ಈ ಕಥಾಸಂಕಲನದಲ್ಲಿರುವ ಕಥೆಗಳಲ್ಲಿ ಬರುವ ಪಾತ್ರಗಳೆಲ್ಲವೂ ದೇಶ, ಭಾಷೆ ಹಾಗೂ ವಯಸ್ಸಿನ ಗಡಿಯನ್ನು ಮೀರಿ ಓದುಗನೊಳಗೆ ಇಳಿಯುತ್ತವೆ. ಬೇಜವಾಬ್ದಾರಿ ಗಂಡನನ್ನು ಕಟ್ಟಿಕೊಂಡು ಊರಿಂದ ಊರು ಬಿಟ್ಟು ಮುಂಬೈ ಮಹಾನಗರದಂಥ ಊರಿನಲ್ಲಿ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ ಲಲಿತಾಂಬೆ ಒಂದೆಡೆಯಾದರೆ, ಮದುವೆಯೆಂಬುದಕ್ಕೆ ಮನಸ್ಸು ಒಪ್ಪಬೇಕು ಎನ್ನುತ್ತಲೇ 33 ಆದರೂ ಮದುವೆಯಾಗದ ಆಧುನಿಕ ಹೆಣ್ಣುಮಕ್ಕಳ ಕಥನವಿದೆ. ಮದುವೆಯೆಂಬುದು ಮನಸ್ಸಿಗೆ ಹಿಡಿಸಬೇಕಾದ ಅಪ್ಪಟ ಸಂಗತಿ ಎಂಬುದನ್ನು ಬಲವಾಗಿ ನಂಬಿರುವ ಹೆಣ್ಣುಮಕ್ಕಳ ಭಿತ್ತಿಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಭೂತ ಹಾಗೂ ವರ್ತಮಾನಗಳ ತಿಕ್ಕಾಟವನ್ನು ಕಟ್ಟಿಕೊಡುತ್ತಲೇ ಕತೆಗಾರ್ತಿ ಮಿತ್ರಾ ಹೆಣ್ಣುಮಕ್ಕಳ ಮನೋಲೋಕವನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ.
ಮುಂಬೈ, ಪ್ಯಾರಿಸ್ ಚಿತ್ರಣಗಳಿದ್ದರೂ, ಅಲ್ಲಲ್ಲಿ ಬರುವ ಕುಂದಗನ್ನಡದ ಸೊಗಡು ಪಾತ್ರವನ್ನು ಮತ್ತಷ್ಟೂ ಆಪ್ತವಾಗಿಸುತ್ತದೆ. ಊರಿಂದ ಊರು ಬಿಟ್ಟು ಬೇರೆ ನಗರದಲ್ಲಿ ಬದುಕು ಕಟ್ಟಿಕೊಂಡಿದ್ದರೂ ಅಗತ್ಯಕ್ಕೆ ತಕ್ಕಂತೆ ಪಾತ್ರ ಆಡುವ ಮಾತುಗಳೆಲ್ಲವೂ ಕುಂದಗನ್ನಡದಲ್ಲಿವೆ. ಅದು ಬಹಳ ಸಹಜವೆಂಬಂತೆ. ಗಂಡನ ನೆರಳಿನಂತೆ ಬದುಕಿದರೂ ಇಲ್ಲಿ ಬರುವ ಹಲವು ಹೆಣ್ಣುಪಾತ್ರಗಳಿಗೆ ತನ್ನದೇ ಆದ ಗಟ್ಟಿತನವಿದೆ. ನೆರಳಿನಂತೆ ಕಂಡರೂ ಅದು ನೆರಳಲ್ಲ ಅನಿಸುವುದು ಕೂಡ ಕತೆಗಾರ್ತಿಯ ಸೂಕ್ಷ್ಮ ಬರಹಕ್ಕಿರುವ ತಾಕತ್ತು. ಪ್ರತಿ ಕಥೆಯೂ ವಿಭಿನ್ನ ಹಾಗೂ ವಿಶಿಷ್ಟ ಎಳೆಯಿಂದ ನೇಯ್ದಿರುವುದರಿಂದ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಉತ್ಕಟ ಪ್ರೀತಿಯ ಕನಸು ಇಟ್ಟುಕೊಂಡ ಅರ್ಧ ವಿನೋದ, ಅರ್ಧ ವಿಷಾದದಲ್ಲಿರುವ ಪ್ರಮೋದಿನಿ, ಬಾಹ್ಯ ಜಗತ್ತಿನಿಂದ ಸಂಪೂರ್ಣ ವಿಮುಖಳಾಗಿ ಆಂತರ್ಯದಲ್ಲಿ ಗೊಂಬೆಗಳೊಂದಿಗೆ ಹೊಸ ಪ್ರಪಂಚ ಕಟ್ಟಕೊಂಡ ಪೆರಿನಾಝ್ ವಾಡಿಯಾ ಹೀಗೆ ಬೇರೆ ಬೇರೆ ಭಿತ್ತಿಯಲ್ಲಿ ಅಭಿವ್ಯಕ್ತಿಗೊಂಡ ಹಲವು ಪಾತ್ರಗಳು ಮನಸ್ಸನ್ನು ಕಲಕುತ್ತವೆ.
ನನ್ನಕ್ಕ ನಿಲೂಫರ್
ಲೇ: ಮಿತ್ರಾ ವೆಂಕಟ್ರಾಜ
ಪ್ರ: ಅಂಕಿತ
ಸಂ: 080 2661 7100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.