ADVERTISEMENT

ಪುಸ್ತಕ ವಿಮರ್ಶೆ | ಸರಳ, ಅಷ್ಟೇ ಸಂಕೀರ್ಣ ಕಥಾಗುಚ್ಛ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 19:30 IST
Last Updated 8 ಅಕ್ಟೋಬರ್ 2022, 19:30 IST
ಉದಕ ಉರಿದು
ಉದಕ ಉರಿದು   

ಕನ್ನಡದಲ್ಲಿ ಹಲವು ವೈಜ್ಞಾನಿಕ, ತಾಂತ್ರಿಕ ವಿಷಯಗಳ ಕುರಿತ ಲೇಖನಗಳ ಹಿಂದಿನ ಲೇಖನಿಯಾಗಿದ್ದ ಶ್ರೀಹರ್ಷ ಸಾಲಿಮಠ ಅವರ ಚೊಚ್ಚಲ ಕೃತಿ ಇದು. ಈ ಕಥಾ ಸಂಕಲನದಲ್ಲಿ ವಿಭಿನ್ನ ಜಾಡಿನ ಹನ್ನೊಂದು ಕಥೆಗಳಿವೆ. ದಾವಣಗೆರೆಯಲ್ಲಿ ಬಾಲ್ಯ ಕಳೆದು, ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸದ್ಯ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಾಸವಾಗಿದ್ದುಕೊಂಡು ವೃತ್ತಿ ಮುಂದುವರಿಸಿರುವ ಹರ್ಷ ಅವರನ್ನು ಕಾಡುವುದು ಗ್ರಾಮೀಣ ಜೀವನ.

ಕೃತಿಯಲ್ಲಿನ ‘ಗಂಧಕ್ಕೊಂದು ಬರೆ’, ‘ಬಿಳಲು ಬೇರು’, ‘ಸದ್ಗತಿ’, ‘ಉಡಾಳ ಬಸ್ಯಾನ ಖೂನಿ’ ಮೊದಲಾದ ಕಥೆಗಳು ಇದಕ್ಕೆ ಸಾಕ್ಷ್ಯ ಒದಗಿಸುತ್ತವೆ ಜೀವನಾನುಭವ, ಬದುಕಿನಲ್ಲಿ ಕಣ್ಣೆದುರಿಗೆ ಗ್ರಹಿಕೆಗೆ ಬಂದ ವಿಷಯಾಧಾರಿತ ಕಥೆಗಳು, ಓದುಗನಿಗೂ ಹತ್ತಿರವಾಗುತ್ತವೆ. ಗ್ರಾಮ್ಯ ಭಾಷೆ, ಸರಳವಾದ ನಿರೂಪಣಾ ಶೈಲಿ ಇಲ್ಲಿನ ಕಥೆಗಳ ವೈಶಿಷ್ಟ್ಯ.

‘ಗಂಧಕ್ಕೊಂದು ಬರೆ’ ಶೀರ್ಷಿಕೆಯೇ ಕಥೆಯ ಹೂರಣ ಬಿಚ್ಚಿಡುತ್ತದೆ. ಈ ಕಥೆ ಯಲ್ಲಿ ಶಾಮಣ್ಣ ಮೇಷ್ಟ್ರನ್ನೂ, ಮೇಷ್ಟ್ರ ಹೆಂಡತಿ ಯನ್ನೂ ಕಥೆಗಾರ ಚಿತ್ರಿಸಿದ ಬಗೆ ವಿಭಿನ್ನ. ಉತ್ತರಕರ್ನಾಟಕದ ಭಾಷೆಯ ಸೊಗಡು ಓದಿನ ಓಘಕ್ಕೆ ಇಂಧನ. ಮೇಷ್ಟ್ರ ಹೆಂಡತಿ ಎದುರಿಗೇ ನಿಂತು ಮಂಗಳಾರತಿ ಎತ್ತಿದ ಅನುಭವ. ಸರಳ ವಿಷಯವಾಗಿದ್ದರೂ, ವಾಸ್ತವದಲ್ಲಿ ವ್ಯವಸ್ಥೆ ಹೆಣೆಯುತ್ತಿರುವ ಬಲೆಯನ್ನು ಕಥೆಯ ಮೂಲಕ ಹೆಣೆದ ಬಗೆ ಉಲ್ಲೇಖಾರ್ಹ. ಅದೇ ರೀತಿ ‘ಉಡಾಳ ಬಸ್ಯಾನ ಖೂನಿ’ ಕಥೆಯಲ್ಲಿನ ಬಸ್ಯ ಹಾಗೂ ಚಂದ್ರಿ ಪಾತ್ರಗಳು ಮನಸ್ಸಿನಲ್ಲಿ ಉಳಿಯುವಂಥದ್ದು. ತುಂಟತನ, ಚಡ್ಡಿ ಪುರಾಣದೊಳಗೆ ಅಡಗಿದ ಸುರುಳಿಗಳು ಹಲವು.

ADVERTISEMENT

ಕೃತಿಯ ಶೀರ್ಷಿಕೆ ಹೊತ್ತ ‘ಉದಕ ಉರಿದು’ ಜಗತ್ತಿನ ಪ್ರಸ್ತುತ ಸನ್ನಿವೇಶ ವಿವರಿಸುವ ಕೃತಿ. ತನ್ನ ನೆಲದಿಂದಲೇ ಹೊರಬಿದ್ದು ಅನಾಥವಾಗಿ ಬದುಕುತ್ತಿರುವ ಮಗೇಂದ್ರನ್‌ ಹಾಗೂ ನೆಲವಿದ್ದೂ ಅನಾಥಭಾವ ಕಾಡಿದ ಕಥಾನಾಯಕನ ಪಯಣ ಹಲವು ವಾಸ್ತವಗಳನ್ನು ತೆರೆದಿಟ್ಟಿದೆ. ಜೊತೆಗೆ ತಮ್ಮದೇ ವಲಯಕ್ಕೆ ಸಂಬಂಧಿಸಿದ, ಕಾರ್ಪೊರೇಟ್‌ ಕಥೆಯೊಂದನ್ನು ‘ಸಂಕೋಲೆಯೂ ಸರಕು’ ಎನ್ನುವ ಕಥೆಯಲ್ಲಿ ವಿಭಿನ್ನವಾಗಿ ಕಟ್ಟಿ ಓದುಗರ ಮುಂದಿರಿಸಿದ್ದಾರೆ ಶ್ರೀಹರ್ಷ. ಹಣವೆನ್ನುವುದು ಮನುಷ್ಯತ್ವವನ್ನು ಹೇಗೆ ಕಸಿದುಕೊಳ್ಳುತ್ತದೆ ಎನ್ನುವುದನ್ನು ಜಾಹೀರಾತಿನ ವಿಷಯವಿಟ್ಟುಕೊಂಡು ಕಥೆ ಹೆಣೆದಿದ್ದಾರೆ ಅವರು.

*

ಉದಕ ಉರಿದು
ಲೇ:
ಶ್ರೀಹರ್ಷ ಸಾಲಿಮಠ
ಪ್ರ: ಆಲಿಸಿರಿ ಬುಕ್ಸ್‌
ಸಂ: 9986302947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.