ADVERTISEMENT

ಮೊದಲ ಓದು: ಸಾವಧಾನದ ಪ್ರಯೋಗಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 21:35 IST
Last Updated 21 ಫೆಬ್ರುವರಿ 2026, 21:35 IST
   

ಸಾಹಿತ್ಯದ ಬ್ಯಾಟನ್‌ಗಳನ್ನು ಕೊಡುತ್ತಾ ಬರುವ ರಿಲೇಗೆ ಕೊನೆಯೇ ಇರುವುದಿಲ್ಲ. ನಾಲ್ಕು ದಶಗಳಿಗೂ ಮೊದಲು ಲ್ಯಾಟಿನ್ ಅಮೆರಿಕನ್ ಸಾಹಿತ್ಯದ ರುಚಿ ಕಂಡಿದ್ದ ಹಿರಿಯ ಕಥೆಗಾರರಾದ ಎಸ್.ದಿವಾಕರ್ ಅವರು ತಮ್ಮ ಅಕ್ಷರ ಜಿಹ್ವಾನಂದವನ್ನು ಎಂ.ಎಸ್. ಶ್ರೀರಾಮ್ ಅವರಿಗೂ ದಾಟಿಸಿದರು. ಅದರ ಫಲವೇ ‘ನದಿಯ ಮೂರನೆಯ ದಂಡೆ’ ಅನುವಾದಿತ ಕೃತಿ. ಇದರಲ್ಲಿ ಲ್ಯಾಟಿನ್ ಅಮೆರಿಕದ ಮಹತ್ವದ ಸಾಹಿತಿಗಳ 21 ಅನುವಾದಿತ ಕತೆಗಳಿವೆ. ದಿವಾಕರ ಸದಾ ನೆನಪಿಸಿಕೊಳ್ಳುವ ಹೋರ್ಹೆ ಲೂಯಿಸ್ ಬೊರ್ಹೆಸ್ ಕತೆಯ ಅನುವಾದ ‘ಇನ್ನೂ ಬೇರೆ ವಿಷಯಗಳಿವೆ’ ಆಗಲೀ, ವಿರ್ಜಿಲಿಯೊ ಪಿನ್ಯೆರ ಬರೆದ ಕತೆಯ ಅನುವಾದ ‘ಮಾಂಸ’ ಆಗಲೀ ಈ ಸಂಕಲನದ ಎರಡು ಅಗುಳುಗಳು. ಇದು ಎಂತಹ ಅನ್ನದ ಬಟ್ಟಲು ಎನ್ನುವುದಕ್ಕೆ ಈ ಎರಡು ಅಗುಳುಗಳ ರುಚಿಯೇ ಸಾಕು. ಎಸ್ತೊಬಾನ್ ಎಚೆವೆರಿಯಾ, ಸೀಜಾ ವಲೆಹೊ, ಎನ್ರಿಕೆ ಅಮ್ರಿಮ್ ಮೊದಲಾದವರ ಆಸಕ್ತಿಕರ ಕಥಾಜಗತ್ತು ಈ ಸಂಕಲನದಲ್ಲಿ ಇದೆ. 

ಹುಟ್ಟೂರಿನಿಂದ ಬೇರೆ ದೇಶಕ್ಕೆ ತೆರಳಿದ ಲೇಖಕರು ತಮ್ಮ ಒಟ್ಟೂ ಪರಿಸರದ ಸಾಮಾಜಿಕ ನಿಷ್ಕರ್ಷೆ ಮಾಡುವ ಕ್ರಮವೇ ಆಸಕ್ತಿಕರ. ಲ್ಯಾಟಿನ್ ಅಮೆರಿಕ ಆ ಕಾಲಘಟ್ಟದಲ್ಲಿ ಆಧುನಿಕತೆಯನ್ನು ಇದಿರುಗೊಳ್ಳುವ ಸವಾಲನ್ನು ಎದುರಿಸಿತ್ತು. ಆ ಸಂದರ್ಭದ ಬೇಗುದಿ, ತವಕಗಳನ್ನು ಕಥಾ ಕೌಶಲದ ಮೂಲಕ ಸಾಹಿತಿಗಳು ಕಾಣಿಸಿರುವುದರಲ್ಲೇ ಹಲವು ಪ್ರಯೋಗಗಳಿವೆ.

ಎಂ.ಎಸ್. ಶ್ರೀರಾಮ್ ಬರೆದುಕೊಂಡಿರುವಂತೆ, ಕತೆಗಳ ಹೆಸರು ಸರಿಯಾದ ಉಚ್ಚಾರ ತಿದ್ದಲೆಂದೇ ಅವರು ದೀರ್ಘ ಸಮಯ ತೆಗೆದುಕೊಂಡಿದ್ದಾರೆ. ಕತೆಗಾರನ ಸಾವಧಾನಕ್ಕೆ ಇದೊಂದು ಉದಾರಹರಣೆಯಷ್ಟೆ. ಶ್ರೀರಾಮ್ ಅವರ ಅನುವಾದದ ಶೈಲಿ ಚೆನ್ನಾಗಿದೆ. ಕೆಲವು ಕತೆಗಳು ಒಳಗೆ ಇಳಿಯಬೇಕೆಂದರೆ ಮರುಓದು ಅತ್ಯಗತ್ಯ. ‘ಮಾಂಸ’ ಕತೆಯನ್ನೇ ಗಮನಿಸೋಣ. ಮನುಷ್ಯ ತನ್ನ ಅಂಗಗಳನ್ನೇ ತುಂಡಾಗಿಸಿ, ಖಾದ್ಯ ಮಾಡಿಕೊಂಡು ತಿನ್ನುವ ಎದೆ ಝಲ್ಲೆನ್ನಿಸುವ ರೂಪಕಗಳು ಅದರಲ್ಲಿ ಇಡುಕಿರಿದಿವೆ. ಅಲ್ಲದೇ ಈ ಕಥಾಜಗತ್ತು ಈ ಹೊತ್ತಿಗೂ ಯಾಕೆ ಮುಖ್ಯವೆಂದು ತಿಳಿಯುತ್ತದೆ.

ADVERTISEMENT

ನದಿಯ ಮೂರನೆಯ ದಂಡೆ ಲೇ: ಎಂ.ಎಸ್. ಶ್ರೀರಾಮ್‌ ಪ್ರ: ವೀರಲೋಕ ಸಂ: 7022122121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.