ADVERTISEMENT

ಒಳನೋಟ: ಕನ್ನಡದ ಮಣ್ಣು, ಭಾರತದ ಕನಸು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 19:30 IST
Last Updated 6 ಆಗಸ್ಟ್ 2022, 19:30 IST
ಮಣ್ಣಿನ ಕನಸು
ಮಣ್ಣಿನ ಕನಸು   

ಶತಾವಧಾನಿ ಡಾ. ಆರ್. ಗಣೇಶ್‌ ಅವರು ಬರೆದ ‘ಮಣ್ಣಿನ ಕನಸು’ ಕಾದಂಬರಿ ಸಂಸ್ಕೃತದ ಪ್ರಸಿದ್ಧ ನಾಟಕಗಳಾದ ಮೃಚ್ಛಕಟಿಕ ಮತ್ತು ಸ್ವಪ್ನ ವಾಸವದತ್ತ ಇವೆರಡರ ರಸಾರ್ದ್ರವಾದ ಸಂಯೋಜನೆ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಭಾರತದ ಬದುಕಿನ ಚಿತ್ರಣ ಅಲ್ಲಿದೆ. ಗಂಗಾ, ಯಮುನಾ, ಕ್ಷಿಪ್ರಾ, ವೇತ್ರವತಿ ನದಿಗಳ ತಪ್ಪಲಿನ ವತ್ಸದೇಶ, ಅವಂತಿ, ಮಗಧ, ಕೋಸಲ, ವೈಶಾಲಿ ಮುಂತಾದ ಪ್ರಾಂತಗಳ ರಾಜಕೀಯ, ಸಾಮಾಜಿಕ, ಧಾರ್ಮಿಕ ಬದುಕಿನ ಆಪ್ತ ಚಿತ್ರಣ, ಆಳವಾದ ವಿಶ್ಲೇಷಣೆ ಇಲ್ಲಿದೆ. ಆರುನೂರೈವತ್ತೆಂಟು ಪುಟಗಳ ಬೃಹತ್ ಕಾದಂಬರಿ, ಕನ್ನಡಕ್ಕೆ ವಿಶಿಷ್ಟವಾದ ಕೃತಿ. ಭಾರತದ ಸಾಮ್ರಾಜ್ಯಗಳ, ಗಣತಂತ್ರಗಳ ಬದುಕು ಬವಣೆಗಳನ್ನು ಶಾಸ್ತ್ರದೃಷ್ಟಿಯಿಂದಲೂ, ಸಂಪ್ರದಾಯದ ಮುಖದಿಂದಲೂ, ಜಾನಪದ ಮೂಲದಿಂದಲೂ ಪರಿಚಯಿಸುವ ತಂತ್ರವೇ ವಿಶಿಷ್ಟವಾಗಿದೆ. ಸಂಸ್ಕೃತ ಪ್ರಾಕೃತಗಳ ನೆಲೆಯಲ್ಲಿದ್ದ ಕಥೆಯನ್ನು ಮಹಾಕಾವ್ಯವಾಗಿ ಬರೆದ ಕಾದಂಬರಿಯ ಭಾಷೆ ಸಂದರ್ಭದ ಅಗತ್ಯದಂತೆ ಪ್ರೌಢವಾಗಿ, ಸರಳವಾಗಿ ಒದಗಿದೆ. ಆ ಕಾಲದಲ್ಲಿ ಬಳಕೆಯಲ್ಲಿದ್ದ ಅನೇಕ ಶಬ್ದಗಳನ್ನು ನೆನಪಿಸುವ ಕಾದಂಬರಿ ಕನ್ನಡದ ಶಬ್ದಸಂಪತ್ತನ್ನು ಬೆಳೆಸಿದೆ. ಭಾರತೀಯ ಇತಿಹಾಸವನ್ನು ಅವಲಂಬಿಸಿ ಹೊಸದನ್ನು ಬರೆಯಬೇಕೆಂಬ ಹಂಬಲದ ಲೇಖಕರಿಗೆ ನೂರು ಹಾದಿಯನ್ನು ತೋರುವ, ಸಾವಿರ ಹೊಳಹು ನೀಡುವ ಕೃತಿ.

ಮೇಲ್ನೋಟಕ್ಕೆ ಇದು ಅರಸರ ಕಥೆ, ಅರಮನೆಯವರ ಪ್ರೇಮ ಕಥೆ ಎನ್ನಿಸುತ್ತದೆ. ರಾಜನಿಂದ ರಂಕನವರೆಗೆ, ಗರತಿಯಿಂದ ರತಿಯವರೆಗೆ, ಯೋಧನಿಂದ ಕಲಾವಿದನವರೆಗೆ ಎಲ್ಲ ರೀತಿಯ ಜನರೊಡನೆ ವ್ಯವಹರಿಸುತ್ತದೆ. ನಾಡು, ಕಾಡು, ನದಿ, ಬೆಟ್ಟ, ಅರಮನೆ, ಗುಡಿಸಲು, ಅಂತಃಪುರ, ವೇಶ್ಯಾವಾಟಿಕೆ, ಹೆಂಡದಂಗಡಿ, ಜೂಜು ಕಟ್ಟೆ ಹೀಗೆ ಎಲ್ಲ ರೀತಿಯ ಸನ್ನಿವೇಶಗಳಲ್ಲಿ ಕಥೆ ಬಿಚ್ಚಿಕೊಳ್ಳುತ್ತದೆ. ಈ ಎಲ್ಲ ಸನ್ನಿವೇಶಗಳ ವಿವರ ಅದೆಷ್ಟು ಸುಂದರವಾಗಿ ಮೂಡಿಬಂದಿದೆ ಎಂದರೆ ನಾವು ಆ ಕಾಲಕ್ಕೇ ಹೋಗಿಬಂದಂತೆ.

ಶತಾವಧಾನಿಯವರ ಬಹುಶ್ರುತ ಪಾಂಡಿತ್ಯ ಕಾದಂಬರಿಯುದ್ದಕ್ಕೂ ದುಡಿದಿದೆ. ರಾಜನೀತಿ, ಯುದ್ಧನೀತಿ, ಅರ್ಥಶಾಸ್ತ್ರ, ಧರ್ಮಶಾಸ್ತ್ರಗಳು ಒದಗಿಬಂದಂತೆ, ಪಾಕಶಾಸ್ತ್ರ, ನಾಟ್ಯಶಾಸ್ತ್ರ, ಸಂಗೀತಶಾಸ್ತ್ರ, ಗಜಶಾಸ್ತ್ರ ಹೀಗೆ ಹಲವು ಶಾಸ್ತ್ರಗಳ ಮಾತು ಆಯಾ ಸಂದರ್ಭದ ಔಚಿತ್ಯಕ್ಕನುಗುಣವಾಗಿ ಸಾವಯವವಾಗಿ ಮೂಡಿಬಂದಿವೆ. ಕಲಾವಿದ, ಸಾಹಿತಿ, ಸಹೃದಯಿ, ರಾಜಕಾರಣಿ, ವಿದ್ಯಾರ್ಥಿ, ವಿರಹಿ ಹೀಗೆ ಎಲ್ಲ ರೀತಿಯ ಓದುಗರಿಗೂ ಈ ಕಾದಂಬರಿಯಲ್ಲಿ ‘ನಮ್ಮ ಹೊಟ್ಟೆಯ ಮಾತುಗಳನ್ನು ಹೇಳಿದ್ದಾರಲ್ಲ’ ಎಂಬ ಅಚ್ಚರಿ ಕಾಡುತ್ತದೆ. ಪ್ರತಿ ಸಂದರ್ಭದ ವರ್ಣನೆಯಲ್ಲೂ ಬರುವ ಉಪಮೆ, ರೂಪಕಗಳು ಪಾತ್ರದ ಸ್ವಭಾವ, ಸನ್ನಿವೇಶದ ಸಂವೇದನೆಗಳಿಗೆ ಪೂರಕವಾಗಿ ದುಡಿಯುವುದು ಓದಿನ ರುಚಿಯನ್ನು ಹೆಚ್ಚಿಸುತ್ತವೆ.

ADVERTISEMENT

ಕಥೆಯಲ್ಲಿ ಬರುವ ಯೌಗಂಧರಾಯಣ, ಶಾಲಂಕಾಯನ, ವರ್ಷಕಾರ, ವಿಶಾಖ ಮುಂತಾದ ಪಾತ್ರಗಳ ಮೂಲಕ ತೆರೆದುಕೊಳ್ಳುವ ಶಾಸ್ತ್ರ ಭಾರತದ ಸಾಮಾನ್ಯ ಓದುಗನಿಗೂ ಅದರ ಆಳದ ದರ್ಶನ ಮಾಡಿಸುತ್ತದೆ. ಉದಯನ, ವಾಸವದತ್ತೆ, ಆಮ್ರಪಾಲಿ, ವಸಂತಸೇನೆ, ಚಾರುದತ್ತ ಮುಂತಾದವರ ಅಭಿವ್ಯಕ್ತಿಯಲ್ಲಿ ಮೂಡಿಬರುವ ಭಾವಭಾರತ ಮಾನವ ಸಂವೇದನೆಯ ಎಲ್ಲ ಸೂಕ್ಷ್ಮಗಳನ್ನೂ ಅನುಭವಕ್ಕೆ ತರುತ್ತವೆ. ಸಮಾಜದ ಎಲ್ಲ ವರ್ಣ ವರ್ಗಗಳಿಂದ ಬರುವ ಪಾತ್ರಗಳೆಲ್ಲ ಜೀವಭಾರತದ ಮಾತುಗಳನ್ನಾಡುತ್ತವೆ. ‘ನಡಾಗಿರಿ’ ಎನ್ನುವ ಹೆಸರಿನ ಆನೆಯೂ ಒಂದು ಪಾತ್ರವಾಗಿ ಕಥೆಯ ವಿಸ್ಮಯವನ್ನು ಹೆಚ್ಚಿಸುತ್ತದೆ.

ಮನುಷ್ಯನ ಭಾವ, ರಸದ ಎತ್ತರಕ್ಕೆ ಏರುವಲ್ಲಿ ನೃತ್ಯ-ಸಂಗೀತಗಳು ಹೇಗೆ ದುಡಿಯುತ್ತವೆ ಎನ್ನುವುದನ್ನು ವಿವರಿಸುತ್ತ, ಆನಂದಾನುಭವಕ್ಕೆ ಸಾಧನವಾದ ಕಲೆ ಅಧ್ಯಾತ್ಮದಿಂದ ಮೌಲ್ಯವರ್ಧನೆಗೊಳ್ಳುವ ಅನನ್ಯ ಚಿತ್ರಣ ಇಲ್ಲಿದೆ. ಬದುಕಿನ ಆಕರ್ಷಣೆ ಶೃಂಗಾರವಾಗಿ ಬೆಳೆದರೂ ಅದಕ್ಕೆ ಅಧ್ಯಾತ್ಮದ ಸ್ಪರ್ಶವಿಲ್ಲದಿದ್ದರೆ ರುಚಿಯಾದೀತು ರಸವಾಗಲಾರದು ಎನ್ನುವ ವಿಶ್ಲೇಷಣೆ ಅತ್ಯಂತ ಹೃದ್ಯವಾಗಿ ಮೂಡಿದೆ. ಭಾರತದಲ್ಲಿ ಆ ಕಾಲದಲ್ಲಿಯೇ ಬಂದ ಧಾರ್ಮಿಕ ಸಿದ್ಧಾಂತಗಳು, ಅದರ ನೆರಳಲ್ಲಿ ಬದಲಾದ ಸಾಮ್ರಾಜ್ಯಗಳ ನಿಲುವುಗಳು ನಮ್ಮನ್ನು ಚಿಂತನೆಗೆ ತೊಡಗಿಸುತ್ತವೆ. ರಾಜಕೀಯದ ತಂತ್ರ-ಪ್ರತಿತಂತ್ರಗಳಂತೂ ಒಮ್ಮೆ ಅಚ್ಚರಿಯಾಗಿ, ಒಮ್ಮೆ ಭಯವಾಗಿ ಕಾಡುತ್ತವೆ.

ಸಮಾಜದ ಬದುಕನ್ನು ರಾಜಕಾರಣವೇ ನಡೆಸುತ್ತದೆ ಎಂದೊಮ್ಮೆ ಅನಿಸಿದರೆ, ಇನ್ನೊಮ್ಮೆ ಹೆಣ್ಣುಗಂಡಿನ ಮೋಹವೇ ಎಲ್ಲರ ಬದುಕನ್ನೂ ಹಿಡಿದುಕೊಂಡಿದೆ ಎನಿಸುತ್ತದೆ. ಈ ಬದುಕು ವಿಧಿಯ ಲೀಲೆ ಎಂದನಿಸುತ್ತಿರುವಾಗಲೇ ಪುರುಷ ಪ್ರಯತ್ನದಿಂದ ಬದುಕನ್ನು ಬದಲಿಸಬಹುದು ಎನ್ನುವ ವಿಶ್ವಾಸವೂ ಮೂಡುತ್ತದೆ. ಸರಳವಾದ ಪಾತ್ರಗಳೂ ಸಂಕೀರ್ಣ ಸನ್ನಿವೇಶದಿಂದ ಬದಲಾಗುವ ಪರಿಯಂತೂ ಓದಿಯೇ ತಣಿಯಬೇಕಾದ ಸಂಗತಿ. ಓದುಗನ ಅರ್ಹತೆಗೆ ಹೊಂದಿ ತೆರೆದುಕೊಳ್ಳುವ ಮಹಾಕಾವ್ಯ ‘ಮಣ್ಣಿನ ಕನಸು’. ಪ್ರಕಟವಾದ ಮೂರೇ ತಿಂಗಳಲ್ಲಿ ಮೂರನೆಯ ಆವೃತ್ತಿಯನ್ನು ಕಂಡ ಈ ಬೃಹತ್ ಕಾದಂಬರಿ ಕನ್ನಡಕ್ಕೆ ಒಂದು ಉಡುಗೊರೆ. ಇತಿಹಾಸದ ಕನ್ನಡಿಯಲ್ಲಿ ಭಾರತವನ್ನು ನೋಡಿಕೊಳ್ಳುವ ಅವಕಾಶವನ್ನು ನೀಡುವ ಈ ಕಾದಂಬರಿ ವರ್ತಮಾನದ ಅನೇಕ ಗೊಂದಲಿಗಳಿಗೆ ಪ್ರಾಚೀನ ವಿವೇಕದ ಮಾರ್ಗಗಳನ್ನು ಸೂಚಿಸುತ್ತದೆ. ಕನ್ನಡ ಸಾರಸ್ವತಲೋಕ ಗಣೇಶ್‌ ಅವರಿಗೆ ಋಣಿಯಾಗಿದೆ.

ಕೃತಿ: ಮಣ್ಣಿನ ಕನಸು

ಲೇ: ಶತಾವಧಾನಿ ಡಾ.ಆರ್‌. ಗಣೇಶ್

ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

ಸಂ: 9448110034

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.