ADVERTISEMENT

ಪುಸ್ತಕ ವಿಮರ್ಶೆ | ಜನಜೀವನ ಪ್ರಭಾವಿಸಿದ ತೀರ್ಪುಗಳು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:30 IST
Last Updated 26 ನವೆಂಬರ್ 2022, 19:30 IST
ದೇಶದ ಪಥ ಬದಲಿಸಿದ 25 ಪ್ರಮುಖ ತೀರ್ಪುಗಳು ಪುಸ್ತಕದ ಮುಖಪುಟ
ದೇಶದ ಪಥ ಬದಲಿಸಿದ 25 ಪ್ರಮುಖ ತೀರ್ಪುಗಳು ಪುಸ್ತಕದ ಮುಖಪುಟ   

ಕೃತಿ: ದೇಶದ ಪಥ ಬದಲಿಸಿದ 25 ಪ್ರಮುಖ ತೀರ್ಪುಗಳು
ಲೇ: ವೈ.ಜಿ. ಮುರಳೀಧರನ್‌
ಪ್ರ: ನವಕರ್ನಾಟಕ ಪ್ರಕಾಶನ
ಬೆಲೆ: ₹ 130
ಪುಟಗಳು: 112
ಸಂ: 080–22161900

ನ್ಯಾಯಾಲಯದ ತೀರ್ಪುಗಳು ಜನಜೀವನದ ದೃಷ್ಟಿಕೋನ ಮತ್ತು ಸಾಮಾಜಿಕ ಬದಲಾವಣೆಗೆ ದೊಡ್ಡ ಕಾರಣಗಳಾಗುತ್ತವೆಯೇ? ಈ ಪ್ರಶ್ನೆಗೆ ಹೌದು ಎಂಬ ಉತ್ತರ ಈ ಕೃತಿಯಲ್ಲಿ ಸಿಗುತ್ತದೆ.

ಈಗ ನಾವು ತೀರಾ ಸರಳ ಎಂದು ಪರಿಭಾವಿಸುವ ವಿಷಯಗಳೆಲ್ಲವೂ ಸುಪ್ರೀಂ ಕೋರ್ಟ್‌ ನ್ಯಾಯಪೀಠದಿಂದ ಬಂದದ್ದು ಎಂದರೆ ಅಚ್ಚರಿಯೆನಿಸಬಹುದು. ಉದಾಹರಣೆಗೆ ಶಿಕ್ಷಣ ಮೂಲಭೂತ ಹಕ್ಕು ಎಂದು ಈಗ ಇರುವ ನಿಯಮ. ಅದಕ್ಕಾಗಿ ಕುಮಾರಿ ಮೋಹಿನಿ ಜೈನ್‌ ಎಂಬುವವರು ನಡೆಸಿದ ಕಾನೂನು ಹೋರಾಟ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಕ್ಯಾಪಿಟೇಷನ್‌ ಶುಲ್ಕಕ್ಕೆ ಕಡಿವಾಣ ಹಾಕಿ, ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ ತೀರ್ಪು ಇದರ ಹಿಂದೆ ಇದೆ. ವಸತಿ ಮೂಲಭೂತ ಹಕ್ಕು ಎನ್ನುವಲ್ಲಿಯೂ ಓಲ್ಗಾ ಟೆಲಿಸ್‌ ಮತ್ತು ಬಾಂಬೆ ಮುನ್ಸಿಪಲ್‌ ಕಾರ್ಷೊರೇಷನ್‌ ನಡುವಿನ ಪ್ರಕರಣದ ತೀರ್ಪು ಇದೆ.

ADVERTISEMENT

ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪು, ಈ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳ ಪ್ರಕಟಣೆಗೆ ಕಾರಣವಾಯಿತು. ದಯಾಮರಣ ಕುರಿತು ಅತಿ ಸೂಕ್ಷ್ಮ ಎನ್ನಿಸುವಂತಹ ನಿರ್ಣಯ ತೆಗೆದುಕೊಂಡದ್ದೂ ಕೂಡಾ ಗಮನಾರ್ಹ ತೀರ್ಪು. ನೋಟಾ (ಯಾರಿಗೂ ಮತ ಇಲ್ಲ) ಅನ್ನುವುದು ಪ್ರಚಲಿತದಲ್ಲಿದೆಯಲ್ಲ? ಅದರ ಹಿಂದೆಯೂ ಪಿಯುಸಿಎಲ್‌ ಎಂಬ ಸಂಘಟನೆ ಸುಪ್ರೀಂ ಕೋರ್ಟ್‌ವರೆಗೂ ಹೋಗಿ ವಾದಿಸಿದ ಕಥೆ ಇದೆ. ಅಭ್ಯರ್ಥಿಗಳ ಮೇಲೆ ನಂಬಿಕೆ ಇಲ್ಲದವರೂ ಚುನಾವಣಾ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ದಾಖಲಿಸಲು ಅವಕಾಶ ನೀಡುವಂತಹ ವ್ಯವಸ್ಥೆ ಕೋರ್ಟ್‌ನ ತೀರ್ಪಿನಿಂದಾಗಿಯೇ ಜಾರಿಗೆ ಬಂತು.

ಆಡಳಿತದಲ್ಲಿ ಅಧಿಕಾರಿಗಳ ಹಸ್ತಕ್ಷೇಪಕ್ಕೆ ತಡೆಯೊಡ್ಡಿದ ತೀರ್ಪು, ಅಪರಾಧಿಗಳನ್ನು ಚುನಾವಣೆಯಿಂದಲೇ ಹೊರಗಿಟ್ಟದ್ದು ಇಂಥ ವಿಶೇಷವೆನಿಸುವ 25 ತೀರ್ಪುಗಳು ಒಂದಕ್ಕಿಂತ ಒಂದು ಕುತೂಹಲಕಾರಿ ವಿವರಣೆಗಳನ್ನು ಒಳಗೊಂಡಿವೆ. ಇಂಥ ನೂರಾರು ತೀರ್ಪುಗಳಿರಬಹುದು. ಆದರೆ ಇತಿಮಿತಿಯೊಳಗೆ ಗರಿಷ್ಠ ವಿವರ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಕಾನೂನು, ಆಡಳಿತ ಹಾಗೂ ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ಓದಬೇಕಾದ ಸರಳ ವಿವರಣೆಯ ಪುಸ್ತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.