ADVERTISEMENT

ಪುಸ್ತಕ ವಿಮರ್ಶೆ: ಸ್ಪೂರ್ತಿದಾಯಕ ‘ಕೆರೆ ಕಥೆಗಳು’

​ಪ್ರಜಾವಾಣಿ ವಾರ್ತೆ
Published 10 ಮೇ 2025, 23:30 IST
Last Updated 10 ಮೇ 2025, 23:30 IST
book
book   

ಎರಡೂವರೆ ದಶಕಗಳಿಂದ ‘ಕೆರೆ ಕಾಯಕ’ಕ್ಕಾಗಿ ನಾಡಿನ ಉದ್ದಕ್ಕೂ ಸುತ್ತಾಡಿರುವ ಬರಹಗಾರ ಶಿವಾನಂದ ಕಳವೆ, ಸಾವಿರಾರು ಕೆರೆಗಳನ್ನು ಅಧ್ಯಯನ ಮಾಡಿದ್ದಾರೆ. ಸಮುದಾಯ, ಸರ್ಕಾರ ಸೇರಿದಂತೆ ಯಾರೇ ಕೇಳಿದರೂ ಕೆರೆ ಪುನಶ್ಚೇತನ ಕಾರ್ಯಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಪ್ರತಿ ಕೆರೆಯ ಜೊತೆಗಿನ ಒಡನಾಟವನ್ನು ‘ಕೆರೆ ನೋಡಿರೋ’ ಕೃತಿಯಲ್ಲಿ ದಾಖಲಿಸಿದ್ದಾರೆ.


ಇಪ್ಪತ್ತೈದು ವರ್ಷಗಳ ‘ಕೆರೆ ಕಾಯಕ ಅನುಭವದ’ ಕನ್ನಡಿಯಂತಿರುವ ಈ ಕೃತಿಯಲ್ಲಿ ಮೂವತ್ತನಾಲ್ಕು ಕೆರೆಗಳ ವಿಭಿನ್ನ ಹಾಗೂ ವಿಶಿಷ್ಟ ದೃಷ್ಟಾಂತಗಳಿವೆ. ಬೀದರ್‌ನಿಂದ ಚಾಮರಾಜನಗರದವರೆಗೆ, ಮಲೆನಾಡು–ಕರಾವಳಿಯಿಂದ ಬಯಲು ಸೀಮೆವರೆಗಿರುವ ಕೆರೆ ಪುನಶ್ಚೇತನ, ನಿರ್ಮಾಣದ ಯಶೋಗಾಥೆಗಳಿವೆ.
‘ಕೆರೆಗಳ ಓದು’ ಎಂಬ ಅಧ್ಯಾಯದಲ್ಲಿ ಶಾಲೆಗೆ ಹೋಗದ ಮಂದಿ ಶತಮಾನಗಳ ಹಿಂದೆ ನಾಡಿನ ಮೂಲೆ ಮೂಲೆಗಳಲ್ಲಿ ಕೆರೆಗಳನ್ನು ನಿರ್ಮಿಸಿದ್ದನ್ನು ಉದಾಹರಿಸಿದ್ದಾರೆ. ‘ಕೆರೆ ಕಟ್ಟೆಗೆ ಜೀವ ಬಲಿ’ ಅಧ್ಯಾಯದಲ್ಲಿ ಕೆರೆಗೆ ಹಾರವಾದ ಭಾಗೀರಥಿಯಂತಹವರು ಕಥೆಗಳಿವೆ.


ಶಾಸನಗಳಲ್ಲಿ ಕೆರೆಗಳನ್ನು ದರ್ಶನ ಮಾಡಿಸುತ್ತಲೇ, ಎರೆ ಮಣ್ಣಿನ ಕೆರೆಯ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ ಕಳೆವೆ. ಒರತೆಯಿಂದ ಕೆರೆಗಳು ತುಂಬುವ ಒಳಗುಟ್ಟುಗಳನ್ನು ಬಿಚ್ಚಿಡುತ್ತಾ, ಬಂಡೆ ಬೆಟ್ಟದ ಕೆರೆಯ ಬೆರಗಿನ ಕಥೆಯನ್ನೂ ದಾಖಲಿಸಿದ್ದಾರೆ. ಕೆರೆಯಲ್ಲಿ ಕಳೆಗಳು ಬೆಳೆಯುವ ಪರಿಯನ್ನು ವಿವರಿಸುತ್ತಾರೆ. ಅತಿವೃಷ್ಟಿ–ಅನಾವೃಷ್ಟಿಯನ್ನು ಹೇಳುತ್ತಾ, ಎರಡನ್ನೂ ಗೆಲ್ಲುವುದಕ್ಕಿರುವ ಮಾರ್ಗಗಳನ್ನು ‘ಊರು ಗೆಲ್ಲುವ ನೀರ ದಾರಿಗಳು’ ಅಧ್ಯಾಯದಲ್ಲಿ ತೋರಿಸಿದ್ದಾರೆ.

ADVERTISEMENT


ಜನರ ಬಳಿ ಹಣವಿಲ್ಲ. ಸರ್ಕಾರದಿಂದ ನೆರವು ಕೇಳಲಿಲ್ಲ. ಆದರೂ ಐದಾರು ದಶಕಗಳಿಂದ ಹಾಳಾಗಿದ್ದ ಕೆರೆ, ಜನರಿಂದ ಮರುಜೀವ ಪಡೆಯಿತು. ನರೇಗಲ್ಲಿನಲ್ಲಿ ಸಾಕಾರಗೊಂಡ ಈ ಸೋಜಿಗದ ಕೆರೆ ಕಥೆ, ಕೊಪ್ಪಳದ ಗವಿಮಠದಶ್ರೀಗಳು ಜಲಕಾಯಕಕ್ಕೆ ಶರಣೆನೆನ್ನುತ್ತಾ ಜನಸಹಭಾಗಿತ್ವದೊಂದಿಗೆ ಕೆರೆಗಳ ಪುನಶ್ಚೇತನಗೊಳಿಸಿದ್ದು, ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾವಿರ ಕೆರೆಗಳ ಪುನರುಜ್ಜೀವನಕ್ಕೆ ಕೈಜೋಡಿಸಿದ್ದು, ನಟ ಯಶ್‌, ‘ಯಶೋ ಮಾರ್ಗ‘ದ ಮೂಲಕ ಯಲಬುರ್ಗ ತಾಲ್ಲೂಕಿನ ತಲ್ಲೂರು ಕೆರೆ ಹೂಳೆತ್ತಿಸಿ, ನೀರಾಸರೆಯಾದಂತಹ ಸ್ಪೂರ್ತಿದಾಯಕ ಯಶೋಗಾಥೆಗಳು ಕೃತಿಯಲ್ಲಿವೆ.

‘ಕೆರೆಯ ಹೂಳಿಗಿಂತ ಮಂಚೆ ತಲೆಯಲ್ಲಿರುವ ಹೂಳು ತೆಗೆಯಬೇಕು’ ಎಂದು ಹೇಳುತ್ತಲೇ ಕೆರೆ ಪುನಶ್ಚೇತನ ಕಾರ್ಯಗಳಿಗೆ ಸಮುದಾಯವನ್ನು ಅಣಿಯಾಗಿಸಿದ ಅವರು, ಈ ಕೃತಿಯ ಮೂಲಕ ನಾಡಿನ ಜನತೆಯನ್ನು ಕೆರೆ ಕಾಯಕಕ್ಕೆ ಆಹ್ವಾನಿಸುತ್ತಾರೆ.

ಕೆರೆಯ ನೋಡಿರೋ:

ಲೇ: ಶಿವಾನಂದ ಕಳವೆ

ಪ್ರ: ಸಾಹಿತ್ಯ ಪ್ರಕಾಶನ

ಸಂ: 94481 10034

ಪುಟಗಳು : 192

ಬೆಲೆ: ₹250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.