ADVERTISEMENT

ಮೊದಲ ಓದು: ಜಿಎಸ್‌ಟಿ ಪಾಲಿನ ಸಂಘರ್ಷದ ಆಳ ಅಗಲ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 1:30 IST
Last Updated 29 ಜೂನ್ 2025, 1:30 IST
   

ಒಕ್ಕೂಟವೋ ತಿಕ್ಕಾಟವೋ

  • ಲೇ: ಬಿ. ಶ್ರೀಪಾದ ಭಟ್‌

  • ಪ್ರ: ಕ್ರಿಯಾ ಮಾಧ್ಯಮ ಬೆಂಗಳೂರು

    ADVERTISEMENT
  • ಫೋ: 9036082005

  • ಪು: 156

  • ರೂ: 170

ವಸಾಹತು ಆಡಳಿತದ ಹಿಡಿತದಿಂದ ಸ್ವಾತಂತ್ರ್ಯಗೊಂಡ ಭಾರತ, ರಾಜಕೀಯವಾಗಿ ಒಕ್ಕೂಟ ವ್ಯವಸ್ಥೆಯನ್ನು ತನ್ನದನ್ನಾಗಿಸಿತು. ಆ ಮೂಲಕ ಭಿನ್ನ ಭಾಷೆ, ವೈವಿಧ್ಯ ಸಂಸ್ಕೃತಿಗಳಲ್ಲಿ ಏಕತೆಯ ಸ್ವರೂಪವನ್ನು ಸಾಧಿಸಿತು. ಅದಕ್ಕಾಗಿ ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡು ಭೌತಿಕ ಮತ್ತು ಭಾವನಾತ್ಮಕ ಸ್ಪಷ್ಟ ಭಾಷ್ಯವನ್ನೂ ಬರೆಯಿತು. ಭಾರತ ದೇಶ ಒಕ್ಕೂಟದ ರೂಪುಗೊಳ್ಳುವ ಚಾರಿತ್ರಿಕ ಸಂದರ್ಭ, ಈಗ ಅಲ್ಲಿ ಕೇಳುತ್ತಿರುವ ಸಂಘರ್ಷದ ಧ್ವನಿಯ ಆಳ ಅಗಲವನ್ನು ಲೇಖಕ ಬಿ. ಶ್ರೀಪಾದ ಭಟ್‌ ಇಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. 

ಭಾರತದ ಒಕ್ಕೂಟ ವ್ಯವಸ್ಥೆ ಎನ್ನುವುದು ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕದಂತೆ ಅಲ್ಲ. ಕೇಂದ್ರದ ಆಡಳಿತಕ್ಕೆ ಒಳಪಡುವ ಭಾಷಾವಾರು ರಾಜ್ಯ ವ್ಯವಸ್ಥೆಯನ್ನು ಸಂವಿಧಾನ ಅಂಗೀಕರಿಸಿದೆ. ರಾಜ್ಯ ಕೇಂದ್ರಗಳ ನಡುವೆ ಅಧಿಕಾರ ಹಂಚಿಕೆ ಮತ್ತು ಕಾನೂನಾತ್ಮಕ ಪರಿಹಾರಗಳನ್ನು ಅದು ಸ್ಪಷ್ಟವಾಗಿ ಗುರುತಿಸಿದೆ. ಆದರೂ ಅಂತಿಮವಾಗಿ ರಾಜ್ಯದ ಮೇಲೆ ನಿಯಂತ್ರಣದ ಅಧಿಕಾರವನ್ನು ಕೇಂದ್ರಕ್ಕೆ ಸಂವಿಧಾನ ನೀಡಿದೆ. ತೆರಿಗೆ ಸುಧಾರಣೆಯಲ್ಲಿ ಜಿಎಸ್‌ಟಿ ಜಾರಿಗೊಳಿಸಿದ ನಂತರ ದಕ್ಷಿಣದ ರಾಷ್ಟ್ರಗಳಲ್ಲಿ ಅದರಲ್ಲೂ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎನ್ನುವ ಕೂಗು ದೊಡ್ಡದಾಗಿ ಕೇಳಿಬಂದಿದೆ. ಆ ಧ್ವನಿಗೆ ತಾರ್ಕಿಕ ವಿವರಣೆಯನ್ನು ಈ ಕೃತಿಯಲ್ಲಿ ಲೇಖಕ ನೀಡಿದ್ದಾರೆ. 

ಸಮಕಾಲೀನ ರಾಜಕೀಯ ಮತ್ತು ಆರ್ಥಿಕ ವಿವರವನ್ನು ವಿಶ್ಲೇಷಣಾತ್ಮಕ ದೃಷ್ಟಿಯಲ್ಲಿ ನೋಡಿದ್ದಾರೆ. ಎರಡು ಭಾಗದಲ್ಲಿ 16 ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಮೊದಲ ಭಾಗ ‘ರಾಜಕೀಯ ಒಕ್ಕೂಟ’ದಲ್ಲಿ ‘ಪ್ರಜಾಪ್ರಭುತ್ವ ಮತ್ತು ಸಂವಿಧಾನ: ಮುಂದಣ ದಾರಿ ಯಾವುದು?’, ‘ಮೋದಿ 1.0 ಮತ್ತು 2.0 ಸರ್ಕಾರಗಳ ರಾಷ್ಟ್ರೀಯ ಒಕ್ಕೂಟ ವ್ಯವಸ್ಥೆ: ನಿರಂಕುಶ ಪ್ರಭುತ್ವ’, ‘ಇಡಿ ಮತ್ತು ಪಿಎಂಎಲ್‌ಎ– ಪಂಜರದ ಗಿಣಿ ಮತ್ತು ಕರಾಳ ಕಾಯ್ದೆ’ ಸೇರಿ ಎಂಟು ಲೇಖನಗಳನ್ನು ಒಳಗೊಂಡಿದೆ. 

ಆರ್ಥಿಕ, ರಾಜಕೀಯ ವಿಷಯ ಮಾತ್ರವಲ್ಲದೆ ಭಾಷೆ ಮತ್ತು ಶಿಕ್ಷಣ ವ್ಯವಸ್ಥೆಯ ಭಿನ್ನ ಸ್ವರದ ಆಳ ಅಗಲವನ್ನು ಲೇಖಕ ತಮ್ಮ ಅರಿವಿನ ವಿಸ್ತಾರದಲ್ಲಿ ಸೆರೆ ಹಿಡಿಯುವ ಪ್ರಯತ್ನವನ್ನು ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.