
ಮುತ್ತುಪ್ಪಾಡಿಯ ಮಾಟಗಾತಿ
ಲೇ: ಬೊಳುವಾರು
ಪ್ರ: ವೀರಲೋಕ
ಸಂ: 7022122121
ಬೊಳುವಾರು ಮಹಮದ್ ಕುಂಞಿ ಕನ್ನಡದ ಅತ್ಯುತ್ತಮ ಕಥೆಗಾರರಲ್ಲೊಬ್ಬರು. ಮುಸ್ಲಿಂ ಸಮುದಾಯದ ತವಕ ತಲ್ಲಣಗಳು ಇವರ ಕಥನಗಳ ಕೇಂದ್ರದಲ್ಲಿದ್ದರೂ, ಅವು ಸಮುದಾಯಕ್ಕೆ ಸಂಬಂಧಿಸಿದ ಸಂಗತಿಗಳಷ್ಟೇ ಆಗಿ ಉಳಿಯದೆ, ಮನುಷ್ಯ ಸಂಬಂಧಗಳು ಹಾಗೂ ಮಾನವೀಯತೆಯ ಜಿಜ್ಞಾಸೆಯ ರೂಪದಲ್ಲಿ ಸಹೃದಯನ ಮನಸ್ಸಿನಲ್ಲಿ ಉಳಿಯುತ್ತವೆ, ಬೆಳೆಯುತ್ತವೆ. ಜನಸಾಮಾನ್ಯರು, ವಿಶೇಷವಾಗಿ ಗ್ರಾಮೀಣ ಜನರು ಹಾಗೂ ಮಹಿಳೆಯರು ಇವರ ಕಥೆಗಳ ಜೀವದ್ರವ್ಯ ಆಗಿದ್ದಾರೆ. ಶ್ರೀಸಾಮಾನ್ಯರ ಬದುಕಿನ ಮೂಲಕವೇ ದೇಶ–ಕಾಲಗಳ ವರ್ತಮಾನದ ಬಿಕ್ಕಟ್ಟುಗಳ ಬಗ್ಗೆ ಯೋಚಿಸುವಂತೆ ಮಾಡುವುದು ಬೊಳುವಾರರ ಕಥೆಗಳ ವಿಶೇಷ.
‘ಮರೆಯಬಾರದ ಡಜನ್ ಕತೆಗಳು’ ಎನ್ನುವ ಅಡಿ ಟಿಪ್ಪಣಿಯೇ ‘ಮುತ್ತುಪ್ಪಾಡಿಯ ಮಾಟಗಾತಿ’ ಸಂಕಲನದ ವಿಶೇಷವನ್ನು ಹೇಳುವಂತಿದೆ. ಬೊಳುವಾರರ ಪ್ರಾತಿನಿಧಿಕ ಎನ್ನಬಹುದಾದ ಹನ್ನೆರಡು ಕಥೆಗಳು ಈ ಕೃತಿಯಲ್ಲಿವೆ. ಈ ಕಥೆಗಳು ಬೊಳುವಾರರ ಅತ್ಯುತ್ತಮ ಕಥೆಗಳು ಮಾತ್ರವಲ್ಲ, ಇವುಗಳಲ್ಲಿ ಕೆಲವು ಕನ್ನಡದ ಅತ್ಯುತ್ತಮ ಕಥೆಗಳ ಸಾಲಿಗೂ ಸೇರುವಂತಹವು. ಬೊಳುವಾರರ ಜನಪ್ರಿಯ ಹಾಗೂ ಜನಪರ ಕಥೆಗಳಾದ ‘ಜನ್ನತ್’, ‘ದೇವರುಗಳ ರಾಜ್ಯದಲ್ಲಿ’, ‘ಆಕಾಶಕ್ಕೆ ನೀಲಿ ಪರದೆ’, ‘ಅಂಕ’, ‘ಒಂದು ತುಂಡು ಗೋಡೆ’ ಕಥೆಗಳು ಈ ಕೃತಿಯಲ್ಲಿ ಸೇರಿವೆ. ಇವು ಕಥೆಗಾರರ ಮನೋಧರ್ಮ, ಆಶಯಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವಂತಿವೆ.
ಹೊಸ ತಲೆಮಾರಿನ ಓದುಗರಿಗೆ ಬೊಳುವಾರರ ಕಥನ ವೈಶಿಷ್ಟ್ಯವನ್ನು ಪರಿಚಯಿಸುವಂತೆ ರೂಪುಗೊಂಡಿರುವುದು ‘ಮುತ್ತುಪ್ಪಾಡಿಯ ಮಾಟಗಾತಿ’ ಸಂಕಲನದ ವಿಶೇಷಗಳಲ್ಲಿ ಒಂದಾಗಿದೆ. ಕಥೆಗಾರರಾಗಿ ಬೊಳುವಾರರ ಭಾಷೆ, ಕಥನತಂತ್ರಗಳನ್ನು ಗಮನಿಸಲಿಕ್ಕೆ ಇದು ಸೂಕ್ತ ಕೃತಿ. ಇಲ್ಲಿನ ಕಥೆಗಳು ಸರಳ ಹಾಗೂ ಮೋಹಕ ಭಾಷೆಯ ಮಾದರಿಯೊಂದನ್ನು ಪರಿಚಯಿಸುವಂತಿವೆ. ಸೃಜನಶೀಲ ಲೇಖಕನೊಬ್ಬ ಹೊಂದಿರಬೇಕಾದ ರಾಜಕೀಯ ಪ್ರಜ್ಞೆಯ ಸ್ವರೂಪ ಹೇಗಿರಬೇಕು ಎನ್ನುವುದಕ್ಕೂ ಈ ಕಥೆಗಳು ನಿದರ್ಶನದಂತಿವೆ. ಬೊಳುವಾರರ ಕಥಾಲೋಕದ ಆಳ–ಅಗಲಗಳನ್ನು ತಿಳಿಯಲು ಅನುಕೂಲವಾಗುವಂತೆ ವಿಸ್ತೃತ ಪ್ರವೇಶಿಕೆಯೊಂದು ಇದ್ದಿದ್ದರೆ ಈ ಕೃತಿಯ ಸಾಧ್ಯತೆ ಇನ್ನಷ್ಟು ಹೆಚ್ಚುತ್ತಿತ್ತು.