ADVERTISEMENT

ಮೊದಲ ಓದು: ಕಾಯ ಬಿಟ್ಟು ಮಾಯ ಸೇರಿದ ದೈವಗಳ ಕಥೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 1:30 IST
Last Updated 29 ಜೂನ್ 2025, 1:30 IST
   

ಸತ್ಯೊಲು

  • ಲೇ: ನವೀನ್‌ ಸೂರಿಂಜೆ

  • ಪ್ರ: ಅಹರ್ನಿಶಿ

    ADVERTISEMENT
  • ಸಂ: 94491 74662

ಇಹಕ್ಕೂ ಪರಕ್ಕೂ, ಲೌಕಿಕತೆಗೂ ಅಲೌಕಿಕತೆಗೂ ಒದಗಿ ಬರುವ ‘ಕಾಯ ಬಿಟ್ಟು ಮಾಯ ಸೇರಿದ‘ ಹಲವು ದೈವಗಳ ಮೂಲ ಐತಿಹ್ಯವನ್ನು ಕಟ್ಟಿಕೊಟ್ಟಿದ್ದಾರೆ ನವೀನ್‌ ಸೂರಿಂಜೆ. ‘ಹತ್ತು ತಾಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಪೊರೆಯುವ ಶಕ್ತಿ ನಾನು’ ಎಂದು ಹೇಳುವ ದೈವದ ಮಾತು, ಜಾತಿ, ಧರ್ಮ, ಮತ, ಅವನು–ಅವಳು ಎಂಬ ಭೇದವೇ ಇಲ್ಲ ಎಂಬುದನ್ನು ಮತ್ತೆ ಮತ್ತೆ ಸಾರುತ್ತದೆ. ಅರಸರ ದೌರ್ಜನ್ಯವನ್ನು ಮೆಟ್ಟಿನಿಂತ, ಆಯಾ ಕಾಲಕ್ಕೆ ಉಂಟಾದ ಹಲವು ಶೋಷಣೆಗಳ ವಿರುದ್ಧ ಹೋರಾಟ ಮಾಡಿದ ತುಳುನಾಡಿನ ಕ್ರಾಂತಿಕಾರಿಗಳು ಕಾಲಾನಂತರದಲ್ಲಿ ಮಾಯಕ ಶಕ್ತಿಯಾಗಿ ಜನರ ನಂಬಿಕೆಯನ್ನೂ ಬದುಕನ್ನೂ ಪೊರೆಯುತ್ತಿವೆ.

ಸದಾ ಅಸ‌ಹಾಯಕರ ಪರವಾಗಿ ಇರುವಂತೆ ಕಾಣುವ ದೈವದ ನಡೆಯು ದೀನರಲ್ಲಿ ಮತ್ತೆ ಮತ್ತೆ ಆತ್ಮವಿಶ್ವಾಸವನ್ನು ಹೆಚ್ಚಿಸುವ ‘ಬೆನ್ನಿಗೆ’ ನಿಂತ ಶಕ್ತಿಯಾಗಿಯೂ ನೋಡಬಹುದು. ದೈವ ಆರಾಧನಾ ಪರಂಪರೆಯನ್ನು ವೈಭವೀಕರೀಸಲು ಹೋಗಿಲ್ಲ. ಬದಲಿಗೆ ಈ ಪರಂಪರೆ ಹುಟ್ಟಿದ ಪರಿ ಮತ್ತು ಅದು ಜನರೊಳಗೆ ಬೆರೆತ ರೀತಿಯನ್ನು ಸರಳವಾಗಿ ತಿಳಿಸಿರುವುದು ಈ ಪುಸ್ತಕದ ವಿಶೇಷತೆ.

ಶ್ರಮಿಕರ ಜನಪದ ಐತಿಹ್ಯವಷ್ಟೆ ಅಲ್ಲದೇ, ಜನಮಾನಸದಲ್ಲಿ ಆಳವಾಗಿ ಬೇರೂರಿರುವ ದೈವದೆಡೆಗಿನ ನಂಬಿಕೆಗಳನ್ನು ಒಡೆಯಲು ಶ್ರಮಪಡುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿನ ಕೋಮುಶಕ್ತಿಗಳ ಬಗ್ಗೆಯೂ ಸೂರಿಂಜೆ ವಿವರಣೆ ನೀಡಿದ್ದಾರೆ.

ನಿಗೂಢತೆಯನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ, ಅತಿ ಮಾನುಷ ಶಕ್ತಿಯ ದೈವದ ಮಾತುಗಳಲ್ಲಿ ತಾಯಿಯಂತೆ ಕುಟುಂಬವನ್ನು ನಂಬಿದವರನ್ನು ಪೊರೆಯುವ ನಡೆಯನ್ನು ಕಾಣಬಹುದು. ಕರಾವಳಿಯಲ್ಲಿ ಪ್ರಬಲವಾಗುತ್ತಿರುವ ‘ಕೋಮುಶಕ್ತಿ’ ಹತ್ತು ತಾಯಿಯ ಮಕ್ಕಳನ್ನು ಪೊರೆಯಬಲ್ಲ ‘ದೈವ‘ ಶಕ್ತಿಯ ಮುಂದೆ ಮಣಿಯಲೇಬೇಕು ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ.

ಬಹುಜನರ ಜನಪದ ಸಂಸ್ಕೃತಿಯಷ್ಟೆ ಅಲ್ಲದೇ ಬದುಕಿನ ಭಾಗವಾಗಿರುವ ಹಲವು ದೈವಗಳು, ಅವುಗಳ ಮೂಲಸ್ಥಾನ ಮತ್ತು ದರ್ಶನದ ಸಮಯದಲ್ಲಿ ದೈವವಾಡುವ ಮಾತುಗಳು, ಪಾಡ್ದನಗಳಲ್ಲಿರುವ ಮಹತ್ವದ ಸಾಲಿನ ವಿವರಣೆಯನ್ನು ನೀಡಲಾಗಿದೆ. ತುಳಿತಕ್ಕೆ ಒಳಗಾದ ಸಮದಾಯಗಳ ಆಚರಣೆಯಲ್ಲಿರುವ ಕೆಲವು ಕಟ್ಟುಪಾಡುಗಳನ್ನು ಪ್ರಶ್ನಿಸಿ, ಸಮಾನತೆಯ ಆಶಯವನ್ನು ಬಹಳ ಗಟ್ಟಿಧ್ವನಿಯಲ್ಲಿಯೇ ಪ್ರತಿಪಾದಿಸಿದ್ದಾರೆ ಸೂರಿಂಜೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.