ADVERTISEMENT

ಮೊದಲ ಓದು: ಮನೋವಿಶ್ಲೇಷಣೆಯ ಅಪರೂಪದ ‘ಸಮ್ಮತಿ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 23:27 IST
Last Updated 13 ಸೆಪ್ಟೆಂಬರ್ 2025, 23:27 IST
‘ಸಮ್ಮತಿ’ 
‘ಸಮ್ಮತಿ’    

ನಾವು ಇಂದು ಏನಾಗಿದ್ದೇವೆಯೋ ಅದಕ್ಕೆ ನಮ್ಮ ಗತಕಾಲವೂ ಕಾರಣವಾಗಿರುತ್ತದೆ. ಅಂತೆಯೇ ಮನುಷ್ಯ ಬೆಳೆದು ಬಂದ ಪರಿಸರ, ಆತನ ಅನುಭವ, ನೆನಪುಗಳ ಆಧಾರದಲ್ಲೇ ವರ್ತಮಾನವು ರೂಪುಗೊಳ್ಳುತ್ತದೆ ಎಂಬುದು ಮನೋವಿಜ್ಞಾನಿಗಳ ನಿಲುವು. ಈ ನಿಲುವನ್ನು ವೈಜ್ಞಾನಿಕ ತಳಹದಿಯಲ್ಲಿ ‘ಸಮ್ಮತಿ’ ಕೃತಿ ವಿವರಿಸಲು ಯತ್ನಿಸುತ್ತದೆ.

ನಿಲೋಫರ್ ಕೌಲ್ ಅವರ ‘Consent-Fearful Asymmetry’ ಕೃತಿಯನ್ನು ಕನ್ನಡಕ್ಕೆ ಲೇಖಕಿ ರಾಜಲಕ್ಷ್ಮಿ ಎನ್.ಕೆ. ಅನುವಾದಿಸಿದ್ದಾರೆ. ಕೃತಿಯ ಶೀರ್ಷಿಕೆ ಸೂಚಿಸುವಂತೆ ಮನುಷ್ಯ ಸಂಬಂಧಗಳಲ್ಲಿ ‘ಒಪ್ಪಿಗೆ’ ಎಂಬುದು ಎಷ್ಟು ಮುಖ್ಯ ಅನ್ನುವುದನ್ನು ಮನೋವಿಶ್ಲೇಷಣಾತ್ಮಕ ನೆಲೆಯಲ್ಲಿ ಚರ್ಚಿಸಲಾಗಿದೆ. ವಯಸ್ಕರು ಮತ್ತು ಮಕ್ಕಳ ಸುಪ್ತ ಮನಸ್ಸಿನ ಮೇಲೆ ಲೈಂಗಿಕತೆ, ಪರಿಸರ ಬೀರುವ ಪ್ರಭಾವದ ಚಿತ್ರಣದ ಜತೆಗೇ ಲೈಂಗಿಕ ಶೋಷಣೆಯಲ್ಲಿ ಸುಪ್ತಾವಸ್ಥೆಯ ಪಾತ್ರವನ್ನು ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್‌ನ ಸಿದ್ಧಾಂತದ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ.

ಹೆಣ್ಣು–ಗಂಡೆಂಬ ಲಿಂಗಾಧಾರಿತ ಪಾತ್ರಗಳನ್ನು ರೂಪಿಸುವಲ್ಲಿ ಲಿಂಗತ್ವ ವಿಭಜನೆಯು ವಹಿಸಿರುವ ಪಾತ್ರವು, ಮಗುವಿನ ಮನಸ್ಸಿನ ಮೇಲೆ ಪ್ರಭಾವ ಬೀರಿ ಮುಂದೆ ಅದು ಸಾಮಾಜಿಕವಾಗಿ ಹೇಗೆ ಪ್ರತಿಫಲನಗೊಳ್ಳುತ್ತದೆ ಎಂಬುದನ್ನು ‘ಫ್ಯಾಂಟಸಿ’ ಲೇಖನವು ಸೊಗಸಾಗಿ ಕಟ್ಟಿಕೊಡುತ್ತದೆ. ಹುಸಿಯಾದ ಪುರುಷತ್ವದ ಎಳೆಗಳು ಹೇಗೆ ಲೈಂಗಿಕ ಶೋಷಣೆ, ಅತ್ಯಾಚಾರ, ಹಿಂಸೆಯಂಥ ಅವಗುಣಗಳನ್ನು ರೂಢಿಸಿಕೊಳ್ಳುತ್ತವೆ, ಹೆಣ್ಣನ್ನು ಪ್ರಲೋಭನೆಯೊಡ್ಡುವ ಸ್ಥಾನದಲ್ಲಿಟ್ಟು ಹೇಗೆ ನೋಡಬಲ್ಲವು ಎನ್ನುವ ವಿಶ್ಲೇಷಣೆಯೂ ಇಲ್ಲಿದೆ. ಒಟ್ಟಾರೆ ಲಿಂಗತ್ವದ ವಿಭಜನೆಯ ಹಿಂದಿರುವ ಮಾನಸಿಕ ನೆಲೆಗಳು ಯಾವುವು? ಮನುಷ್ಯ ಸಂಬಂಧಗಳ ನಡುವಿನ ‘ಸಮ್ಮತಿ’ ಎನ್ನುವುದು ಒಂದು ನೆಲೆಯಲ್ಲಿ ಮೇಲ್ನೋಟಕ್ಕೆ ಸರಿ ಎನಿಸಬಹುದಾದರೂ, ಮತ್ತೊಂದು ನೆಲೆಯಲ್ಲಿ ಅದು ಅಸಮಾನತೆಯ ನೆಲೆಯಾಗಿ ನಮ್ಮ ತಿಳಿವಳಿಕೆಯನ್ನೂ ಮೀರಿ ಬೆಳೆದುನಿಂತಿರುವ ಬಗೆಯನ್ನು ಕೃತಿ ವೈಜ್ಞಾನಿಕವಾಗಿ ಬಿಡಿಸಿಡುತ್ತಾ ಹೋಗುತ್ತದೆ. ಅನುವಾದ ಮತ್ತಷ್ಟು ಸರಳವಾಗಿದ್ದರೆ ಎಲ್ಲ ವರ್ಗದ ಓದುಗರನ್ನು ತಲುಪಬಹುದಿತ್ತು. ಮನೋವಿಶ್ಲೇಷಣೆಗೆ ಸಂಬಂಧಿಸಿದ ಪುಸ್ತಕಗಳು ಕನ್ನಡದಲ್ಲಿ ಅಪರೂಪವಾಗಿದ್ದು, ‘ಸಮ್ಮತಿ’ ಆ ಕೊರತೆಯನ್ನು ತುಸುವಾದರೂ ನೀಗಿಸಲು ಪ್ರಯತ್ನಿಸಿದೆ.

ADVERTISEMENT

ಸಮ್ಮತಿ

ಲೇ: ನಿಲೋಫರ್ ಕೌಲ್

ಅನು: ರಾಜಲಕ್ಷ್ಮಿ ಎನ್.ಕೆ

ಪ್ರ: ಅಹರ್ನಿಶಿ 

ಸಂ: 9449174662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.