ADVERTISEMENT

ಮೊದಲ ಓದು: ಒಲವೆ ಜೀವನ ಸಾಕ್ಷಾತ್ಕಾರ ಪುಸ್ತಕ– ಅಮರ ಮಧುರ ನೆನಪುಗಳ ಗೀತೆಗಳು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 23:45 IST
Last Updated 20 ಆಗಸ್ಟ್ 2022, 23:45 IST
ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಜೀವನ ಸಾಕ್ಷಾತ್ಕಾರ   

ಕೆಲವೊಂದು ಹಾಡುಗಳೇ ಹಾಗೆ. ಬಗೆದಷ್ಟು ನೆನಪುಗಳು ಅದರಲ್ಲಡಗಿಕೊಂಡಿರುತ್ತವೆ. ‘ಮೆಲ್ಲುಸಿರೇ...’ ಎಂದರೆ ‘ಸವಿಗಾನ’ವೊಂದು ಹಾಗೆಯೇ ಸ್ಮೃತಿಪಟಲದಲ್ಲಿ ಮೂಡುತ್ತದೆ. ಇಂಥ ಅಮರ ಚಿತ್ರಗೀತೆಗಳನ್ನು ಹೊತ್ತು ತಂದಿದೆ ‘ಒಲವೆ ಜೀವನ ಸಾಕ್ಷಾತ್ಕಾರ’.

70–80ರ ದಶಕದ ಸಿನಿಮಾಗಳಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯ ಇತ್ತೋ, ಅದರಲ್ಲಿರುವ ಗೀತೆಗಳಿಗೂ ಅಷ್ಟೇ ಆದ್ಯತೆ ಇತ್ತು. ಸಿನಿಮಾಗಳ ಯಶಸ್ಸೂ ಚಿತ್ರಗೀತೆಗಳ ಮೇಲೆ ನಿಂತಿದೆ ಎನ್ನುವ ಕಾಲವಿತ್ತು. ಹೀಗಾಗಿಯೇ ಗಂಭೀರವಾದ, ಅರ್ಥಪೂರ್ಣ ಸಾಹಿತ್ಯವನ್ನು ಅಂತಹ ಚಿತ್ರಗೀತೆಗಳಲ್ಲಿ ಕಾಣಬಹುದಾಗಿತ್ತು. ಚಿತ್ರಗೀತೆಗಳ ಸಾಹಿತ್ಯ ಅದೆಷ್ಟು ಆಳವಾಗಿತ್ತೆಂದರೆ ಪ್ರತೀ ಪದ, ವಾಕ್ಯಗಳಿಗೆ ಅರ್ಥ, ವ್ಯಾಖ್ಯಾನ ಪ್ರತೀ ಕ್ಷಣಕ್ಕೂ ವಿಭಿನ್ನ. ಇಂದಿಗೂ ಹಸಿರಾಗಿ ಈ ಕವಿತೆಗಳು ಉಸಿರಾಗಿರಲು ಇದೇ ಮುಖ್ಯ ಕಾರಣ. ಈ ಕೃತಿಯಲ್ಲಿ 1963ರಿಂದ 1983ರವರೆಗಿನ ಸಿನಿಮಾಗಳ ಒಟ್ಟು ಮೂವತ್ತು ಹಾಡುಗಳನ್ನಿಲ್ಲಿ ಆಯ್ಕೆಮಾಡಿ ಚರ್ಚಿಸುವ ಪ್ರಯತ್ನ ಮಾಡಲಾಗಿದೆ.

ಕೇವಲ ಹಾಡುಗಳನ್ನು ದಾಖಲಿಸದೆ, ಬಿಡಿ ಬಿಡಿಯಾಗಿ ಶಬ್ದ, ಪದ, ವಾಕ್ಯಗಳನ್ನು ವಿವರಿಸುವ ಪ್ರಯತ್ನವನ್ನೂ ಈ ಕೃತಿಯಲ್ಲಿ ಕಾಣಬಹುದು. ಸಂಪೂರ್ಣ ಗೀತೆಯನ್ನು ದಾಖಲಿಸಿದ ನಂತರ ಹಾಡಿನ ರಚನೆ ಮಾಡಿದವರು, ಗಾಯಕರು, ನಟರು ಯಾರು ಎಂಬ ಪುಟ್ಟ ವಿವರದೊಂದಿಗೆ ಆರಂಭವಾಗಿ ಪ್ರತೀ ಸಾಲಿನ ವ್ಯಾಖ್ಯಾನದೊಂದಿಗೆ ಒಂದೊಂದು ಅಧ್ಯಾಯ ಮುಂದುವರಿಯುತ್ತದೆ. ವಿಶೇಷ ಏನೆಂದರೆ ಇಲ್ಲಿರುವ ಎಲ್ಲ ಗೀತೆಗಳ ನಾಯಕ ನಟ ರಾಜ್‌ಕುಮಾರ್‌. ಈ ಆಯ್ಕೆ ಉದ್ದೇಶಪೂರ್ವಕವೂ ಹೌದು ಎಂದಿದ್ದಾರೆ ಲೇಖಕರು. ‘ರಾಜ್‌ಕುಮಾರ್‌ ಅವರನ್ನು ಮರೆತು ಮಾತನಾಡಿದರೆ ಅಲ್ಲಿ ಸಮಗ್ರತೆಯ ನೋಟ ಸಾಧ್ಯವೇ ಇಲ್ಲ ಎನ್ನುವುದು ಒಂದು ವಿನಮ್ರ ತಿಳಿವಳಿಕೆ’ ಎನ್ನುವ ಸ್ಪಷ್ಟನೆಯನ್ನು ಲೇಖಕರು ನೀಡಿದ್ದಾರೆ. ಆಯ್ಕೆ ಮಾಡಿಕೊಂಡ ಅವಧಿಯಲ್ಲಿನ ಎಲ್ಲ ಖ್ಯಾತ ಗೀತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಓದುಗನಿಗೆ ಅನಿಸಿದರೂ, ಲೇಖಕರ ವಿವೇಚನೆಗೆ ಅದು ಮೀಸಲು. ಒಂದಿಷ್ಟು ಅಮರ ಚಿತ್ರಗೀತೆಗಳನ್ನು ಮೆಲುಕು ಹಾಕಿಕೊಳ್ಳುವ ಅವಕಾಶವನ್ನು ಕೃತಿ ಒದಗಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.