ADVERTISEMENT

ಒಳನೋಟ: ಹಳ್ಳಿ ಬದುಕಿನ ಅನುಭವ ಕಥನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 19:30 IST
Last Updated 4 ಮಾರ್ಚ್ 2023, 19:30 IST
ದೇವರ ಹೊಲ ಕೃತಿ
ದೇವರ ಹೊಲ ಕೃತಿ   

ಹಳ್ಳಿಗಾಡಿನ ಬದುಕು, ಭಾಷೆ, ಸಂಸ್ಕೃತಿ, ಅನುಭವ ಮತ್ತು ಸಣ್ಣತನಗಳನ್ನು ಯಾವುದೇ ಏರಿಳಿತಗಳಿಲ್ಲದೆ ತಣ್ಣನೆಯ ಸಂಜೆ ಗಾಳಿಯಂತೆ ಕಥೆಯಲ್ಲಿ ತುಂಬುತ್ತ ಹೋಗಿರುವುದರಲ್ಲೇ ಕಥೆಗಾರ ಮಂಜಯ್ಯ ದೇವರಮನಿ ಅವರ ಕಥನಗಾರಿಕೆ ಅಡಗಿದೆ. ‘ದೇವರ ಹೊಲ’ ಮಂಜಯ್ಯ ಅವರ ಎರಡನೇ ಕಥಾಸಂಕಲನ. ಈಗಾಗಲೇ ಅವರು, ‘ಕರಿಜಾಲಿ ಮರ’ ಕಥಾಸಂಕಲನದ ಮೂಲಕ ಓದುಗರ ಗಮನಸೆಳೆದಿದ್ದಾರೆ. ಈ ಎರಡನೇ ಕಥಾಸಂಕಲನದ ಮೂಲಕ ಮತ್ತೊಮ್ಮೆ ತಮ್ಮ ಹಳ್ಳಿಯ ನೆನಪುಗಳನ್ನು ದಾಖಲಿಸುವ ಉಮೇದನ್ನು ಪ್ರದರ್ಶಿಸಿದ್ದಾರೆ.

ಮುಂಜಾನೆಯ ಮುದ್ದಿನ ಬಿಸಿಲು, ಮಧ್ಯಾಹ್ನದ ರಣಬಿಸಿಲು, ಮಬ್ಬುಸಂಜೆಯ ಸೊಗಸುಗಾರಿಕೆಯನ್ನು ಹಳ್ಳಿಗಾಡಿನ ಕಥೆಗಳಲ್ಲಿ ಮಾತ್ರ ಕಾಣಲು ಸಾಧ್ಯ. ಹಾಗೇ ಇಲ್ಲಿನ ಅನೇಕ ಕಥೆಗಳಲ್ಲಿ ಪಾತ್ರಗಳು, ಸಂದರ್ಭಗಳು, ಸನ್ನಿವೇಶಗಳ ಮೂಲಕ ವಾತಾವರಣದ ಸೊಬಗನ್ನೂ ಓದುಗರಿಗೆ ಪರಿಚಯಿಸಲು ಕಥೆಗಾರ ಮಂಜಯ್ಯ ಪ್ರಯತ್ನಿಸಿದ್ದಾರೆ.

ಹಳ್ಳಿಗಾಡಿನಲ್ಲಿಯೂ ಕಣ್ಮರೆಯಾಗುತ್ತಿರುವ ಕೆಲವು ಅಪರೂಪದ ಹಬ್ಬಗಳು, ಪದ್ಧತಿಗಳು, ಖಾದ್ಯಗಳು, ಗ್ರಾಮೀಣ ಪಂದ್ಯಾವಳಿಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಅಂತಹ ಅನುಭವಗಳಿಗೆ ಒಡ್ಡಿಕೊಂಡಿರುವ ಓದುಗರು ತಮ್ಮ ನೆನಪುಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದುಕೊಂಡು ಸಂಭ್ರಮಿಸಬಹುದು.

ADVERTISEMENT

ಎಲ್ಲರ ಕಣ್ಣಿಗೂ ಗೋಚರವಾಗದ ಅತಿಸೂಕ್ಷ್ಮ ಎಳೆಯೊಂದನ್ನು ಹಿಡಿದು ಕಥೆ ಕಟ್ಟುವ ಈ ಕಥೆಗಾರ, ಸಣ್ಣ ಸಣ್ಣ ಸಂಗತಿಗಳಿಗೂ, ಚಿಕ್ಕಪುಟ್ಟ ಪಾತ್ರಗಳಿಗೂ ಸಮಾನ ಪ್ರಾಶಸ್ತ್ಯ ಕೊಡುತ್ತಾರೆ. ನಮ್ಮ ನಡುವೆಯೇ ನಡೆಯುವ, ಆದರೆ ನಮ್ಮ ಗಮನ ಸೆಳೆಯದ ವಸ್ತುಗಳನ್ನು ಹಿಡಿದು ಕಥೆ ಹೆಣೆಯುವುದು ಅವರ ಕಥಾಶೈಲಿಯ ವೈಶಿಷ್ಟ್ಯ.

ತಾವು ಕಂಡುಂಡ, ತಾವು ಅನುಭವಿಸಿದ ಸಂಗತಿಗಳನ್ನೇ ಅವರು ಕಥೆಯ ಒಡಲಿಗೆ ಹಾಕುವುದರಿಂದ ಕೆಲವು ಕಥೆಗಳು ಆತ್ಮಕಥೆಯ ತುಣುಕುಗಳಂತೆಯೂ, ಕೆಲವು ಕಥೆಗಳು ಅನುಭವ ಕಥನಗಳಂತೆಯೂ ಭಾಸವಾಗುತ್ತವೆ. ಇಲ್ಲಿನ ಒಂದೊಂದು ಕಥೆಯನ್ನು ಓದಿದಾಗಲೂ ಎತ್ತು, ಹೊಲ, ತೊರೆ, ಕೆರೆಗಳೆಲ್ಲಾ ಓದುಗರ ಮನೋಭೂಮಿಕೆಯಲ್ಲಿ ಅಚ್ಚು ಒತ್ತುತ್ತ ಹೋಗುತ್ತವೆ.

ಹಳ್ಳಿಗಳ ಜನಜೀವನದ ಭಾಗವಾಗಿರುವ ಕ್ಷುಲ್ಲಕ ಜಗಳ–ಸಂಘರ್ಷ–ಸಣ್ಣತನ–ಕ್ರೌರ್ಯದ ಜೊತೆಜೊತೆಗೇ ಮಾನವೀಯತೆ, ಮುಗ್ಧತೆ, ಉದಾರ ಮನೋಭಾವವನ್ನೂ ಅವರು ಇಲ್ಲಿ ದಾಖಲಿಸಿದ್ದಾರೆ. ಬಹುತೇಕ ಕಥೆಗಳಲ್ಲಿ ಹಳ್ಳಿಯ ರಾಜಕಾರಣದ ವಿವಿಧ ಮಜಲುಗಳನ್ನು, ಪೇಟೆಯನ್ನು ಮೀರಿಸುವಂತೆ ಬೆಳೆದು ನಿಂತಿರುವ ಹಳ್ಳಿಗಳಲ್ಲಿ ಆಗಾಗ ಹೊತ್ತಿಕೊಳ್ಳುವ ಮಾನವೀಯತೆಯ ಬೆಳಕಿನ ಕಿರಣಗಳನ್ನು ತಕ್ಕಡಿಯಲ್ಲಿಟ್ಟು ಓದುಗರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.

ಕೃತಿ: ದೇವರ ಹೊಲ (ಕಥಾಸಂಕಲನ)
ಲೇ: ಮಂಜಯ್ಯ ದೇವರಮನಿ
ಪ್ರ: ಸಾಹಿತ್ಯ ಪ್ರಕಾಶನ, ರಾಣಿಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.