
ಭವಿಷ್ಯದ ತಂತ್ರಜ್ಞಾನ ಎಂದೇ ಬಿಂಬಿತಗೊಂಡಿರುವ ಕೃತಕ ಬುದ್ಧಿಮತ್ತೆಯು ದಿನದಿಂದ ದಿನಕ್ಕೆ ವಿಕಸನಗೊಳ್ಳುತ್ತಲೇ ಸಾಗುತ್ತಿದೆ. ಈ ತಂತ್ರಜ್ಞಾನದಿಂದ ಹಲವರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದೂ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬ ಮಾತುಗಳೂ ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಈ ಬೆಳವಣಿಗೆಗಳ ಕುರಿತಂತೆ ‘ಪ್ರಜಾವಾಣಿ’ ದಿನಪತ್ರಿಕೆ ಹಾಗೂ ‘ಸುಧಾ’ ವಾರಪತ್ರಿಕೆಯಲ್ಲಿ ಬಹಳಷ್ಟು ಲೇಖನಗಳು ಪ್ರಕಟಗೊಳ್ಳುತ್ತಿವೆ. ಕೃತಕ ಬುದ್ಧಿಮತ್ತೆ ಕುರಿತು ತಾವು ಬರೆದ ಲೇಖನಗಳನ್ನು ಲೇಖಕ ಗುರುರಾಜ್ ಎಸ್. ದಾವಣಗೆರೆ ಅವರು ಕೃತಿ ರೂಪದಲ್ಲಿ ಪ್ರಕಟಿಸಿದ್ದಾರೆ.
‘ಕೃತಕ ಬುದ್ಧಿಮತ್ತೆ– ಮನುಕುಲದ ಅಳಿವಿಗೆ ಮುನ್ನುಡಿಯೇ?’ ಎಂಬ ಶೀರ್ಷಿಕೆಯುಳ್ಳ ಈ ಕೃತಿಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್– ಎಐ) ಅಂದರೇನು?, ಡೇಟಾ ಮತ್ತು ಆಲ್ಗೋರಿದಂ ಎಂಬ ಕೃತಕ ಬುದ್ಧಿಮತ್ತೆಯ ಉಸಿರು ಹೇಗೆ ಕಾರ್ಯ ನಿರ್ವಹಿಸುತ್ತದೆ? ಮಾನವ – ವನ್ಯಜೀವಿ ಸಂಘರ್ಷಕ್ಕೆ ಕೃತಕ ಬುದ್ಧಿಮತ್ತೆ ಹೇಗೆ ಪರಿಹಾರವಾಗಬಲ್ಲದು? ಕೃತಕ ಬುದ್ಧಿಮತ್ತೆ ಕುರಿತ ಪೂರ್ವಗ್ರಹದಿಂದ ಪಾರಾಗುವುದು ಹೇಗೆ? ಎಐ ತಂತ್ರಜ್ಞಾನವು ಚುನಾವಣೆಯಲ್ಲಿ ಹೇಗೆ ನೆರವಾಗಬಲ್ಲದು? ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಹೇಗೆ ಬಳಕೆಯಾಗಬಲ್ಲದು ಎಂಬ ವಿಷಯಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.
70 ವರ್ಷಗಳ ಹಿಂದೆಯೇ ಆವಿಷ್ಕಾರಗೊಂಡ ಕೃತಕ ಬುದ್ಧಿಮತ್ತೆ ಎಂಬ ತಂತ್ರಜ್ಞಾನ ಈಗ ಚಾಟ್‌ಬಾಟ್‌ಗಳಾಗಿ, ನಮ್ಮ ಮನೆ, ಅಡುಗೆ ಮನೆ, ಕಚೇರಿ, ಮೊಬೈಲ್, ಲ್ಯಾಪ್‌ಟಾಪ್, ರೆಫ್ರಿಜರೇಟರ್, ಟಿವಿ, ವಾಷಿಂಗ್ ಮಷಿನ್ ಒಳಗೊಂಡು ಎಲ್ಲೆಡೆ ಹೇಗೆ ವ್ಯಾಪಿಸಿದೆ. ಅದರ ಮೂಲಕ ಬದುಕು ಹೇಗೆ ಸುಂದರ ಹಾಗೂ ಸರಳವಾಗಿದೆ ಎಂಬುದನ್ನು ದೃಷ್ಟಾಂತಗಳು, ಉದಾಹರಣೆಗಳೊಂದಿಗೆ ಲೇಖಕರು ವಿಷಯವನ್ನು ಪ್ರಸ್ತುತಪಡಿಸಿದ್ದಾರೆ.
ಕಾರು ಚಾಲನೆಯಿಂದ ಹಿಡಿದು ಶಿಕ್ಷಣ, ಸಂಶೋಧನೆ, ವೈದ್ಯಕೀಯ, ಮನರಂಜನೆ, ಬ್ಯಾಂಕಿಂಗ್ ಕ್ಷೇತ್ರಗಳವರೆಗೂ, ಆಪ್ತ ಸಮಾಲೋಚನೆಯಿಂದ ಹಿಡಿದು ಲೈಂಗಿಕ ಪ್ರಚೋದನೆಯವರೆಗೂ ಕೃತಕ ಬುದ್ಧಿಮತ್ತೆ ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟಿರುವುದು ಹಾಗೂ ಅದರ ಮೂಲಕ ಹಳೆಯ ಎಲ್ಲಾ ಕೆಲಸಗಳೂ ಮರೆಯಾಗಿ ಹೊಸ ಬೇಡಿಕೆ ಸೃಷ್ಟಿಯಾಗಿರುವುದನ್ನೂ ಲೇಖಕರು ಕೃತಿಯಲ್ಲಿರುವ ವಿವಿಧ ವಿಷಯಗಳ ಕುರಿತ ಲೇಖನಗಳಲ್ಲಿ ವಿವರಿಸಿದ್ದಾರೆ.
ಕೃತಕ ಬುದ್ದಿಮತ್ತೆ– ಮನುಕುಲದ ಅಳಿವಿಗೆ ಮುನ್ನುಡಿಯೇ?
ಲೇ: ಗುರುರಾಜ್ ಎಸ್. ದಾವಣಗೆರೆ
ಪ್ರ: ವಸಂತ ಪ್ರಕಾಶನ
ಪು: 128
ಬೆ: ₹140
ಫೋನ್: 7892106719
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.