ADVERTISEMENT

ಸ್ತ್ರೀಸಂವೇದನೆಯ ಮಂದ್ರಧ್ವನಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 19:30 IST
Last Updated 25 ಏಪ್ರಿಲ್ 2020, 19:30 IST
ವಿಜಯಾ ಶ್ರೀಧರ್‌ಸಮಗ್ರ ಕಥೆಗಳು
ವಿಜಯಾ ಶ್ರೀಧರ್‌ಸಮಗ್ರ ಕಥೆಗಳು   

ವಿಜಯಾ ಶ್ರೀಧರ್‌ ಅವರ ‘ಕಳೆದುಕೊಂಡದ್ದು’, ‘ಕನ್ನಡಿಯಲ್ಲಿ ಕಂಡಾಗ’, ‘ನವನೀತ’, ‘ಅನಂತಾತನ ಹಸ್ತಾರಿಂಭ’ ಈ ನಾಲ್ಕು ಕಥಾಸಂಕಲಗಳ ಜತೆಗೆ ಇನ್ನೊಂದಿಷ್ಟು ಕಥೆಗಳನ್ನು ಸೇರಿಸಿ ಸಮಗ್ರ ಕಥೆಯಾಗಿ ಈ ಕೃತಿಯನ್ನು ಹೊರತರಲಾಗಿದೆ.
ಇದರಲ್ಲಿ 75 ಕಥೆಗಳಿವೆ. ಇವುಗಳನ್ನು ಹಿಂದೆಲ್ಲೋ ಓದಿದ್ದೇವಲ್ಲ ಎನ್ನುವ ಭಾವನೆ ಓದುಗರಲ್ಲಿ ಮೂಡಿದರೆ ಅದು ಸಹಜ. ಇದರಲ್ಲಿರುವ ಬಹುತೇಕ ಎಲ್ಲ ಕಥೆಗಳು ಪತ್ರಿಕೆಗಳು ಮತ್ತು ವಿಶೇಷಾಂಕಗಳಲ್ಲಿ ಬಂದಿರುವಂಥವು. ಅದರಲ್ಲೂ ಹೆಚ್ಚಿನ ಕಥೆಗಳು ‘ಸುಧಾ’ ಮತ್ತು ‘ಮಯೂರ’ದಲ್ಲಿ ಪ್ರಕಟವಾಗಿವೆ.

ಲಲಿತಪ್ರಬಂಧ, ನುಡಿಚಿತ್ರಗಳು ನೀಡುವ ಹಿತಾನುಭವವನ್ನು ಇಲ್ಲಿನ ಕಥೆಗಳು ಕೊಡುತ್ತವೆ. ಬಹಳಷ್ಟು ಕಥೆಗಳಲ್ಲಿ ಸ್ತ್ರೀಸಂವೇದನೆಯು ಮಂದ್ರ ಧ್ವನಿಯಲ್ಲಿ ಓದುಗರ ಹೃದಯ ತಾಕುತ್ತವೆ. ಇದಕ್ಕೆ ‘ಗುಬ್ಬಿ ಮರಿ’, ‘ಹೂ ಹುಡುಗಿ’, ‘ಅಮಾನುಷ’ದಂತಹ ಕಥೆಗಳು ನಿದರ್ಶನ. ವರ್ತಮಾನದ ಒಂದು ನಿರ್ದಿಷ್ಟಬಿಂದುವಿನಿಂದ ಕಥೆ ಪ್ರಾರಂಭಿಸುವ ಲೇಖಕಿಯ ತಂತ್ರವು ಓದಿನ ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಕೆಲವು ಕಥೆಗಳಲ್ಲಿ ವಿಷಾದದ ಶ್ರುತಿಯೂ ಧ್ವನಿಸುವುದು ಸೂಕ್ಷ್ಮಸಂವೇದನೆಯ ಓದುಗರ ಗಮನಕ್ಕೆ ದಕ್ಕುತ್ತದೆ.

ಬಾಲ್ಯದ ನವಿರು ನೆನಪುಗಳು, ಸ್ನೇಹಸಂಬಂಧಗಳು, ತನ್ನ ಪರಿಸರದ ಸುತ್ತಲಿನ ಆಗುಹೋಗುಗಳನ್ನು ಲೇಖಕಿ ಅತ್ಯಂತ ಆಪ್ತವಾಗಿ ಈ ಕಥೆಗಳಲ್ಲಿ ಅಭಿವ್ಯಕ್ತಪಡಿಸಿದ್ದಾರೆ. ಪಾತ್ರ ಚಿತ್ರಣದ ಕುಸುರಿ, ಅಕ್ಷರಗಳಲ್ಲಿ ಹಿಡಿದಿಟ್ಟ ಸನ್ನಿವೇಶಗಳು ಸಹಜವೆನಿಸುವಂತಿವೆ. ಮಲೆನಾಡಿನ ಬದುಕಿನ ಸ್ಥಿತ್ಯಂತರಗಳನ್ನೂ ಕೆಲವು ಕಥೆಗಳಲ್ಲಿ ಚಿತ್ರಿಸಿದ್ದಾರೆ. ಬದುಕಿನಲ್ಲಿ ಸಂತೋಷಪಡಲು ದೊಡ್ಡ ಸಂಗತಿಗಳೇ ಬೇಕಿಲ್ಲ, ಚಿಕ್ಕಪುಟ್ಟ ಸಂಗತಿಗಳಿಂದಲೂ ಖುಷಿಪಡಬಹುದೆಂಬ ಅರ್ಥವನ್ನು ಇವು ಧ್ವನಿಸುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.