ಮಿಥ್ಯಸುಖ
ಕಾದಂಬರಿಯೊಂದರ ಸಾರ್ಥಕತೆಯ ಲಕ್ಷಣಗಳಲ್ಲಿ ಅದು ಮೈದಳೆದಿರುವ ಭಾಷೆ ಹಾಗೂ ವಿವರ ಸಮೃದ್ಧಿ ಮುಖ್ಯವಾದವು. ಕಾವ್ಯಗಂಧಿ ಭಾಷೆ ಹಾಗೂ ಸೂಕ್ಷ್ಮ–ಸಮೃದ್ಧ ವಿವರಗಳ ಕಾರಣದಿಂದಾಗಿ ‘ಮಿಥ್ಯಸುಖ’ ಕಾದಂಬರಿ ಒಳ್ಳೆಯ ಓದಿನ ಅನುಭವ ಕೊಡುತ್ತದೆ.
‘ಮಿಥ್ಯಸುಖ’ ಕಾವ್ಯಾ ಕಡಮೆ ಅವರ ಎರಡನೇ ಕಾದಂಬರಿ. ಮೊದಲ ಕಾದಂಬರಿ ‘ಪುನರಪಿ’ಯಲ್ಲಿ ಸಲಿಂಗ ಕಾಮದಂಥ ಭಿನ್ನ ವಿಷಯ ನಿರ್ವಹಿಸಿದ್ದ ಕಾವ್ಯಾ, ಈ ಬಾರಿಯೂ ಭಿನ್ನ ವಸ್ತುವಿನೊಂದಿಗೆ ಅನುಸಂಧಾನ ನಡೆಸಿದ್ದಾರೆ. ಈ ಅನುಸಂಧಾನ ಎರಡು ಕಾರಣಗಳಿಗಾಗಿ ಮುಖ್ಯವಾದುದು. ಮೊದಲನೆಯದು, ಸಾಂದ್ರವಾದ ಕಥನವನ್ನು ಕಟ್ಟುವುದಕ್ಕಿಂತಲೂ ತನ್ನ ಜಿಜ್ಞಾಸೆಯೊಂದನ್ನು ಓದುಗರ ಜಿಜ್ಞಾಸೆಯಾಗಿಯೂ ಹಬ್ಬಿಸುವ ಕಾದಂಬರಿಗಾರ್ತಿಯ ಮಹತ್ವಾಕಾಂಕ್ಷೆ. ಬಹು ಸೂಕ್ಷ್ಮವಾದ ವಿಷಯವನ್ನು ನಿರೂಪಿಸುವಾಗ, ಅದು ಎಲ್ಲಿಯೂ ಲಘುವಾಗದಂತೆ ವಹಿಸಿರುವ ಎಚ್ಚರ. ಈ ಎರಡು ಕಾರಣಗಳ ಜೊತೆಗೆ, ಮನಸ್ಸಿನ ಭಾವಗಳಿಗೆ ತಕ್ಕುದಾದ ಆರ್ದ್ರ ನುಡಿಗಟ್ಟೊಂದನ್ನು ರೂಪಿಸಿಕೊಂಡಿರುವ ಕೌಶಲದಿಂದಾಗಿಯೂ ‘ಮಿಥ್ಯಸುಖ’ ಗಮನಸೆಳೆಯುತ್ತದೆ.
ಕಾದಂಬರಿಯ ಕಥಾನಾಯಕಿ ಲೋಕದ ಕಣ್ಣಿಗೆ ಯಶಸ್ವೀ ಹೆಣ್ಣು. ಕುಟುಂಬ ಹಾಗೂ ವೃತ್ತಿ, ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ಜಾಣೆ. ಓದು–ಬರಹದಲ್ಲಿ ಬದುಕಿನ ಚೆಲುವು ಹಾಗೂ ಸಾರ್ಥಕತೆಯಿದೆ ಎಂದು ನಂಬಿರುವ ವಾಣಿ, ಯಾವುದೋ ಸಂದರ್ಭದಲ್ಲಿ ‘ಮೋಹನ ಮುರಲಿ’ಯೊಂದಕ್ಕೆ ಓಗೊಡುವುದು ಹಾಗೂ ತನ್ನ ಮನಸ್ಸಿನ ಮಾತನ್ನು ಪಾಲಿಸುವುದರಲ್ಲಿ ತೋರುವ ದಿಟ್ಟತನ, ಚೌಕಟ್ಟಿನ ಹಂಗಿಗೆ ಸಿಲುಕದ ದಿಟ್ಟ ಹೆಣ್ಣಿನ ಚಿತ್ರದಂತಿದೆ. ವೈಯಕ್ತಿಕ ಜೀವನದಲ್ಲಿ ವಾಣಿ ಏನನ್ನು ಹುಡುಕುತ್ತಿದ್ದಾಳೆ ಎನ್ನುವುದನ್ನು ಗೆರೆಕೊರೆದಂತೆ ಹೇಳುವುದು ಕಷ್ಟ. ಆಕೆ ಕೆಲಸ ಮಾಡುವ ಸಂಸ್ಥೆಯ ಹೊಸ ಅವಸ್ಥೆಗೂ, ಅವಳ ಮನಸ್ಸಿನೊಳಗಿನ ಹೊಯ್ದಾಟಕ್ಕೂ ಸಾಮ್ಯತೆ ಇರುವಂತೆಯೇ ವೈರುಧ್ಯವೂ ಇದೆ. ಬದುಕು ಹಾಗೂ ಸಮಾಜದ ವೈರುಧ್ಯಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದ ರೂಪದಲ್ಲಿ ‘ಮಿಥ್ಯಸುಖ’ ಮುಖ್ಯವೆನ್ನಿಸುತ್ತದೆ.
ಅಮೆರಿಕದ ಕಿಟಕಿಯಲ್ಲಿ ಉತ್ತರಕನ್ನಡದ ಹಿತ್ತಲನ್ನು ಕಾಣಿಸಲು ಹಂಬಲಿಸುವ ‘ಮಿಥ್ಯಸುಖ’ ಬದುಕಿನ ಅರ್ಥಸಾಧ್ಯತೆ ಹಾಗೂ ನಿರರ್ಥಕತೆಯ ಬಗ್ಗೆ ಯೋಚಿಸಲು ಸಹೃದಯರನ್ನು ಪ್ರೇರೇಪಿಸುವ ಕಾದಂಬರಿ.
ಮಿಥ್ಯಸುಖ
ಲೇ: ಕಾವ್ಯಾ ಕಡಮೆ
ಪು: 304
ಬೆ: ರೂ. 365
ಪ್ರ: ಜೀರುಂಡೆ ಪುಸ್ತಕ ಬೆಂಗಳೂರು–73
ಫೋನ್: 9742225779
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.