ADVERTISEMENT

ಒಳನೋಟ: ದಲಿತ ಸಂಕಟಗಳಿಂದ ಬಿಡುಗಡೆಯ ಹಂಬಲ

​ಪ್ರಜಾವಾಣಿ ವಾರ್ತೆ
Published 28 ಮೇ 2022, 19:30 IST
Last Updated 28 ಮೇ 2022, 19:30 IST
ಮಹಾಬಿಂದು ಕೃತಿ
ಮಹಾಬಿಂದು ಕೃತಿ   

‘ಮಹಾಬಿಂದು’ ಎಚ್.ಟಿ.ಪೋತೆಯವರ ಕಾದಂಬರಿ. ಈ ಲೇಖಕರು ತಾವು ಅನುಭವಿಸಿದ ಮತ್ತು ದಲಿತ ಸಮುದಾಯ ಶತಶತಮಾನಗಳಿಂದ ಶೋಷಣೆಗೆ ಒಳಗಾಗಿ ಅನುಭವಿಸುತ್ತಿರುವ ಕಷ್ಟ, ಕಾರ್ಪಣ್ಯ, ಅವಮಾನ, ಬಿಕ್ಕಟ್ಟನ್ನೇ ಕಾದಂಬರಿಯ ಭಿತ್ತಿಯಾಗಿಸಿಕೊಂಡಿದ್ದಾರೆ. ಕೊರೊನಾ ಪಿಡುಗು ಜಗತ್ತಿನಲ್ಲಿ ಉಂಟುಮಾಡಿದ ಅಲ್ಲೋಲ ಕಲ್ಲೋಲದ ಪರಿಣಾಮ ಮನುಷ್ಯ ಸಂಬಂಧಗಳ ನಾಟಕೀಯತೆ, ಸ್ವಾರ್ಥ ಮನೋಭಾವ ನಿಚ್ಚಳವಾಗಿ ಎದ್ದುಕಂಡಿತು. ಇದೇ ವಿಷಯವನ್ನು ಒಂದು ನೆಪವಾಗಿಟ್ಟುಕೊಂಡು ಆರಂಭವಾಗುವ ಈ ಕಾದಂಬರಿ, ನಿಧಾನವಾಗಿ ಶಿಥಿಲಗೊಂಡ ಮನುಷ್ಯ ಸಂಬಂಧಗಳ ಬಗೆಗೆ, ಅಸಮಾನತೆಯ ಸಮಾಜದ ಕಟು ವಾಸ್ತವದ ಬಗೆಗೆ ಶೋಧನೆಗಿಳಿಯುತ್ತದೆ. ಕಥೆಯ ನಿರೂಪಕರಾದ ಪ್ರೊ.ರಾವ್ ‘ಬುದ್ಧ ಮತ್ತು ಆತನ ಧಮ್ಮ’ ಕೃತಿಯನ್ನು ಓದಿಗಾಗಿ ಎತ್ತಿಕೊಂಡಾಗ ಮನದಲ್ಲಿ ಏನೆಲ್ಲ ಆಲೋಚನೆಗಳು ಸುಳಿದು ಹೋಗುತ್ತವೆ.

ನಿರೂಪಕ ಬುದ್ಧನ ಬದುಕು ಮತ್ತು ವಿಚಾರ ಧಾರೆಗಳ ಕನಸು ಕಾಣುತ್ತಾನೆ. ಬುದ್ಧವಿಹಾರದ ಕಡೆ ಕಾರಿನಲ್ಲಿ ಹೋಗುವಾಗ ಕೊರೊನಾ ಸೃಷ್ಟಿಸಿದ ಭೀತಿಯೊಂದಿಗೆ ಬಹಳ ಮುಖ್ಯವಾಗಿ, ದಲಿತ ಸಮುದಾಯದ ಹಸಿವು, ಬಡತನ, ಅಸಹಾಯಕತೆ, ಸವಾಲುಗಳು ಇನ್ನಿಲ್ಲದಂತೆ ಕಾಡುತ್ತವೆ. ಇಲ್ಲಿ ತಥಾಗತರು ಮತ್ತು ನಿರೂಪಕನೊಂದಿಗೆ ಸುದೀರ್ಘ ಮಾತುಕತೆ ನಡೆಯುತ್ತದೆ.

ಬುದ್ಧ, ಬಸವ, ಕನಕ, ಗಾಂಧಿ, ಅಂಬೇಡ್ಕರ್ ಅವರು ಸಮಾನತೆ, ಜಾತ್ಯತೀತ ಪರಿಕಲ್ಪನೆ, ಹೊಸ ಸಮಾಜದ ನಿರ್ಮಾಣಕ್ಕಾಗಿ ಅವಿರತವಾಗಿ
ಶ್ರಮಿಸಿದ ಬಗೆಗೆ, ಅವರ ಜೀವಪರ ಚಿಂತನೆಗಳ ಬಗೆಗೆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಸಮಾಜ ಸುಧಾರಕರು ಏನೆಲ್ಲ ಬದಲಾವಣೆಯ ಕನಸು ಕಂಡಿದ್ದರೂ ಸಮಾಜದಲ್ಲಿ ಆ ರೀತಿಯ ಪಲ್ಲಟಗಳಾಗಿಲ್ಲ ಎನ್ನುವ ದಟ್ಟ ವಿಷಾದ ಕಾದಂಬರಿಯುದ್ದಕ್ಕೂ ಹರಿದಿದೆ. ಹಾಗೆಯೇ ಇಲ್ಲಿನ ಇಡೀ ಕಥೆ ಕನಸಿನಲ್ಲಿಯೇ ನಡೆಯುತ್ತದೆ ಎನ್ನುವುದು ಗಮನಾರ್ಹ.

ADVERTISEMENT

ಕಾದಂಬರಿಯಲ್ಲಿ ಹನ್ನೆರಡು ಅಧ್ಯಾಯಗಳಿವೆ. ದಲಿತ ಸಮುದಾಯದ ವಿಭಿನ್ನ ಚಹರೆಗಳೊಂದಿಗೆ ಇದರ ಹರವು ಚಾಚಿಕೊಂಡಿದೆ. ಇಲ್ಲಿ ಚರಿತ್ರೆಯ ಅಂತಃಸತ್ವವನ್ನು ಪ್ರಶ್ನಿಸುವ, ಹೊಸ ನೆಲೆಯಲ್ಲಿ ಶೋಧಿಸುವ ಕೆಲಸವನ್ನು ಪೋತೆಯವರು ಮಾಡಿದ್ದಾರೆ. ದೇಶದ ದಲಿತ ಸಮುದಾಯದ ಸಂರಚನೆಗಳು ಇಂದಿಗೂ ಬದಲಾಗಿಲ್ಲ. ಮೇಲ್ವರ್ಗದ, ಅದರಲ್ಲೂ ಸನಾತನ ವ್ಯವಸ್ಥೆಯ ಅಸಹಿಷ್ಣುತೆ ದಲಿತರನ್ನು ಶೋಷಣೆಯ ಕೂಪಕ್ಕೆ ತಳ್ಳುತ್ತಲೇ ಇದೆ ಎನ್ನುವ ನಿಲುವನ್ನು ಲೇಖಕರು ಪ್ರಜ್ಞಾಪೂರ್ವಕವಾಗಿ ತಾಳಿದ್ದಾರೆ.

ಇಲ್ಲಿ ಗತವನ್ನು, ವರ್ತಮಾನದ ವೈರುಧ್ಯವನ್ನು ಒರೆಗೆ ಹಚ್ಚಿ ನೋಡಲಾಗಿದೆ. ಕೃತಿಯ ಪ್ರಧಾನ ಕಾಳಜಿ ಇರುವುದು ನಿರ್ಲಕ್ಷಿತ ದಲಿತ ಸಮುದಾಯವು ತಲ್ಲಣಗಳಿಂದ ಬಿಡುಗಡೆಯಾಗುವ ಬಗೆಗೆ. ಬುದ್ಧನ ಕರುಣೆ, ಬಸವನ ವೈಚಾರಿಕ ಪ್ರಜ್ಞೆ, ಗಾಂಧಿಯ ಸ್ವಾತಂತ್ರ್ಯ, ಅಂಬೇಡ್ಕರರ ಸಮಾನತೆಯ ಸಿದ್ಧಾಂತಗಳನ್ನು ಮರು ರೂಪಿಸುವ ಬಗೆಗೆ. ಸೌಹಾರ್ದ, ಸಹಬಾಳ್ವೆಯನ್ನು ಈ ನೆಲದಲ್ಲಿ ಸಾಂದ್ರವಾಗಿ ಕಟ್ಟುವ ಬಗೆಗೆ. ಎದೆ ಎದೆಗಳಲ್ಲಿ ಎಂದೂ ಆರದ ಪ್ರೀತಿಯ ಹಣತೆಗಳನ್ನು ಹಚ್ಚುವ ಬಗೆಗೆ. ಈ ತೆರನಾದ ಆಶಯಗಳು ಭಾರತದ ನೆಲದಲ್ಲಿ ಬೇಗ ಈಡೇರಿ, ಹಣ್ಣಾಗಲು ಕಾದಂಬರಿ ಒತ್ತಾಸೆಯಾಗಿ ನಿಲ್ಲುತ್ತದೆ.

ಇಲ್ಲಿ ಬರುವ ಕೆಲ ಪ್ರಸಂಗಗಳು ಮೆಲ್ಲನೆ ತಾಕುವಂತಿವೆ. ನಿಕಷಕ್ಕೆ ಈಡು ಮಾಡುವಂತಿವೆ. ಮಿತ್‌ಗಳನ್ನು ಬಳಸಿಕೊಂಡು ಸಮಕಾಲೀನವಾಗಿ ನೋಡಿದ್ದರಿಂದ ಕಾದಂಬರಿಗೆ ಒಂದು ಅಧಿಕೃತತೆ ಪ್ರಾಪ್ತವಾಗಿದೆ. ಇದು ಕೃತಿಯ ಸಾರ್ಥಕತೆ. ದೇವನೂರ ಮಹಾದೇವ, ಅರವಿಂದ ಮಾಲಗತ್ತಿಯವರ ನಂತರ ಪೋತೆಯವರು ದಲಿತ ಸಂವೇದನೆಗಳನ್ನು ದಿಟ್ಟವಾಗಿ ದಾಟಿಸುತ್ತಿದ್ದಾರೆ. ನೋವುಂಡ ಸಮುದಾಯದ ಬಗೆಗಿನ ಸಾಮಾಜಿಕ ಜವಾಬ್ದಾರಿಯನ್ನು, ನೈತಿಕ ಎಚ್ಚರವನ್ನು ಲೇಖಕರು ಇಲ್ಲಿ ಚೆನ್ನಾಗಿ ನಿಭಾಯಿಸಿದ್ದಾರೆ.

ಕೃತಿ: ಮಹಾಬಿಂದು
ಲೇ: ಎಚ್.ಟಿ.ಪೋತೆ
ಪ್ರ: ಅಂಕಿತ ಪುಸ್ತಕ
ಮೊ. 9019190502
ಪುಟಗಳು 168
ಬೆಲೆ: 195

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.