ADVERTISEMENT

ಶತಸ್ಮೃತಿ: ಯಕ್ಷಗಾನ ಭಾಗವತರಿಗೊಂದು ಪಠ್ಯ

ರವೀಂದ್ರ ಭಟ್ಟ
Published 20 ಏಪ್ರಿಲ್ 2019, 19:31 IST
Last Updated 20 ಏಪ್ರಿಲ್ 2019, 19:31 IST
   

ಶತಸ್ಮೃತಿ

ಪ್ರಧಾನ ಸಂಪಾದಕ: ಡಾ.ಶ್ರೀಧರ ಉಪ್ಪೂರ

ಪ್ರಕಾಶನ: ಮಾರ್ವಿ ನಾರ್ಣಪ್ಪ ಉಪ್ಪೂರ ಜನ್ಮಶತಮಾನೋತ್ಸವ ಸಮಿತಿ

ADVERTISEMENT

ಯಕ್ಷಗಾನ ಕಲಾ ಕೇಂದ್ರ, ಹಂಗಾರಕಟ್ಟೆ–ಐರೋಡಿ, ಉಡುಪಿ ಜಿಲ್ಲೆ

ಪುಟ: 336+40 ಚಿತ್ರಪುಟಗಳು

ಬೆಲೆ: ರೂ 300

ಯಕ್ಷಗಾನದ ಯುಗ ಪ್ರವರ್ತಕರಲ್ಲಿ ಮಾರ್ವಿ ನಾರ್ಣಪ್ಪ ಉಪ್ಪೂರರೂ ಒಬ್ಬರು. ಬಡಗುತಿಟ್ಟಿನ ಯಕ್ಷಗಾನ ಭಾಗವತರಾಗಿ, ಪ್ರಾಚಾರ್ಯರಾಗಿ ಯಕ್ಷಲೋಕಕ್ಕೆ ಅವರ ಕೊಡುಗೆ ಅಪಾರ. ಯಕ್ಷಗಾನ ಲೋಕದಲ್ಲಿ ಒಂದು ಮಾತಿದೆ. ‘ವ್ಯಕ್ತಿಯೊಬ್ಬ ರಂಗದಲ್ಲಿ ಪಾತ್ರವಾಗುವುದು ಭಾಗವತನಿಂದ’ ಎಂದು. ಆ ಮಾತನ್ನು ಉಪ್ಪೂರರ ಭಾಗವತಿಕೆಯನ್ನು ನೋಡಿಯೇ ಹೇಳಿದ್ದಾರೇನೋ ಎನ್ನುವಷ್ಟು ಅವರು ರಂಗದಲ್ಲಿ ಹಲವು ಪಾತ್ರಗಳನ್ನು ಕುಣಿಸಿದ್ದಾರೆ. ಅವರ ಭಾಗವತಿಕೆಯ ಕಾರಣಕ್ಕಾಗಿಯೇ ಹಲವು ನಟರು ಪ್ರಸಿದ್ಧರಾಗಿದ್ದಾರೆ. ತಾರೆಗಳಾಗಿದ್ದಾರೆ. ಸೂಪರ್ ಸ್ಟಾರ್‌ಗಳಾಗಿ ಮೆರೆದವರೂ ಇದ್ದಾರೆ. ನಾರ್ಣಪ್ಪ ಉಪ್ಪೂರರ ಜನ್ಮ ಶತಮಾನೋತ್ಸವ ಕಳೆದ ಫೆಬ್ರುವರಿಯಲ್ಲಿ ಮುಕ್ತಾಯವಾಯಿತು. ಉಪ್ಪೂರರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಪುತ್ರರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದೊಂದಿಗೆ ‘ಶತಸ್ಮೃತಿ’ ಎಂಬ ಗ್ರಂಥವನ್ನು ಹೊರತಂದಿದ್ದಾರೆ. ಇದು ಎಲ್ಲ ಅರ್ಥದಲ್ಲಿಯೂ ಯಕ್ಷಗಾನ ಕ್ಷೇತ್ರದ ಈಗಿನ ಕಾಲಮಾನದವರಿಗೆ ಒಂದು ಪಠ್ಯವಾಗಬಲ್ಲದು. ಅದರಲ್ಲಿಯೂ ಯುವ ಭಾಗವತರು ಇದರಿಂದ ಕಲಿಯುವುದು ಬಹಳಷ್ಟು ಇದೆ. ಯಕ್ಷಗಾನಕ್ಕೆ ಹೊಸ ದೃಷ್ಟಿ ಬೇಕು. ಆದರೆ ಅದು ಅಂದಗೆಡಬಾರದು ಎಂಬ ಉಪ್ಪೂರರ ಕಾಳಜಿ ಇಲ್ಲಿ ಪ್ರತಿಬಿಂಬಿತವಾಗಿದೆ. ಯಕ್ಷಗಾನ ಭಾಗವತರು ಶಿಸ್ತು ರೂಢಿಸಿಕೊಳ್ಳಬೇಕು ಎಂಬ ಅಂಶ ಇಡೀ ಪುಸ್ತಕದ ಹೂರಣವೇ ಆಗಿಬಿಟ್ಟಿದೆ.

ಉಪ್ಪೂರು ನಾರ್ಣಪ್ಪ ಭಾಗವತರು ಯಕ್ಷಗಾನದ ಮುನ್ನೋಟಕ್ಕೆ ಸಮರ್ಥ ಮುನ್ನುಡಿಯನ್ನು ಬರೆದುಕೊಟ್ಟವರು. ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಅವರು 1966ರ ವೇಳೆಗೇ ‘ಯಕ್ಷಗಾನ ಶಿಕ್ಷಕ’ ಎಂಬ ಕೈಪಿಡಿ ಹೊರತಂದಿದ್ದರು. ಯಕ್ಷಗಾನಕ್ಕೆ ಸೂಕ್ತವಾದ ಪಠ್ಯವನ್ನೂ ರೂಪಿಸಿದವರು. ಯಕ್ಷಗಾನಕ್ಕೆ ನಿರ್ದೇಶಕರು ಬೇಕು ಎಂಬ ಬೇಡಿಕೆಯನ್ನು ಸಮರ್ಥವಾಗಿ ಮುಂದಿಟ್ಟ ಅವರು ತಾವೇ ಅತ್ಯುತ್ತಮ ನಿರ್ದೇಶಕರಾಗಿಯೂ ಕಾಣಿಸಿಕೊಂಡವರು. ಹಲವಾರು ಯಕ್ಷಗಾನ ಕೃತಿಯನ್ನೂ ರಚಿಸಿ ಯಕ್ಷಲೋಕಕ್ಕೆ ಕೊಟ್ಟವರು ಅವರು.

‘ಯಕ್ಷಗಾನ ಸಿದ್ಧಪುರುಷ ಉಪ್ಪೂರರ ಕೀರ್ತಿಶರೀರಕ್ಕೆ ಮುಪ್ಪೂ ಇಲ್ಲ, ಮರಣವೂ ಇಲ್ಲ‘ ಎಂದು ಈ ಪುಸ್ತಕದ ಒಂದು ಲೇಖನದಲ್ಲಿ ಹಿರಿಯ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯಾಯ ಹೇಳಿದ್ದಾರೆ. ಉಪ್ಪೂರರ ಅಮರತ್ವವನ್ನು ಸಾರುವ ಪುಸ್ತಕ ಇದು. ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ, ಅವಲೋಕನ ಹೀಗೆ ಐದು ಭಾಗಗಳಲ್ಲಿ ಇಲ್ಲಿ ಲೇಖನಗಳಿವೆ. ಉಪ್ಪೂರರನ್ನು ಭಾಗವತರಾಗಿ ಕಂಡವರು, ಅವರೊಡನೆ ಒಡನಾಡಿದವರು, ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದವರು, ಅವರ ಭಾಗವತಿಗೆ ಅರ್ಥ ಹೇಳಿದವರು, ಕುಣಿದವರು, ಪ್ರೇಕ್ಷಕರಾಗಿ ಕುಪ್ಪಳಿಸಿದವರು ಹೀಗೆ ಎಲ್ಲರೂ ಇಲ್ಲಿ ಲೇಖನಗಳನ್ನು ಬರೆದಿದ್ದಾರೆ. ಇದು ಅಕಾಡೆಮಿಕ್ ಲೇಖನಗಳ ಸಂಗ್ರಹ ಅಲ್ಲ. ಒಂದೆರಡು ಅಂತಹ ಲೇಖನಗಳು ಇದ್ದರೂ ಇದು ಒಟ್ಟರ್ಥದಲ್ಲಿ ಉಪ್ಪೂರರ ಭಾಗವತಿಕೆ ಮತ್ತು ಜೀವಂತಿಕೆಯನ್ನು ತೆರೆದಿಡುವ ಪುಸ್ತಕ. ನಾರ್ಣಪ್ಪ ಉಪ್ಪೂರರೇ ಬರೆದ ‘ಯಕ್ಷಗಾನ ಪಾಠಗಳು‘ ಮತ್ತು ‘ಯಕ್ಷಗಾನ ಪ್ರಸಂಗ ಸಾಹಿತ್ಯ’ ಎಂಬ ಎರಡು ಲೇಖನಗಳೂ ಇದರಲ್ಲಿವೆ. ಶ್ರೀಧರ ಉಪ್ಪೂರರು ಬರೆದ ‘ಗಾಂಧಾರ ಗ್ರಾಮ ಶೈಲಿ’ ಹಾಗೂ ಮದ್ದಳೆಗಾರ ಭಾಗವತನಿಗೆ ಹೆಂಡತಿಯೇ/ಶತ್ರುವೆ?‘ ಎಂಬ ಲೇಖನಗಳೂ ಯಕ್ಷಗಾನ ಕಲಾವಿದರಿಗೆ ಅಧ್ಯಯನಕ್ಕೆ ಯೋಗ್ಯವಾಗಿವೆ.

ಯಕ್ಷಗಾನದಲ್ಲಿ ಬದಲಾವಣೆ ಬೇಕು. ಆದರೆ ಸ್ವೇಚ್ಛೆಯಲ್ಲ ಎಂದು ಬಯಸುವವರೆಲ್ಲಾ ಓದಬಹುದಾದ ಮತ್ತು ಸಂಗ್ರಹಿಸಿಡಬಹುದಾದ ಗ್ರಂಥ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.