ADVERTISEMENT

ಅವಲೋಕನ: ಆಧುನಿಕಪೂರ್ವ ಸಾಂಸ್ಕೃತಿಕ ಇತಿಹಾಸ

ಬಿ.ಎ. ವಿವೇಕ ರೈ 
Published 18 ಮಾರ್ಚ್ 2023, 19:30 IST
Last Updated 18 ಮಾರ್ಚ್ 2023, 19:30 IST
ಕನ್ನಡ ಕೈಫಿಯತ್ತುಗಳು
ಕನ್ನಡ ಕೈಫಿಯತ್ತುಗಳು   

ಕೈಫಿಯತ್ತುಗಳ ಸಂಗ್ರಹಗಳು ಮತ್ತು ಕೆಲವು ಅಧ್ಯಯನಗಳು ನಡೆದ ಹಿನ್ನೆಲೆಯಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರ ‘ಕನ್ನಡ ಕೈಫಿಯತ್ತುಗಳು’ ಕೃತಿಯು ಅವುಗಳ ಮಹತ್ವ ಮತ್ತು ಅಧ್ಯಯನದ ಸಾಧ್ಯತೆಗಳ ಬಗ್ಗೆ ಕೆಲವು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸುತ್ತದೆ. ಮೊದಲ ಎರಡು ಅಧ್ಯಾಯಗಳು -ಕೈಫಿಯತ್ತುಗಳ ಪರಿಚಯ; ಕೈಫಿಯತ್ತುಗಳು ಮತ್ತು ಇತರ ದಾಖಲೆಗಳು - ಪ್ರಾಥಮಿಕ ವ್ಯಾಖ್ಯೆ ಮತ್ತು ಲಕ್ಷಣಗಳನ್ನು ಖಚಿತಪಡಿಸುತ್ತವೆ.

‘ಕೈಫಿಯತ್ತುಗಳ ಕಾಲ ಮತ್ತು ಬರೆದವರು’ ಅಧ್ಯಾಯವು ಸಂಕ್ಷಿಪ್ತವಾಗಿ ಇದ್ದರೂ ಮುಖ್ಯವಾಗುವುದು ಬರೆದವರು ಯಾರು ಮತ್ತು ಬರವಣಿಗೆಯ ಆಯ್ಕೆಯಲ್ಲಿ ಅವರ ಪ್ರಭಾವ ಇದೆಯೇ ಎಂದು ಶೋಧಿಸುವ ದೃಷ್ಟಿಯಿಂದ. ಮುಂದಿನ ಅಧ್ಯಾಯಗಳಲ್ಲಿ ಇದಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿಗಳು ದೊರೆಯುತ್ತವೆ. ನಾಲ್ಕನೆಯ ಅಧ್ಯಾಯ ‘ಕೈಫಿಯತ್ತುಗಳ ಸಂಗ್ರಹ ಮತ್ತು ಸಂರಕ್ಷಣೆ’ಯಲ್ಲಿ ಮೆಕೆಂಜಿಯ ಸಂಗ್ರಹದ ಉದ್ದೇಶ, ಕಾಲಾವಧಿ ಮತ್ತು ಸಂಗ್ರಹಿಸಿದ ಪ್ರದೇಶದ ವ್ಯಾಪ್ತಿಯ ವಿವರಗಳು ದೊರೆಯುತ್ತವೆ.

ಮೆಕೆಂಜಿ ಸಂಗ್ರಹಿಸಿದ ಕೈಫಿಯತ್ತುಗಳನ್ನು ಬರೆದುಕೊಟ್ಟವರ ಆಸಕ್ತಿ, ಮನೋಧರ್ಮಗಳು ಕೈಫಿಯತ್ತುಗಳ ವಿಷಯ ಮತ್ತು ಧೋರಣೆಗಳ ಮೇಲೆ ಖಂಡಿತ ಕೆಲಸಮಾಡಿರುತ್ತವೆ. ‘ಆರ್ಕೈವ್ಸ್’ ಎನ್ನುವ ಪರಿಕಲ್ಪನೆಯು ಕೇವಲ ಸಾಮಗ್ರಿಗಳ ಸಂಗ್ರಹ ಅಲ್ಲ; ಅಲ್ಲಿನ ಮಾಹಿತಿಗಳಿಗೆ ಜನಾಂಗ, ಪ್ರದೇಶ, ಪರಿಸರ ಮತ್ತು ಕಾಲಘಟ್ಟದ ಸಂಬಂಧಗಳು ಇರುತ್ತವೆ. ಆದ್ದರಿಂದ ಕೈಫಿಯತ್ತುಗಳನ್ನು ಸರಳವಾಗಿ ಸಾಮಗ್ರಿಗಳಾಗಿ ಸ್ವೀಕರಿಸಲು ಆಗುವುದಿಲ್ಲ.

ADVERTISEMENT

‘ಕೈಫಿಯತ್ತುಗಳ ವರ್ಗೀಕರಣ’ ಎನ್ನುವುದು ಈ ಕಾರಣದಿಂದ ಸಮಸ್ಯಾತ್ಮಕವಾದುದು. ಭೌಗೋಳಿಕ ವರ್ಗಿಕರಣದ ಜೊತೆಗೆ ಇಲ್ಲಿ ಐತಿಹಾಸಿಕ, ಸ್ಥಳಪುರಾಣ, ಜಾತಿ ಕುರಿತವು ಮತ್ತು ಧಾರ್ಮಿಕ ಕೈಫಿಯತ್ತುಗಳು ಎಂಬ ವಿಭಾಗಗಳನ್ನು ಮಾಡಲಾಗಿದೆ. ಸ್ಥಳೀಯ ಇತಿಹಾಸದ ಅಧ್ಯಯನಕ್ಕೆ ಪೂರಕವಾದ ಮಾಹಿತಿಗಳು ಇಲ್ಲಿ ಸಿಗುತ್ತವೆ. ಸ್ಥಳೀಯ ಐತಿಹ್ಯಗಳು ಮೌಖಿಕ ಇತಿಹಾಸದ ಭಾಗವಾಗಿ ದೊರೆಯುತ್ತವೆ. ಜಾತಿಗಳನ್ನು ಕುರಿತ ಕೈಫಿಯತ್ತುಗಳು ಕುತೂಹಲಕಾರಿಯಾಗಿವೆ.

‘ಉತ್ಪತ್ತಿ’ (Genesis) ಎಂಬ ಪರಿಕಲ್ಪನೆಯಲ್ಲಿ ಜಾತಿ, ಧರ್ಮ, ಮನೆತನ, ರಾಜವಂಶ, ಮಠ ಇತ್ಯಾದಿ ಸೇರ್ಪಡೆ ಆಗುತ್ತವೆ. ಇವೆಲ್ಲವೂ ‘ಕಟ್ಟು ಕಥನಗಳು’ (Constructed Narratives). ಇಂತಹ ಕಟ್ಟುವಿಕೆಯ ಹಿಂದೆ ಕೆಲಸಮಾಡಿದ ಮನಸ್ಸುಗಳು, ಸಮುದಾಯಗಳು ಯಾವುವು ಎನ್ನುವ ಶೋಧವು ಸಂಸ್ಕೃತಿಯ ಅಧ್ಯಯನದಲ್ಲಿ ಬಹಳ ಮುಖ್ಯವಾದುದು. ‘ಕೈಫಿಯತ್ತುಗಳ ಮಹತ್ವ’ ಎಂಬ ಅಧ್ಯಾಯವು ಈ ದೃಷ್ಟಿಯಿಂದ ಮುಖ್ಯವಾಗಿದೆ. ಇದರಲ್ಲಿ ಅನೇಕ ನಿದರ್ಶನಗಳ ಮೂಲಕ ಕೈಫಿಯತ್ತುಗಳ ಮಹತ್ವವನ್ನು ಚರ್ಚಿಸಲಾಗಿದೆ. ಕೈಫಿಯತ್ತುಗಳಲ್ಲಿಯೂ ಕವಚದ ಭಾಗ ಇರುವಂತೆಯೇ ತಿರುಳಿನ ಭಾಗವೂ ಇರುತ್ತದೆ. ಇವುಗಳಲ್ಲಿ ಯಾವುದು ಹೊಸತು ಅಥವಾ ವಿಶಿಷ್ಟ ಎಂದು ಪರಿಶೀಲಿಸಬೇಕಾಗುತ್ತದೆ.

ಕೈಫಿಯತ್ತುಗಳ ಅಧ್ಯಯನದ ಸಮಸ್ಯೆ ಎಂದರೆ ಅವು ಶಾಸನಗಳ ಮಾದರಿಯ ಲಿಖಿತ ಬರಹಗಳೂ ಅಲ್ಲ; ಮೌಖಿಕ ಪರಂಪರೆಯ ಜಾನಪದ ರೂಪದವೂ ಅಲ್ಲ. ಮೌಖಿಕ ಮಾಹಿತಿಯನ್ನು ಬರಹಕ್ಕೆ ಇಳಿಸಿದಾಗ ಒಂದು ಬಗೆಯ ‘ಮಿಶ್ರ ಸಂತತಿ’ ಕೈಫಿಯತ್ತುಗಳ ರೂಪವನ್ನು ತಾಳುತ್ತದೆ. ಇದು ಕೈಫಿಯತ್ತುಗಳ ಭಾಷೆಗೆ ಮಾತ್ರ ಸೀಮಿತವಾಗದೆ, ಅವುಗಳ ಧೋರಣೆಗೆ ಹಾಗೂ ಸತ್ಯತೆಗೆ ಕೂಡ ಅನ್ವಯವಾಗುತ್ತದೆ.

‘ಕೈಫಿಯತ್ತುಗಳ ಭಾಷೆ’ ಎಂಬ ಅಧ್ಯಾಯದಲ್ಲಿ ಕೊಟ್ಟ ನಿದರ್ಶನಗಳು 18 ಮತ್ತು 19ನೆಯ ಶತಮಾನದಲ್ಲಿ ಕನ್ನಡ ಭಾಷೆಯು ಮೌಖಿಕದಿಂದ ಲಿಖಿತಕ್ಕೆ ಸಂಕ್ರಮಣ ಆಗುತ್ತಿದ್ದ ಅವಸ್ಥೆಗಳ ಸಂಕೀರ್ಣ ಮಾದರಿಗಳನ್ನು ಸಂಕೇತಿಸುತ್ತವೆ. ನಡುಗನ್ನಡ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಹೊಸಗನ್ನಡಗಳ ನಡುವಿನ ಕನ್ನಡದ ಸ್ವರೂಪವನ್ನು ಅಧ್ಯಯನ ಮಾಡಲು ಕೈಫಿಯತ್ತುಗಳು ಉತ್ತಮ ಆಕರಗಳಾಗಿವೆ. ಈ ಹಿನ್ನೆಲೆಯಲ್ಲಿ ಬಿಳಿಮಲೆಯವರ ಈ ಕೃತಿಯು ಕರ್ನಾಟಕದ ಆಧುನಿಕ ಪೂರ್ವದ ಸಾಂಸ್ಕೃತಿಕ ಇತಿಹಾಸವನ್ನು ಮರುಶೋಧಿಸಲು ಪ್ರಚೋದನೆಯನ್ನು ಕೊಡುತ್ತದೆ.

ಕೃತಿ: ಕನ್ನಡ ಕೈಫಿಯತ್ತುಗಳು
ಲೇ: ಪುರುಷೋತ್ತಮ ಬಿಳಿಮಲೆ
ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂ: 9480189860

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.