕೋಣನ ಕೂದು ಪಂತಿಸೇವ ಮಾಡುತೀನಿ ಅಂತ ಹೋದವರು ಒಬ್ಬರಿಗೊಬ್ಬರು ಹೊಡದಾಡುಕೊಂಡು ಜೈಲಿನ ಕೋಣ ಸೇರ್ಕಂದು ಮೊನ್ನ ತಾನಾ ಈಚುಗ ಬಂದರಾ’ ಸಮಾಜದ ವಾಸ್ತವವನ್ನು ಹೀಗೆ ಕಲಾತ್ಮಕವಾಗಿ ಚಿತ್ರಿಸುತ್ತಾರೆ. ಮರಿ ಕಡಿಯುವ ಮುನ್ನ ಪೂಜಿಸಿ ಮುಡಿಸಿದ ಹೂವನ್ನು ಮರಿಗಳು ಪರಸ್ಪರ ಮೇಯುವ ಸನ್ನಿವೇಶ ಕ್ಷಣ ಮೌನಕ್ಕೆ ಜಾರಿಸುತ್ತದೆ.
ಚಾಮರಾಜನಗರ ಜಿಲ್ಲೆಯ ಜನಪದ ಧಾಟಿಯ ಭಾಷೆ ಆಕರ್ಷಣೀಯವಾಗಿ ನಿರೂಪಿತವಾಗಿದೆ. ಕಾದಂಬರಿಯ ಕಥನ ಶೈಲಿ ಕಾವ್ಯತ್ಮಕಗೊಂಡಿದ್ದು ಓದು ಮಾತ್ರವಲ್ಲದೆ ಹಾಡುವ ಗುಣವನ್ನೂ ಹೊಂದಿದೆ. ಸಮಾಜಮುಖಿ ಕಾಳಜಿಯ ತುಡಿತ ತನ್ನ ಜವಾಬ್ದಾರಿಯನ್ನು ಪೂರೈಸಿದೆ ಎನ್ನುವಂತೆ ಬಿಂಬಿತವಾಗಿದೆ. ಇಲ್ಲಿನ ಕಥಾ ಹಂದರಕ್ಕೆ ಪಾತ್ರಗಳೇ ಆಸರೆಯ ಕಂಭಗಳು.
ಕಬ್ಬಿಣದ ಕುದುರೆಗಳು
ಲೇ: ಹನೂರು ಚನ್ನಪ್ಪ
ಪ್ರ: ಜೋಳಿಗೆ
ಸಂ: 9845993527
ಪು:264 ₹: 325
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.