ADVERTISEMENT

ಮೊದಲ ಓದು: ನಿತ್ಯ ಬದುಕಿನ ಸಾಮಾನ್ಯ ಚಿತ್ರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 23:30 IST
Last Updated 13 ಡಿಸೆಂಬರ್ 2025, 23:30 IST
book
book   

ಲೇಖಕರೇ ಹೇಳಿಕೊಂಡಂತೆ ಕಲ್ಪಿತ ವಾಸ್ತವ ಎನ್ನುವ ಸಾಹಿತ್ಯ ಪ್ರಕಾರದ ಪುಸ್ತಕ. ಕಥೆ ಎಂದು ಹೇಳಲಾಗದ, ಕಾದಂಬರಿ ಎನ್ನಲಾಗದ, ಪ್ರಬಂಧ ಎಂದು ಪರಿಗಣಿಸಬಹುದಾದ ಕಿರು ಹೊತ್ತಿಗೆ ಇದು. ಸಾಮಾನ್ಯರ ಜೀವನದಲ್ಲಿ ನಡೆದಿರಬಹುದಾದ ಘಟನೆಗಳನ್ನೇ ಲೇಖಕರು ನವಿರಾಗಿ ವಿವರಿಸಿದ್ದಾರೆ. ಸಿದ್ಧ ಮಾದರಿಯ ಪೀಠಿಕೆ ಇಲ್ಲದೆ ನೇರವಾಗಿ ಕಥೆ ಹೇಳಿದ ಹಾಗೆ ಘಟನೆಗಳನ್ನು ಇಲ್ಲಿ ನಿರೂಪಿಸಲಾಗಿದೆ. ನಿತ್ಯ ಬದುಕಿನ ಸಾಮಾನ್ಯ ಸಂಗತಿಗಳನ್ನೇ ಚಿತ್ರಿಸಲಾಗಿದ್ದು, ಓದುಗರನ್ನು ಕುತೂಹಲಕ್ಕೆ ಹಚ್ಚುತ್ತದೆ. ನಿವೃತ್ತ ದಂಪತಿಯ ರೈಲು ಪ್ರಯಾಣದ ಮೂಲಕ ಕಥೆ ಪ್ರಾರಂಭವಾಗುತ್ತದೆ. ಪ್ರಯಾಣದಲ್ಲಿ ಸಿಗುವ ಪರಿಚಿತರೆನಿಸುವ ಅಪರಿಚಿತರ ನಡುವೆ ನಡೆಯುವ ಸಂಭಾಷಣೆಗಳು, ಪ್ರವಾಸ ಹೋದಾಗ ಊರಿನಲ್ಲಿ ನಡೆಯುವ ಘಟನೆಗಳಿಂದ ಎದುರಾಗುವ ಆತಂಕಗಳು, ನಿವೃತ್ತಿ ಬಳಿಕವೂ ಸರ್ಕಾರಿ ನೌಕರನೊಬ್ಬನ ಪಡಿಪಟಾಲು ಮುಂತಾದವುಗಳು ಇಲ್ಲಿ ದಾಖಲಾಗಿದೆ.

ಆಸ್ತಿ ವಿಚಾರಕ್ಕೆ ನೆರೆಮನೆಯನವರ ನಡುವೆ ನಡೆಯುವ ವ್ಯಾಜ್ಯ, ದೂರು ಕೊಡಲು ಹೋದವರನ್ನು ಪೊಲೀಸರು ನಡೆಸಿಕೊಳ್ಳುವ ಪರಿ, ಕೇಸು ಜಯಿಸಲು ಎದುರಾಳಿಗಳು ಮಾಡುವ ಉಪಾಯಗಳು, ಜಾತಿ ತರಮತದ ನೋವುಗಳೂ ಇಲ್ಲಿ ಅಡಕವಾಗಿದೆ. ಸಮಾಜದ ಓರೆಕೋರೆಗಳ ಬಗ್ಗೆ ಪುಸ್ತಕ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತದೆ. ತಾಯಿಯ ಕರುಳ ನೋವನ್ನೂ ಕೆಲವೇ ಪದಗಳಲ್ಲಿ ಲೇಖಕ ಹಿಡಿದಿಟ್ಟಿದ್ದಾರೆಯಾದರೂ, ಅದರ ಹಿಂದಿನ ಭಾವ ಅನನ್ಯವಾದುದು. ಮೂಢನಂಬಿಕೆಗಳಿಗೆ ಜೋತು ಬೀಳುವ, ಅದನ್ನೇ ಬಂಡವಾಳ ಮಾಡಿಕೊಂಡವರ ಉಲ್ಲೇಖವೂ ಸೂಕ್ಷ್ಮ ಮನಸ್ಸಿನ ಓದುಗರಿಗೆ ದಕ್ಕುತ್ತವೆ. ಸ್ತ್ರಿ-ಪುರುಷ ಸಮಾನತೆಯ ಪ್ರತಿಪಾದನೆಯ ಇನ್ನೊಂದು ಬದಿ ಪುಸ್ತಕದಲ್ಲಿದೆ.

ದೇಶದ ಕಾನೂನು ವ್ಯವಸ್ಥೆಯ ಬಗ್ಗೆ ಇರುವ ದೀರ್ಘ ಅಧ್ಯಾಯ ಲೇಖಕರ ಅಧ್ಯಯನಶೀಲತೆಗೆ ಸಾಕ್ಷಿ. ನ್ಯಾಯದಾನದಲ್ಲಿ ಆಗುತ್ತಿರುವ ವಿಳಂಬ, ಅದಕ್ಕೆ ಕಾರಣಗಳು, ಅದಕ್ಕಿರುವ ಪರಿಹಾರಗಳು, ಈ ಸಂಬಂಧ ಅಂಕಿ ಅಂಶಗಳು ದಾಖಲು ಮಾಡಿರುವುದು ಲೇಖಕರ ವೃತ್ತಿ ಜೀವನದಲ್ಲಿ ಅನುಭವಿಸಿದ ನೋವುಗಳ ಪ್ರತಿಬಿಂಬವೇನೋ ಎಂದನಿಸುತ್ತದೆ. ಈ ಅಧ್ಯಾಯದ ಗಂಭೀರ ಓದು ಎಲ್ಲಾ ಓದುಗರಿಗೆ ಪಥ್ಯವಾಗುವುದು ಅನುಮಾನ. ಸೂಕ್ಷ್ಮ ಮನಸ್ಸಿನಿಂದ ನೋಡುವವರಿಗೆ ಇಲ್ಲಿನ ನಿರೂಪಣೆಯ ಇನ್ನೊಂದು ಮಗ್ಗುಲು ಅರ್ಥವಾಗಬಹುದು.

ADVERTISEMENT

ವ್ಯಥೆ ಕಥೆ

  • ಲೇ: ಅಜಕ್ಕಳ ಗಿರೀಶ ಭಟ್

  • ಪ್ರ: ಚಿಂತನ ಬಯಲು

  • ಸಂ: 8217703698

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.