ADVERTISEMENT

ಸಮಕಾಲೀನ ಪರಿಸ್ಥಿತಿಗೆ ಹಿಡಿದ ಶತಮಾನದ ಕಾಲ್ಪನಿಕ ಕನ್ನಡಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 19:30 IST
Last Updated 28 ನವೆಂಬರ್ 2020, 19:30 IST
ಸ್ಕಾರ್ಲೆಟ್ ಪ್ಲೇಗ್
ಸ್ಕಾರ್ಲೆಟ್ ಪ್ಲೇಗ್   

ಹೆಸರು: ಸ್ಕಾರ್ಲೆಟ್ ಪ್ಲೇಗ್
ಮೂಲ: ಜಾಕ್ ಲಂಡನ್
ಕನ್ನಡಕ್ಕೆ: ಚನ್ನಪ್ಪ ಕಟ್ಟಿ
ಪು: 140 ಬೆ: ₹ 120
ಪ್ರಕಾಶನ: ಪಲ್ಲವ ಪ್ರಕಾಶನ, ಬಳ್ಳಾರಿ ದೂ: 8880087235

ಆಲ್ಬರ್ಟ್ ಕಮು ಬರೆದ ‘ದಿ ಪ್ಲೇಗ್’ ಕಾದಂಬರಿಯ ಕುರಿತ ಚರ್ಚೆಕೊರೊನಾ ಸಮಯದಲ್ಲಿ ಮುನ್ನೆಲೆಗೆ ಬಂದಿತ್ತು. ಮನುಕುಲವನ್ನು ಬೆಚ್ಚಿಬೀಳಿಸಿದ, ಅಪಾರ ಸಾವುನೋವಿಗೆ ಕಾರಣವಾಗಿ ನಾಗರಿಕತೆಯ ಚಲನೆಯನ್ನೇ ಕುಂಠಿತಗೊಳಿಸಿದ ಭೀಕರ ರೋಗ ಪ್ಲೇಗ್. ಇತಿಹಾಸದ ಪುಟಗಳಲ್ಲಿ ಅದನ್ನು ‘ಬ್ಲ್ಯಾಕ್ ಡೆತ್’ ಎಂದೇ ಗುರ್ತಿಸಲಾಗುತ್ತದೆ. ಇಂಥದ್ದೇ ಒಂದು ದುರಂತವನ್ನು ಚಿತ್ರಿಸುವ ಕೃತಿ ಜಾಕ್‌ ಲಂಡನ್ ಅವರು ಬರೆದ ‘ಸ್ಕಾರ್ಲೆಟ್ ಪ್ಲೇಗ್’.

ಹತ್ತೊಂಬತ್ತನೇ ಶತಮಾನದಲ್ಲಿ ಬಹುಜನಪ್ರಿಯರಾಗಿದ್ದ ಲೇಖಕ ಜಾಕ್ ಲಂಡನ್, ಪತ್ರಕರ್ತ, ಕವಿ, ಕತೆಗಾರ. ಪತ್ರಕರ್ತನಾಗಿಯಷ್ಟೇ ಅಲ್ಲ, ಸಮಾಜವಾದಿ ಹೋರಾಟಗಾರನಾಗಿಯೂ ಕೆಲಸ ಮಾಡಿದವರು. 1912ರಲ್ಲಿ ಈ ಕಾದಂಬರಿ ಪ್ರಕಟವಾಗಿದೆ. ಒಂದು ಮಹಾರೋಗಕ್ಕೆ ತುತ್ತಾಗಿ ಕ್ಯಾಲಿಫೋರ್ನಿಯಾ ಸಂಪೂರ್ಣ ನಾಶಗೊಳ್ಳುವ ಕಾಲ್ಪನಿಕ ಕಥೆಯನ್ನು ನಾಯಕ ಗ್ರ್ಯಾನ್ಸರ್‌ನ ಮೂಲಕ ಕೃತಿ ಕಾಣಿಸುತ್ತ ಹೋಗುತ್ತದೆ.

ADVERTISEMENT

‘ಕವಿ ಸಾಮಾನ್ಯ ಸಮಾಜಕ್ಕಿಂತಲೂ ಎರಡು ಹೆಜ್ಜೆ ಮುಂದಿರುತ್ತಾನೆ’ ಎಂಬ ಮಾತನ್ನು ಅಕ್ಷರಶಃವಾಗಿಯೂ, ಕಾಣ್ಕೆಯಲ್ಲಿಯೂ ಸಾಧಿಸಿಕೊಂಡಿರುವ ಕೃತಿಯಿದು. ಪ್ಲೇಗ್ ಎಂಬ ಭೀಕರ ರೋಗ ಮನುಷ್ಯಸಮಾಜವನ್ನು ಛಿದ್ರಗೊಳಿಸಿ ನುಂಗಿ ನೊಣೆಯುವ ದಾರುಣ ಕಥೆಯನ್ನು ಕಂಗೆಡಿಸುವ ಹಾಗೆ ಕಟ್ಟಿಕೊಡುವ ಈ ಕೃತಿ, ತನ್ನ ದುರಾಸೆಯ ಕಾರಣಕ್ಕೆ ಮತ್ತೆ ಮತ್ತೆ ಪ್ರಕೃತಿಯಿಂದ ತಪರಾಕಿ ತಿನ್ನುತ್ತಲೇ ಇರುತ್ತಾನೆ ಎಂಬ ಸತ್ಯವನ್ನೂ ಕಾಣಿಸುವ ಹಾಗಿದೆ.

ಪ್ರಕಟವಾದ ನೂರಾ ಎಂಟು ವರ್ಷಗಳ ನಂತರ ‘ಸ್ಕಾರ್ಲೆಟ್ ಪ್ಲೇಗ್’ ಕನ್ನಡಕ್ಕೆ ಬರುತ್ತಿರುವುದರ ಹಿಂದೆ ಸಾಹಿತ್ಯಪ್ರೀತಿಯ ಕಾರಣವಷ್ಟೇ ಇಲ್ಲ; ಸಮಕಾಲೀನ ಪರಿಸ್ಥಿತಿಯ ಚೋದನೆಯೂ ಇದೆ. ಚನ್ನಪ್ಪ ಕಟ್ಟಿ ಈ ಕೃತಿಯನ್ನು ಅನುವಾದಿಸಿದ್ದು ‘ಕೊರೊನಾ’ ರೋಗಕ್ಕೆ ಜಗತ್ತೇ ತಲ್ಲಣಿಸಿ, ಭಾರತದಲ್ಲಿಯೂ ಗೃಹಬಂಧನ ಜಾರಿಯಲ್ಲಿದ್ದ ಸಮಯದಲ್ಲಿ ಎಂಬುದನ್ನು ಗಮನಿಸಿದರೆ, ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವ ಈ ಕೃತಿಯಲ್ಲಿನ ಜೀವಶಕ್ತಿಯ ಅರಿವಾಗುತ್ತದೆ. ಟಿ.ಎಫ್. ಹಾದಿಮನಿ ಅವರ ಮುಖಪುಟ ವಿನ್ಯಾಸದಲ್ಲಿಯೂ, ಎಸ್.ದಿವಾಕರ್ ಅವರ ಮುನ್ನುಡಿಯಲ್ಲಿಯೂ ‘ಸ್ಕಾರ್ಲೆಟ್ ಪ್ಲೇಗ್’ನ ಸಮಕಾಲೀನ ಗುಣ ಪ್ರಸ್ತಾಪವಾಗಿದೆ.

ಮೂಲಕೃತಿ ಓದದ ಕನ್ನಡದ ಓದುಗರಿಗೆ ಸುಲಭವಾಗಿ ಓದಿಸಿಕೊಂಡು ಹೋಗುವ ರೀತಿಯಲ್ಲಿಯೇ ಕಟ್ಟಿ ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಆದರೆ ಈ ಸರಾಗ ಓದಿನ ನಡುವೆಯೂ ಕೆಲವು ವಾಕ್ಯಗಳು, ಶಬ್ದಗಳು ಕನ್ನಡದ ಜಾಯಮಾನಕ್ಕೆ ಪೂರ್ತಿ ಒಗ್ಗದೆ ಅಡಚಣೆ ಮಾಡುವುದೂ ಇದೆ. ‘ಇಂಥ ರೈಲು ಮಾರ್ಗದ ಗುಂಟ ಒಬ್ಬ ಮುದುಕ ಹಾಗೂ ಒಬ್ಬ ಹುಡುಗ ನಡೆದು ಹೊರಟಿದ್ದಾರೆ. ಅವರು ಅತೀ ನಿಧಾನವಾಗಿ ನಡೆಯುತ್ತಿದ್ದರು’ – ಇಲ್ಲಿ ಒಂದೇ ಕ್ರಿಯೆಯ ವಿವರಣೆಯಲ್ಲಿ ಒಂದು ವಾಕ್ಯ ವರ್ತಮಾನ ಕಾಲದಲ್ಲಿಯೂ, ಇನ್ನೊಂದು ಭೂತಕಾಲದಲ್ಲಿಯೂ ಬಂದಿದೆ. ಇವು ಓದಿನ ದಾರಿಯಲ್ಲಿ ಎದುರಾದ ಹಂಪ್‌ಗಳ ಹಾಗೆ ಭಾಸವಾಗುತ್ತವೆ. ‘ಸಹಜವಾದ ನಿಶ್ಚಲತೆಯ ಒಡಲೊಳಗೆ ಅಡಗಿರುವ ಶಬ್ದವನ್ನೂ ಕೇಳಿಸಿಕೊಳ್ಳಬಲ್ಲ ಶಕ್ತಿ ಅವನಿಗಿತ್ತು’ – ಇಂಗ್ಲಿಷಿನಲ್ಲಿ ಸಹಜವೆನಿಸುವ ಇಂಥ ವಾಕ್ಯಗಳು ಕನ್ನಡದ ಜಾಯಮಾನಕ್ಕೆ ಅಷ್ಟಾಗಿ ಒಗ್ಗಿಕೊಳ್ಳುವುದಿಲ್ಲ. ಅದೇ ವಾಕ್ಯವನ್ನು ಎರಡನೇ ಸಲ ಓದಿ ಮನನ ಮಾಡಿಕೊಳ್ಳಬೇಕಾಗುತ್ತದೆ.

ಇಂಥ ಕೆಲವು ದಾಟಿಕೊಂಡು ಹೋಗಬಹುದಾದ ಹಂಪ್‌ಗಳ ಹೊರತಾಗಿಯೂ ಈ ಕೃತಿ ಕನ್ನಡದ ಓದುಗರಿಗೆ ಖಂಡಿತ ಓದಿನ ಖುಷಿಯನ್ನೂ, ಬದುಕಿನ ದರ್ಶನವನ್ನೂ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.