ಹೆಸರಿನಲ್ಲಷ್ಟೇ ‘ಕಲ್ಯಾಣ’ ಹೊತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶವು (ಹೈದರಾಬಾದ್ ಕರ್ನಾಟಕ) ಪ್ರಾದೇಶಿಕ ಅಸಮಾನತೆ ಕಾರಣಕ್ಕಾಗಿ ಅಭಿವೃದ್ಧಿಯಿಂದ ಹಿಂದುಳಿದಿದೆ. ಈ ಭಾಗದಲ್ಲಿ ಅಭಿವೃದ್ಧಿಗಿರುವ ತೊಡಕು, ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ‘ಕಲ್ಯಾಣ ಕರ್ನಾಟಕದ ಅರಣ್ಯರೋದನ’ ಕೃತಿ ಸಮರ್ಥವಾಗಿ ನಿರೂಪಿಸುತ್ತದೆ.
ವೃತ್ತಿಯಲ್ಲಿ ಪತ್ರಕರ್ತರಾಗಿರುವ ಲೇಖಕ ತಾವು ಕಣ್ಣಾರೆ ಕಂಡ ಕಲ್ಯಾಣ ಕರ್ನಾಟಕದ ದುಃಸ್ಥಿತಿಯನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಡಿ.ಎಂ. ನಂಜುಂಡಪ್ಪ ವರದಿಯ ಶಿಫಾರಸು ಸೂಚಿಸಿರುವ ಈ ಭಾಗದ ಬಹುತೇಕ ತಾಲ್ಲೂಕುಗಳಲ್ಲಿ ಅಭಿವೃದ್ಧಿಯ ಗಂಧಗಾಳಿ ಇನ್ನೂ ಸೋಕಿಲ್ಲ. ಜನಪ್ರತಿನಿಧಿಗಳು, ಆಡಳಿತ ಶಾಹಿಯ ನಿರ್ಲಕ್ಷ್ಯದಿಂದಾಗಿ ಹಿಂದುಳಿದ ಎಂಬ ಹಣೆಪಟ್ಟಿ ಈ ಭಾಗದಿಂದ ಇನ್ನೂ ಕಳಚಿಲ್ಲ. 371 (ಜೆ) ಸೌಲಭ್ಯ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗಳಿದ್ದರೂ ವಾಸ್ತವದಲ್ಲಿ ಈ ಭಾಗದಲ್ಲೇಕೆ ಮೂಲಸೌಕರ್ಯಗಳ ಕೊರತೆ ನೀಗಿಲ್ಲ? ಬಡತನ, ಸಾಕ್ಷರತೆ, ಮಾನವ ಅಭಿವೃದ್ಧಿಯಲ್ಲೇಕೆ ಹಿಂದುಳಿದೆ? ಎನ್ನುವ ಕುರಿತು ಕೃತಿ ವಿವರವಾಗಿ ಚರ್ಚಿಸುತ್ತದೆ. ಜಿಐ ಟ್ಯಾಗ್ ಹೊಂದಿರುವ ಕಮಲಾಪುರದ ಕೆಂಪು ಬಾಳೆ, ಕಲಬುರಗಿಯ ತೊಗರಿ, ಕಿನ್ನಾಳದ ಗೊಂಬೆ, ಬೀದರ್‌ನ ಬಿದ್ರಿ ಕಲೆಗಳಿಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲಾಗದ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಉದ್ಯೋಗಾವಕಾಶಗಳ ಕೊರತೆಯಿಂದ ಇಂದಿಗೂ ಈ ಭಾಗದಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲಾಗದ ವಾಸ್ತವ ಸ್ಥಿತಿಗೆ ಕೈಗನ್ನಡಿಯಂತಿದೆ ಈ ಕೃತಿ. ನಿಜಾಮರ ಆಳ್ವಿಕೆ ಕೊನೆಗೊಂಡರೂ ಈ ಭಾಗ ಇನ್ನೂ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿಲ್ಲ ಎಂಬ ಕಲ್ಯಾಣ ಕರ್ನಾಟಕದ ಜನತೆಯ ಕೂಗು ಅಕ್ಷರಶಃ ಅರಣ್ಯರೋದನವಾಗಿದೆ ಎಂಬುದನ್ನು ಕೃತಿ ಮನಗಾಣಿಸುತ್ತದೆ.
ಕಲ್ಯಾಣ ಕರ್ನಾಟಕದ ಅರಣ್ಯರೋದನ
ಲೇ: ಶ್ರೀನಿವಾಸ ಸಿರನೂರಕರ್
ಪ್ರ: ಶ್ರೀವಿಜಯ ಪ್ರಕಾಶನ
ಸಂ: 9972450853
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.